ಜೆರುಸಲೇಂ : ಹಮಾಸ್ ವಶದಲ್ಲಿರುವ ಇಸ್ರೇಲ್ ಒತ್ತೆಯಾಳುಗಳ ಪೈಕಿ ನಾಲ್ವರನ್ನು ಇಸ್ರೇಲ್ ಸೈನ್ಯ ರಕ್ಷಿಸಿ ದೇಶಕ್ಕೆ ವಾಪಸು ಕರೆದುಕೊಂಡು ಬಂದಿದೆ. ಕಳೆದ ವರ್ಷ ಅಕ್ಟೋಬರ್ 7ರಿಂದ ಗಾಜಾದಲ್ಲಿ ಹಮಾಸ್ ವಶದಲ್ಲಿದ್ದ 25 ವರ್ಷದ ಯುವತಿ ನೋವಾ ಅರ್ಗಮಾನಿ ಸೇರಿದಂತೆ ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ತನ್ನ ಪಡೆಗಳು ಎರಡು ಪ್ರತ್ಯೇಕ ವಿಶೇಷ ಕಾರ್ಯಾಚರಣೆಗಳಲ್ಲಿ ರಕ್ಷಿಸಿವೆ ಎಂದು ಇಸ್ರೇಲ್ ಶನಿವಾರ ಪ್ರಕಟಿಸಿದೆ.
ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), ಇಸ್ರೇಲ್ ಭದ್ರತಾ ಸಂಸ್ಥೆ (ಐಎಸ್ಎ) ಮತ್ತು ಇಸ್ರೇಲ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅರ್ಗಮಾನಿ, ಅಲ್ಮೋಗ್ ಮೀರ್ ಜಾನ್ (21), ಆಂಡ್ರೆ ಕೊಜ್ಲೋವ್ (27) ಮತ್ತು ಶ್ಲೋಮಿ ಜಿವ್ (40) ಸೇರಿದಂತೆ ನಾಲ್ವರನ್ನು ನುಸೇರಾತ್ನ ಕೇಂದ್ರ ಭಾಗದ ಎರಡು ಪ್ರತ್ಯೇಕ ಸ್ಥಳಗಳಿಂದ ರಕ್ಷಿಸಲಾಗಿದೆ.
ನೋವಾ ಸಂಗೀತ ಉತ್ಸವದ ಮೇಲೆ ದಾಳಿ ಮಾಡಿದ್ದ ಹಮಾಸ್ ಉಗ್ರರು ಈ ನಾಲ್ವರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋಗಿದ್ದರು. ಕಳೆದ ಎಂಟು ತಿಂಗಳುಗಳಿಂದ ಇವರು ಹಮಾಸ್ ವಶದಲ್ಲಿದ್ದರು.
ದಾಳಿಯ ಸಮಯದಲ್ಲಿ ಮೋಟಾರುಬೈಕಿನಲ್ಲಿ ಬಂದ ಭಯೋತ್ಪಾದಕರು ಅರ್ಗಮಾನಿ ಅವರನ್ನು ಅಪಹರಿಸಿಕೊಂಡು ಹೋಗುತ್ತಿರುವ ಆಘಾತಕಾರಿ ವೀಡಿಯೊ ಪ್ರಪಂಚದಾದ್ಯಂತ ಭಾರಿ ಟೀಕೆಗೆ ಗುರಿಯಾಗಿತ್ತು. ಶನಿವಾರದ ರಕ್ಷಣಾ ಕಾರ್ಯಾಚರಣೆಯ ನಂತರ ದೇಶದ ರಕ್ಷಣಾ ಪಡೆಗಳು ಬಿಡುಗಡೆ ಮಾಡಿದ ಮೊದಲ ಚಿತ್ರಗಳಲ್ಲಿ, ಅರ್ಗಮಾನಿ ತನ್ನ ತಂದೆಯನ್ನು ನೋಡಿದ ತಕ್ಷಣ ಭಾವನಾತ್ಮಕವಾದ ದೃಶ್ಯಗಳು ಕಂಡು ಬಂದಿವೆ.
"ಬಿಡುಗಡೆಯಾದ ನಾಲ್ವರ ಆರೋಗ್ಯ ಉತ್ತಮವಾಗಿದೆ ಮತ್ತು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಗಾಗಿ ಅವರನ್ನು 'ಶೆಬಾ' ಟೆಲ್-ಹಶೋಮರ್ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ನಾವು ಎಲ್ಲ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಸುಮಾರು 250 ನಾಗರಿಕರನ್ನು ಅಪಹರಿಸಿತ್ತು. ನವೆಂಬರ್ ನಲ್ಲಿ ಒಂದು ವಾರದ ಕದನ ವಿರಾಮದಲ್ಲಿ ಸುಮಾರು ಅರ್ಧದಷ್ಟು ಜನರನ್ನು ಬಿಡುಗಡೆ ಮಾಡಲಾಯಿತು.
ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಲು ಕೇಂದ್ರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 210 ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಮಾತನಾಡಿದ ಅಲ್-ಅಕ್ಸಾ ಆಸ್ಪತ್ರೆಯ ನಿರ್ದೇಶಕ ಖಲೀಲ್ ಅಲ್-ದಕ್ರಾನ್, ನುಸೇರಾತ್ ಶಿಬಿರ ಮತ್ತು ದೇರ್ ಅಲ್-ಬಲಾಹ್ ನಗರದ ಮೇಲೆ ಇಸ್ರೇಲ್ ನಡೆಸಿದ ತೀವ್ರ ಬಾಂಬ್ ದಾಳಿಯಿಂದಾಗಿ ಗಾಯಗೊಂಡ ಬಹುತೇಕ ಪ್ಯಾಲೆಸ್ಟೈನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಉತ್ತರ ಗಾಜಾದಲ್ಲಿ ಪರಿಹಾರ ಸಾಮಗ್ರಿಗಳ ಏರ್ ಡ್ರಾಪಿಂಗ್ ಮುಂದುವರಿಸಿದ ಈಜಿಪ್ಟ್ ಸೇನೆ - Israel Hamas War