ಕಠ್ಮಂಡು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ ವತಿಯಿಂದ ಪೋಖರಾದ ಸಾರಂಗೋಟ್ ವ್ಯೂ ಪಾಯಿಂಟ್, ಪುಮ್ಡಿಕೋಟ್ನಲ್ಲಿರುವ ಶಿವ ದೇವಾಲಯ, ರಾಯಭಾರ ಕಚೇರಿ ಬಳಿಯ ಶಾಂತಿ ಸ್ತೂಪದಲ್ಲಿ ಯೋಗ ಪ್ರದರ್ಶನ ಆಯೋಜಿಸಿತು. ಪ್ರಶಾಂತವಾದ ವಾತಾವರಣ, ಆಧ್ಯಾತ್ಮಿಕತೆಯ ಜೊತೆಗೆ ಈ ಮೂರು ಸ್ಥಳಗಳ ಉತ್ತಮ ವ್ಯೂನಲ್ಲಿ ಯೋಗ ಪ್ರದರ್ಶನ ನಡೆಯಿತು.


"ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ" ಎನ್ನುವ ಈ ಬಾರಿಯ ಧ್ಯೇಯವಾಕ್ಯಕ್ಕೆ ಅನುಗುಣವಾಗಿ, ಸರ್ಕಾರಿ ಅಧಿಕಾರಿಗಳು, ಸ್ಥಳೀಯ ನಾಗರಿಕರು ಮತ್ತು ಯೋಗ ಉತ್ಸಾಹಿಗಳನ್ನು ಒಳಗೊಂಡಂತೆ ಹಲವರು ಈ ಪುರಾತನ ಯೋಗಾಭ್ಯಾಸದ ಪ್ರಯೋಜನಗಳನ್ನು ಪಡೆದರು ಎಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಹುಟ್ಟಿದ ಪ್ರಾಚೀನವಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾದ ಯೋಗವನ್ನು ಇಂದು ವಿಶ್ವದಾದ್ಯಂತ ಜನರು ವಿವಿಧ ರೂಪಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಪ್ರಪಂಚದಾದ್ಯಂತ ಜನಪ್ರಿಯತೆ ಕಂಡುಕೊಂಡಿದೆ. ಯೋಗ ಜನಪ್ರಿಯತೆ ಹಾಗೂ ಪ್ರಾಮುಖ್ಯತೆಯನ್ನು ಗುರುತಿಸಿ, 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯು 69/131 ನಿರ್ಣಯದ ಮೂಲಕ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು.

ಈ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯೊಂದಿಗೆ, ಯೋಗಾಭ್ಯಾಸದ ಅನೇಕ ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ; 7,000 ಜನರೊಂದಿಗೆ ನಾಳೆ ಯೋಗ ದಿನಾಚರಣೆ - PM Modi Mega Yoga Event