ಬೈರುತ್, ಲೆಬನಾನ್: ಮಧ್ಯ ಬೈರುತ್‌ನಲ್ಲಿ ಗುರುವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಂದಿ ಅಸು ನೀಗಿದ್ದಾರೆ. ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಜೊತೆಗೆ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾಗಳೊಂದಿಗೆ ಇಸ್ರೇಲ್ ಸೈನಿಕರು ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ.
ಸೆಂಟ್ರಲ್ ಬೈರುತ್‌ನ ಮೇಲಿನ ಈ ವಾಯುದಾಳಿ ಒಂದು ವರ್ಷದಲ್ಲಿ ಅತಿ ಹೆಚ್ಚು ಮಾರಣಾಂತಿಕವಾಗಿದೆ ಎಂದು ವರದಿಯಾಗಿದೆ. ಮಧ್ಯ ಬೈರುತ್ ಮೇಲೆ ಏಕಕಾಲದಲ್ಲಿ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ದಾಳಿ ನಡೆಸುತ್ತಿದೆ. ವೈಮಾನಿಕ ದಾಳಿಯಲ್ಲಿ ಎಂಟು ಅಂತಸ್ತಿನ ಕಟ್ಟಡವನ್ನು ದ್ವಂಸಗೊಳಿಸಲಾಗಿದೆ ಎಂದು ಎಪಿ ಛಾಯಾಗ್ರಾಹಕ ಹೇಳಿದ್ದಾರೆ.
ಈ ನಡುವೆ ಹೆಜ್ಬುಲ್ಲಾದ ಉನ್ನತ ಭದ್ರತಾ ಅಧಿಕಾರಿ ವಫೀಕ್ ಸಫಾ ಅವರನ್ನು ಕೊಲ್ಲುವ ಪ್ರಯತ್ನ ವಿಫಲವಾಗಿದೆ ಎಂದು ಹಿಜ್ಬುಲ್ಲಾದ ಅಲ್ ಮನರ್ ಟಿವಿ ವರದಿ ಮಾಡಿದೆ. ಉದ್ದೇಶಿತ ಎರಡೂ ಕಟ್ಟಡಗಳ ಒಳಗೆ ಸಫಾ ಇರಲಿಲ್ಲ ಎಂದು ಅದು ಹೇಳಿದೆ. ಈ ವರದಿಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ಗುರುವಾರದ ದಾಳಿ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಒಂದು ವರ್ಷದ ಭೀಕರ ದಾಳಿ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗುತ್ತಿದೆ. ಇಸ್ರೇಲ್ ಲೆಬನಾನ್‌ನಾದ್ಯಂತ ಭಾರಿ ದಾಳಿಯ ಅಲೆಗಳನ್ನು ಸೃಷ್ಟಿಸಿದೆ. ಇನ್ನು ಹೆಜ್ಬುಲ್ಲಾ ಕೂಡಾ ಇಸ್ರೇಲ್‌ನ ಜನನಿಬಿಡ ಪ್ರದೇಶಗಳ ಮೇಲೆ ರಾಕೆಟ್ ದಾಳಿಯನ್ನು ನಡೆಸುತ್ತಿದೆ. ಇದು ಕೆಲವು ಸಾವುನೋವುಗಳಿಗೆ ಕಾರಣವಾಗಿದೆ.
ವಿಶ್ವಸಂಸ್ಥೆಯ ಶಾಂತಿ ಪಾಲಕರ ಮೇಲೆಯೂ ಗುಂಡಿನ ದಾಳಿ: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳು ವಿಶ್ವಸಂಸ್ಥೆಯ ಶಾಂತಿಪಾಲಕರ ಮೇಲೆ ಗುಂಡು ಹಾರಿಸಿ ಅವರಲ್ಲಿ ಇಬ್ಬರನ್ನು ಗಾಯಗೊಳಿಸಿದೆ. ಈ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಇಟಲಿಯ ರಕ್ಷಣಾ ಸಚಿವಾಲಯವು ಇಸ್ರೇಲ್‌ನ ರಾಯಭಾರಿಯನ್ನು ಪ್ರತಿಭಟನೆಗೆ ಕರೆಸುವಂತೆ ಒತ್ತಾಯಿಸಿದೆ.
ರಾಸ್ ಅಲ್-ನಬಾ ನೆರೆಹೊರೆ ಮತ್ತು ಬುರ್ಜ್ ಅಬಿ ಹೈದರ್ ಪ್ರದೇಶದಲ್ಲಿ ಎರಡು ಕಟ್ಟಡಗಳ ಅವಶೇಷಗಳಡಿ ಹೆಚ್ಚಿನ ಸಂಖ್ಯೆಯ ಆಂಬ್ಯುಲೆನ್ಸ್‌ಗಳು ಮತ್ತು ಜನರು ಸೇರುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ಈ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಮತ್ತು 117 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಈಗಾಗಲೇ ಹಿಜ್ಬುಲ್ಲಾದ ನಾಯಕ, ಹಸನ್ ನಸ್ರಲ್ಲಾಹ್ ಮತ್ತು ಇತರ ಹಿರಿಯ ಕಮಾಂಡರ್‌ಗಳನ್ನು ಇಸ್ರೇಲ್ ಸೇನೆ ಕೊಂದು ಹಾಕಿದೆ.
ಇದನ್ನು ಓದಿ: ದಕ್ಷಿಣ ಕೊರಿಯಾದ ಲೇಖಕಿ ಹನ್ ಕಾಂಗ್ರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ಗರಿ