ಇಂಡಿಯಾನಾ (ಅಮೆರಿಕ): ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾದ ವಾರೆನ್ ಕೌಂಟಿಯಲ್ಲಿ ಭಾರತ ಮೂಲದ 23 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಮೀರ್ ಕಾಮತ್ ಎಂಬಾತ ತಲೆಗೆ ಗುಂಡು ಹಾರಿಸಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಫೆ. 5 ರಂದು ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಇಂಡಿಯಾನಾದ ವಿಲಿಯಮ್ಸ್‌ಪೋರ್ಟ್‌ನಲ್ಲಿರುವ ನೆಕ್ಸ್ ಲ್ಯಾಂಡ್ ಟ್ರಸ್ಟ್ - ಕ್ರೌಸ್ ಗ್ರೋವ್‌ನ ಅರಣ್ಯ ಪ್ರದೇಶದಲ್ಲಿ ಸಮೀರ್ ಕಾಮತ್ ಶವ ಪತ್ತೆಯಾಗಿದೆ. ಫೆ. 6 ರಂದು ಇಂಡಿಯಾನಾದ ಕ್ರಾಫೋರ್ಡ್ಸ್ ವಿಲ್ಲೆಯಲ್ಲಿ ಶವಪರೀಕ್ಷೆ ಮಾಡಲಾಗಿದೆ ಎಂದು ವಾರೆನ್ ಕೌಂಟಿ ಕರೋನರ್ ಕಚೇರಿಯ ಕರೋನರ್ ಜಸ್ಟಿನ್ ಬ್ರಮ್ಮೆಟ್ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಪತ್ರಿಕೆ 'ದಿ ಪರ್ಡ್ಯೂ ಎಕ್ಸ್‌ಪೋನೆಂಟ್‌ನಲ್ಲಿನ ವರದಿಯ ಪ್ರಕಾರ, ಕಾಮತ್ ಅವರು ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಅಭ್ಯರ್ಥಿಯಾಗಿದ್ದರು. ಕಾಮತ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಖ್ಯಸ್ಥ ಎಕಾರ್ಡ್ ಗ್ರೋಲ್ ಅವರು ಮಂಗಳವಾರ ಮಧ್ಯಾಹ್ನ ಧೃಡಪಡಿಸಿದ್ದಾರೆ. 2021 ರಲ್ಲಿ ಮೆಸ್ಯಾಚುಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಮೀರ್ ಕಾಮತ್ ಪರ್ಡ್ಯೂಗೆ ಬಂದಿದ್ದರು. ಮುಂಬರುವ 2025 ರಲ್ಲಿ ಡಾಕ್ಟರೇಟ್ ಪದವಿ ಪಡೆಯಬೇಕಿತ್ತು ಎಂದು ತಿಳಿಸಿದೆ.
ಎರಡು ತಿಂಗಳ ಅವಧಿಯಲ್ಲಿ ಭಾರತ ಮೂಲದ ಐದು ವಿಧ್ಯಾರ್ಥಿಗಳು ಸಾವು : ಈ ವರ್ಷ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪಿಸಿದ ಐದನೇ ಘಟನೆ ಇದಾಗಿದೆ. ಜೊತೆಗೆ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಈವರೆಗೆ ಪತ್ತೆಯಾದ ಎರಡು ಶವಗಳು ಭಾರತ ಮೂಲದ ವಿದ್ಯಾರ್ಥಿಗಳದ್ದು ಎಂಬುದು ಅಚ್ಚರಿ ಉಂಟು ಮಾಡಿದೆ.
ಕಳೆದ ವಾರ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ವಿದ್ಯಾರ್ಥಿಯಾಗಿದ್ದ ಶ್ರೇಯನ್ ರೆಡ್ಡಿ ಎಂಬುವವರು ಓಹಿಯೋದ ಸಿನ್ಸಿನಾಟಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೇ ಸಾವಿಗೆ ಕಾರಣ ಈವರೆಗೂ ತಿಳಿದು ಬಂದಿಲ್ಲ. ಇದಕ್ಕೂ ಮುನ್ನ ವಿವೇಕ್ ಸೈನಿ ಮತ್ತು ನೀಲ್ ಆಚಾರ್ಯ ಕೂಡ ಒಂದೇ ವಾರದಲ್ಲಿ ಶವವಾಗಿ ಪತ್ತೆಯಾಗಿದ್ದರು.
ನೀಲ್ ಆಚಾರ್ಯ ಕೂಡ ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಜನವರಿ 30 ರಂದು ಕ್ಯಾಂಪಸ್‌ನಲ್ಲಿ ಆತನ ಶವ ಪತ್ತೆಯಾಗಿತ್ತು. ಜನವರಿ 29 ರಂದು ಅಮೇರಿಕದ ಜಾರ್ಜಿಯಾದ ಲಿಥೋನಿಯಾದ ಅಂಗಡಿಯೊಂದರಲ್ಲಿ ಅಪರಿಚಿತರು ಸುತ್ತಿಗೆಯಿಂದ ಹೊಡೆದು ವಿವೇಕ್ ಸೈನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಇನ್ನು ಜನವರಿ 20 ರಂದು 18 ವರ್ಷದ ಭಾರತೀಯ -ಅಮೆರಿಕನ್ ವಿದ್ಯಾರ್ಥಿ ಅಕುಲ್ ಧವನ್ ಎಂಬುವವರು ಶವ ಇಲಿನಾಯ್ಸ್ ವಿಶ್ವವಿದ್ಯಾಲಯದ ಬಳಿ ಪತ್ತೆಯಾಗಿತ್ತು.
ಇದನ್ನೂ ಓದಿ : ದೆಹಲಿಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಶವ ಪತ್ತೆ