ಬೈರುತ್: ದಕ್ಷಿಣ ಮತ್ತು ಪೂರ್ವ ಲೆಬನಾನ್ನ ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಸುಮಾರು 60 ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ.
"ಇಸ್ರೇಲ್ ವಿಮಾನಗಳು ಗುರುವಾರ ಲೆಬನಾನ್ ಮೇಲೆ ಸುಮಾರು 150 ಕ್ಷಿಪಣಿಗಳನ್ನು ಹಾರಿಸಿವೆ" ಎಂದು ಮೂಲಗಳು ಹೇಳಿವೆ. "ತೀವ್ರ ದಾಳಿಯಿಂದ ಉಂಟಾದ ಸಾವುನೋವು ಮತ್ತು ಹಾನಿಯ ವಿವರ ಈವರೆಗೂ ತಿಳಿದು ಬಂದಿಲ್ಲ. ಇದು ಅಕ್ಟೋಬರ್ 8ರ ನಂತರ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ" ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ಗಳು ಧ್ವಂಸ: ಸುಮಾರು 1,000 ಬ್ಯಾರೆಲ್ಗಳನ್ನು ಒಳಗೊಂಡ 100 ರಾಕೆಟ್ ಲಾಂಚರ್ಗಳನ್ನು ತನ್ನ ವಾಯುಪಡೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಮಧ್ಯಾಹ್ನ ಪ್ರಾರಂಭವಾದ ತೀವ್ರಗತಿಯ ದಾಳಿಯು ಮಧ್ಯರಾತ್ರಿಗೆ ಮೊದಲು ಪೂರ್ಣಗೊಂಡಿದೆ ಎಂದು ಅದು ಘೋಷಿಸಿದೆ. ಇಸ್ರೇಲಿ ಯುದ್ಧ ವಿಮಾನಗಳು ರಾತ್ರೋರಾತ್ರಿ ಗಡಿಯ ಸಮೀಪವಿರುವ ಹಳ್ಳಿಗಳ ಮೇಲೆ ದಾಳಿ ನಡೆಸಿದವು ಮತ್ತು ವೈಮಾನಿಕ ದಾಳಿಗಳು ಗುರುವಾರ ಮಧ್ಯಾಹ್ನ ಪುನರಾರಂಭಗೊಂಡವು ಎಂದು ವರದಿಯಾಗಿದೆ. ಈ ದಾಳಿಯನ್ನು ಇಸ್ರೇಲ್ ಅಧಿಕೃತವಾಗಿ ದೃಢಪಡಿಸದಿದ್ದರೂ, ಇದು ಹಿಜ್ಬುಲ್ಲಾದ ಸಂಪರ್ಕ ಜಾಲವನ್ನು ಧ್ವಂಸಗೊಳಿಸಲು ಮೊಸ್ಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯ ಭಾಗವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಇಸ್ರೇಲ್ ಮೇಲೆ ಲೆಬನಾನ್ ಕಡೆಯಿಂದ ಹಿಜ್ಬುಲ್ಲಾ ಕೂಡ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್ನಿಂದ ಉತ್ತರ ಇಸ್ರೇಲ್ ಪ್ರದೇಶದ ಮೇಲೆ ಸುಮಾರು 50 ಕತ್ಯುಶಾ ರಾಕೆಟ್ಗಳನ್ನು ಉಡಾಯಿಸಲಾಗಿದೆ ಎಂದು ಲೆಬನಾನ್ ಮೂಲಗಳು ತಿಳಿಸಿವೆ. ಎರಡೂ ಕಡೆಗಳಿಂದ ಸಂಘರ್ಷ ತೀವ್ರಗೊಳ್ಳುತ್ತಿದ್ದರೂ ಪರಿಸ್ಥಿತಿಯು ಇನ್ನೂ ಪೂರ್ಣ ಪ್ರಮಾಣದ ಯುದ್ಧದ ಹಂತಕ್ಕೆ ತಲುಪಿಲ್ಲ ಎಂದು ವರದಿಗಳು ಹೇಳಿವೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಇಂದು: ಲೆಬನಾನ್ ನಲ್ಲಿ ಹಿಜ್ಬುಲ್ಲಾ ಉಗ್ರರ ಮೇಲೆ ನಡೆದ ಪೇಜರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಸಭೆ ಸೇರಲಿದೆ. ಈ ಕುರಿತು ಸಭೆ ನಡೆಸುವಂತೆ ಅರಬ್ ರಾಷ್ಟ್ರಗಳ ಪರವಾಗಿ ಅಲ್ಜೀರಿಯಾ ಕೋರಿತ್ತು.
ಇಸ್ರೇಲ್ ಪ್ರಧಾನಿ ಹತ್ಯೆಗೆ ಸಂಚು: ವರದಿಗಳ ಪ್ರಕಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಉನ್ನತ ಇಸ್ರೇಲಿ ಅಧಿಕಾರಿಗಳನ್ನು ಹತ್ಯೆ ಮಾಡಲು ಇರಾನ್ ರೂಪಿಸಿದ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಸ್ರೇಲ್ ತನ್ನದೇ ದೇಶದ ಉದ್ಯಮಿಯೋರ್ವನನ್ನು ಬಂಧಿಸಿದೆ.
ಇದನ್ನೂ ಓದಿ: ಲೆಬನಾನ್ ಪೇಜರ್, ವಾಕಿಟಾಕಿ ಸ್ಫೋಟದಲ್ಲಿ ಸತ್ತವರ ಸಂಖ್ಯೆ 37ಕ್ಕೆ ಏರಿಕೆ: 3 ಸಾವಿರ ಜನರಿಗೆ ಗಾಯ - pager explosions