ಟೆಲ್ ಅವಿವ್ (ಇಸ್ರೇಲ್): ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದ ಉತ್ತರದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 11 ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೈನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ - ಫರಾ ನಿರಾಶ್ರಿತರ ಶಿಬಿರದ ಮೇಲೆ ನಡೆದ ವಾಯು ದಾಳಿಯಲ್ಲಿ ಐವರು ಮತ್ತು ಜೆನಿನ್ನಲ್ಲಿ ಡ್ರೋನ್ ದಾಳಿ ಮತ್ತು ಸಶಸ್ತ್ರ ಘರ್ಷಣೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜೆನಿನ್ ಮತ್ತು ತುಲ್ಕರ್ಮ್ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಭದ್ರತಾ ಪಡೆ ಈ ದಾಳಿಗಳನ್ನು ಸಮರ್ಥಿಸಿಕೊಂಡಿದೆ. ಜೆನಿನ್, ತುಲ್ಕರ್ಮ್, ನಬ್ಲುಸ್ ಮತ್ತು ಟುಬಾಸ್ ಈ ನಾಲ್ಕು ಪ್ಯಾಲೆಸ್ಟೈನ್ ನಗರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಇಸ್ರೇಲ್ ಮತ್ತೊಂದು ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದೆ.
2000 ರಿಂದ 2005 ರವರೆಗೆ ನಡೆದ ಪ್ರಮುಖ ಪ್ಯಾಲೆಸ್ಟೈನ್ ದಂಗೆಯಾದ ಎರಡನೇ ಇಂತಿಫಾಡಾದ ನಂತರ ಇದೇ ಮೊದಲ ಬಾರಿಗೆ ಹಲವಾರು ಪ್ಯಾಲೆಸ್ಟೈನ್ ನಗರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಜೆನಿನ್ ನಗರದ ನಿರಾಶ್ರಿತರ ಶಿಬಿರದಲ್ಲಿ ಸಶಸ್ತ್ರ ಘರ್ಷಣೆಗಳು ನಡೆದಿದ್ದು, ನಗರದೊಳಗೆ ಹೋಗುವ ಮುಖ್ಯ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. ಬೆಳಗಿನ ಸಮಯದಲ್ಲಿ ಹತ್ತಿರದ ಹಳ್ಳಿಯೊಂದರಲ್ಲಿನ ವಾಹನದ ಮೇಲೆ ಇಸ್ರೇಲ್ ದಾಳಿ ಮಾಡಿದೆ.
ಇಸ್ರೇಲಿ ಪಡೆಗಳು ಜೆನಿನ್ನ ಆಸ್ಪತ್ರೆಯೊಳಗೆ ಪ್ರವೇಶಿಸಿವೆ ಮತ್ತು ತುಲ್ಕರ್ಮ್ನಲ್ಲಿನ ಎರಡು ಆಸ್ಪತ್ರೆಗಳನ್ನು ಬಂದ್ ಮಾಡಿವೆ ಎಂದು ಹೇಳಲಾಗಿದೆ. ನಬ್ಲುಸ್ ನಲ್ಲಿನ ಎರಡು ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ಮುಖ್ಯವಾಗಿ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಜೆನಿನ್ ಮತ್ತು ತುಲ್ಕರ್ಮ್ ನಿರಾಶ್ರಿತರ ಶಿಬಿರಗಳಲ್ಲಿನ ಇರಾನ್-ಇಸ್ಲಾಮಿಕ್ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಲು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಕಳೆದ ರಾತ್ರಿಯಿಂದ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ಸಶಸ್ತ್ರ ಗುಂಪುಗಳಾದ ಹಮಾಸ್ ಮತ್ತು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಅನ್ನು ಬೆಂಬಲಿಸುವ ಮೂಲಕ ಇರಾನ್, ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲ್ ವಿರುದ್ಧ ಹೊಸ ಯುದ್ಧದ ವೇದಿಕೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಆದರೆ, ಇಸ್ರೇಲಿ ಮಿಲಿಟರಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ಐಡಿಎಫ್, ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ ಮತ್ತು ಇಸ್ರೇಲ್ ಗಡಿ ಪೊಲೀಸ್ ಪಡೆಗಳು ಜೆನಿನ್ ಮತ್ತು ತುಲ್ಕರ್ಮ್ನಲ್ಲಿ ಪ್ರಸ್ತುತ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಈಜಿಪ್ಟ್ನ ಪಶ್ಚಿಮ ಮರುಭೂಮಿಯಲ್ಲಿ ಹೊಸ ಪೆಟ್ರೋಲಿಯಂ ನಿಕ್ಷೇಪ ಪತ್ತೆ - new oil discovery