ಗಾಜಾ, ಪ್ಯಾಲೆಸ್ಟೈನ್: ಉತ್ತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 15 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಸ್ರೇಲ್ನ ಯುದ್ಧವಿಮಾನಗಳು ಗುರುವಾರ ಮಧ್ಯಾಹ್ನ ಬೀಟ್ ಲಾಹಿಯಾ ಪಟ್ಟಣದಲ್ಲಿರುವ ವಸತಿ ಗೃಹವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಹೇಳಿದ್ದಾರೆ.
ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 15 ಜನರು ಅಸುನೀಗಿದ್ದಾರೆ ಎಂದು ಗಾಜಾದಲ್ಲಿ ಸಿವಿಲ್ ಡಿಫೆನ್ಸ್ ವಕ್ತಾರ ಮಹಮೂದ್ ಬಾಸಲ್ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಹೇಳಿದೆ.
ಗುರುವಾರ ಗಾಜಾದಲ್ಲಿನ ನಾಗರಿಕ ರಕ್ಷಣಾ ಜನರಲ್ ಡೈರೆಕ್ಟರೇಟ್, ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಸೈನ್ಯವು ಮಾನವೀಯ ಪ್ರದೇಶ ಎಂದು ಗೊತ್ತುಪಡಿಸಿದ ಸ್ಥಳಾಂತರಗೊಂಡ ನಾಗರಿಕರಿಗೆ ಒದಗಿಸುವ ಸೇವೆಗಳು ಮತ್ತು ಮಾನವೀಯ ಮಧ್ಯಸ್ಥಿಕೆಗಳ ಸಂಭವನೀಯ ಕಾರ್ಯವನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದೆ. ಮಾನವೀಯ ಪ್ರದೇಶದಲ್ಲಿ ಇಂಧನ ಕೊರತೆಯಿಂದಾಗಿ ನಾಗರಿಕ ರಕ್ಷಣಾ ವ್ಯವಸ್ಥೆ ಬಿಕ್ಕಟ್ಟಿಗೆ ಒಳಗಾಗಿದ್ದು. ಸಮಸ್ಯೆಗಳಿದ್ದ ಬಳಲುತ್ತಿದ್ದಾರೆ ಎಂದು ಗಾಜಾದಲ್ಲಿ ನಾಗರಿಕ ರಕ್ಷಣಾ ಪೂರೈಕೆ ನಿರ್ದೇಶಕ ಮುಹಮ್ಮದ್ ಅಲ್ - ಮುಗೈರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂಧನ ಪೂರೈಕೆಯ ನಿರಂತರ ತಡೆಗಟ್ಟುವಿಕೆಯಿಂದಾಗಿ ನಾಗರಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಸ್ಥಳಾಂತರಗೊಂಡ ಸಾವಿರಾರು ಜನರು ಇಸ್ರೇಲ್ನ ಈ ಕ್ರಮದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್ ಗಡಿಯ ಮೂಲಕ ಹಮಾಸ್ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು ಮತ್ತು ಸುಮಾರು 250 ಇಸ್ರೇಲಿಗರನ್ನು ಹಮಾಸ್ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆ ಗಾಜಾಪಟ್ಟಿಯ ಮೇಲೆ ಮುಗಿ ಬಿದ್ದಿತ್ತು. ಅಷ್ಟೇ ಅಲ್ಲ ಹಮಾಸ್ ನಿರ್ನಾಮಕ್ಕೆ ಪಣತೊಟ್ಟಿದೆ. 2023ರ ಅಕ್ಟೋಬರ್ನಲ್ಲಿ ಆರಂಭವಾದ ಯುದ್ಧ ಇದುವರೆಗೂ ನಿಂತಿಲ್ಲ. ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್ ದಾಳಿಯಿಂದ ಪ್ಯಾಲೆಸ್ಟೈನ್ ನಾಗರಿಕರ ಸಾವಿನ ಸಂಖ್ಯೆ 44,580 ಕ್ಕೆ ಏರಿದೆ ಎಂದು ಗಾಜಾ ಮೂಲದ ಆರೋಗ್ಯ ಅಧಿಕಾರಿಗಳು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಪೋಪ್ ಫ್ರಾನ್ಸಿಸ್ಗೆ ಮೊದಲ ವಿದ್ಯುತ್ ಚಾಲಿತ ಹೊಸ ಮರ್ಸಿಡಿಸ್-ಬೆನ್ಜ್ ಹಸ್ತಾಂತರ