ಟೆಲ್ ಅವೀವ್ : ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದಕ್ಕೆ ಬರಲು ಕೈರೋದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳ ಮಧ್ಯೆ, ಹಮಾಸ್ ಮಿಲಿಟರಿ ಕಮಾಂಡರ್ ಯಾಹ್ಯಾ ಸಿನ್ವರ್ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳನ್ನು ಇಸ್ರೇಲ್ ತೀವ್ರಗೊಳಿಸಿದೆ. ಯಾಹ್ಯಾ ಸಿನ್ವರ್ ಅಕ್ಟೋಬರ್ 7 ರಂದು ಇಸ್ರೇಲ್ನಲ್ಲಿ ನಡೆದ ಹತ್ಯಾಕಾಂಡದ ರೂವಾರಿ ಎಂದು ಹೇಳಲಾಗಿದೆ.
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಸಿನ್ವರ್ ಅವರನ್ನು ಕೊಲ್ಲಬೇಕೇ ಅಥವಾ ಜೀವಂತವಾಗಿ ಹಿಡಿಯಬೇಕೇ ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಸಿನ್ವರ್ ಅವರನ್ನು ಕೊಲ್ಲುವುದು ಮೊದಲ ಆದ್ಯತೆಯಾಗಿರಬೇಕು ಎಂದು ಉನ್ನತ ಸೇನೆ ಮತ್ತು ಗುಪ್ತಚರ ಅಧಿಕಾರಿಗಳಿಗೆ ರಕ್ಷಣಾ ಸಚಿವರು ತಿಳಿಸಿದ್ದಾರೆ.
ಗಾಜಾದ ರಫಾ ಪ್ರದೇಶದಲ್ಲಿ ಇಸ್ರೇಲಿ ಒತ್ತೆಯಾಳುಗಳ ಮಧ್ಯೆ ಸಿನ್ವರ್ ಮತ್ತು ಮೊಹಮ್ಮದ್ ದೀಫ್ ಅಡಗಿದ್ದಾರೆ ಎಂದು ವರದಿಯಾಗಿದೆ. ಐಡಿಎಫ್ ದಾಳಿಯನ್ನು ತಡೆಗಟ್ಟಲು ಇವರಿಬ್ಬರು ಕೆಲ ಇಸ್ರೇಲಿ ಒತ್ತೆಯಾಳುಗಳೊಂದಿಗೆ ಒಂದು ಸುರಂಗದಿಂದ ಇನ್ನೊಂದಕ್ಕೆ ಚಲಿಸುತ್ತಿದ್ದಾರೆ ಎಂದು ಇಸ್ರೇಲಿ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಐಡಿಎಫ್ ಕೆಲ ದಿನಗಳ ಹಿಂದೆ ಸಿನ್ವರ್ ಅವರ ತೀರಾ ಹತ್ತಿರಕ್ಕೆ ತಲುಪಿತ್ತು ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಗ್ಯಾಲಂಟ್ ಕರೆದ ಸಭೆಯಲ್ಲಿ ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಾಚಿ ಹನೆಗ್ಬಿ, ಶಿನ್ ಬೆಟ್ ಮುಖ್ಯಸ್ಥ ರೋನೆನ್ ಬಾರ್ ಮತ್ತು ಹಲವಾರು ಉನ್ನತ ಇಸ್ರೇಲಿ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು.
ಯುದ್ಧ ನಿಲುಗಡೆ ಸಾಧ್ಯವಿಲ್ಲ: ಗಾಜಾದಲ್ಲಿ ಯುದ್ಧ ಕೊನೆಗೊಳಿಸಬೇಕೆಂಬ ಹಮಾಸ್ ಬೇಡಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಪಾದಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
"ಹಮಾಸ್ ಬೆಟಾಲಿಯನ್ಗಳು ತಮ್ಮ ಬಂಕರ್ಗಳಿಂದ ಹೊರಬಂದು ಗಾಜಾವನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮತ್ತು ಸುತ್ತಮುತ್ತಲಿನ ಸಮುದಾಯಗಳಲ್ಲಿ, ದಕ್ಷಿಣದ ನಗರಗಳಲ್ಲಿ, ದೇಶದ ಎಲ್ಲಾ ಭಾಗಗಳಲ್ಲಿ ಮಿಲಿಟರಿ ಮೂಲಸೌಕರ್ಯವನ್ನು ಪುನರ್ನಿರ್ಮಿಸಿ ಮತ್ತೊಮ್ಮೆ ಇಸ್ರೇಲ್ ನಾಗರಿಕರಿಗೆ ಬೆದರಿಕೆ ಹಾಕುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ" ಎಂದು ಅವರು ಹೇಳಿದರು. ಈಜಿಪ್ಟ್ನ ಕೈರೊದಲ್ಲಿ ಶಾಂತಿ ಮಾತುಕತೆಗಳು ನಡೆದಿರುವ ಮಧ್ಯದಲ್ಲೇ ಇಸ್ರೇಲ್ ಪ್ರಧಾನಿಯ ಹೇಳಿಕೆ ಬಂದಿರುವುದು ಗಮನಾರ್ಹ.
ಇದನ್ನೂ ಓದಿ : ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣ: ಕೆನಡಾದಲ್ಲಿ ಭಾರತೀಯ ಮೂಲದ ಮೂವರ ಬಂಧನ - Nijjar Murder Case