ಜೆರುಸಲೇಂ,ಇಸ್ರೇಲ್; ಇರಾನ್‌ನ ನಡೆಸಿದ ದಾಳಿಗೆ ತನ್ನ ದೇಶವು ಪ್ರತ್ಯುತ್ತರ ನೀಡಲಿದೆ ಎಂದು ಇಸ್ರೇಲ್‌ನ ಸೇನಾ ಮುಖ್ಯಸ್ಥರು ಸೋಮವಾರ ಘೋಷಿಸಿದ್ದಾರೆ. ಈ ನಡುವೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವಂತೆ ವಿಶ್ವನಾಯಕರು ಕರೆ ನೀಡಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಇರಾನ್ ವಿರುದ್ಧ ಯಾವಾಗ ಪ್ರತೀಕಾರ ಕೈಗೊಳ್ಳಲಿದೆ ಎಂಬುದರ ಬಗ್ಗೆ ಸೇನಾ ಮುಖ್ಯಸ್ಥರು ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ.
ಎರಡು ವಾರಗಳ ಹಿಂದೆ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಇರಾನಿನ ದೂತಾವಾಸ ಕಟ್ಟಡದ ಮೇಲೆ ಇಸ್ರೇಲ್ ದಾಳಿ ಮಾಡಿತ್ತು. ಈ ದಾಳಿ ವೇಳೆ ಇರಾನಿನ ಇಬ್ಬರು ಜನರಲ್‌ಗಳು ಮೃತಪಟ್ಟಿದ್ದರು. ಈ ಸಾವಿಗೆ ಪ್ರತೀಕಾರವಾಗಿ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿದೆ. 1979 ರ ಇಸ್ಲಾಮಿಕ್ ಕ್ರಾಂತಿಯ ಹಿಂದಿನ ದಶಕಗಳ ಹಗೆತನದ ನಂತರ ಇದೇ ಮೊದಲ ಬಾರಿಗೆ ಇರಾನ್ ಇಸ್ರೇಲ್ ಮೇಲೆ ನೇರ ಮಿಲಿಟರಿ ದಾಳಿ ಮಾಡಿದೆ. ಇರಾನ್ ಶನಿವಾರ ಇಸ್ರೇಲ್ ಮೇಲೆ ನೂರಾರು ಡ್ರೋನ್‌ಗಳು, ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ ಇರಾನ್‌ನ ಈ ದಾಳಿ ಇಸ್ರೇಲ್ ನ ಮೇಲೆ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗಿವೆ. ಏಕೆಂದರೆ 99 ಪ್ರತಿಶತ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಇಸ್ರೇಲ್ ತನ್ನ ಪ್ರತಿರಕ್ಷಣಾ ಉಪಕರಣ ಐರನ್ಡೋಮ್ ಹಾಗೂ ಅಮೆರಿಕದ ನೇತೃತ್ವದ ಪಾಲುದಾರರ ಒಕ್ಕೂಟದ ಸಮನ್ವಯದಿಂದ ತಡೆಹಿಡಿಯಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಇಸ್ರೇಲಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಮಾತನಾಡಿ, ಇಸ್ರೇಲ್ ಮುಂದೇನು ಮಾಡಬೇಕು ಎಂಬುದನ್ನು ಯೋಚಿಸುತ್ತಿದೆ. ಇರಾನ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ವಿವರಣೆ ನೀಡಿದ ಸೇನೆಯ ವಕ್ತಾರರು, ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ. ಇರಾನ್ ದಾಳಿಯಲ್ಲಿ ಇಸ್ರೇಲ್ ಲಘು ಹಾನಿಯನ್ನು ಅನುಭವಿಸಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ನಾಯಕರು ಪ್ರತೀಕಾರದ ಬಗ್ಗೆ ಸುಳಿವು ನೀಡಿದ್ದರೂ, ಇರಾನ್ ದಾಳಿಗೆ ಪ್ರತಿಯಾಗಿ ದಾಳಿ ಮಾಡುವುದು ಬೇಡ ಎಂಬ ಒತ್ತಡವನ್ನು ಅಂತಾರಾಷ್ಟ್ರೀಯ ಸಮುದಾಯ ಅಲ್ಅವಿವ್ ಮೇಲೆ ಹಾಕುತ್ತಿದೆ. ಮದ್ಯಪ್ರಾಚ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಇಸ್ರೇಲ್ ಸಂಯಮವನ್ನು ತೋರುವಂತೆ ಅಮೆರಿಕ ಹೇಳಿದೆ. ಈ ನಡುವೆ ಅಮೆರಿಕದ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಮಾತನಾಡಿ, ಯಾವುದೇ ನಿರ್ಧಾರ ಕೈಗೊಳ್ಳುವುದು ಇಸ್ರೇಲ್ಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಇದನ್ನು ಓದಿ: ಇರಾನ್ಗೆ ಎದಿರೇಟು ನೀಡಲು ಇಸ್ರೇಲ್ ತಂತ್ರ: 'ಆಕ್ರಮಣಕ್ಕೆ ಬೆಲೆ ತೆರಲೇಬೇಕು' ಎಂದ ವಿದೇಶಾಂಗ ಸಚಿವ - israel iran row