ಟೆಲ್ ಅವೀವ್: ವೆಸ್ಟ್ ಬ್ಯಾಂಕ್ ಕಡೆಯಿಂದ ಇಸ್ರೇಲ್ ಗಡಿಯಲ್ಲಿನ ವಸತಿ ಪ್ರದೇಶದ ಮೇಲೆ ಹಮಾಸ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಬಗ್ಗೆ ಹಮಾಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಸ್ವಯಂಚಾಲಿತ ಬಂದೂಕುಗಳನ್ನು ಹೊಂದಿರುವ ಮೂವರು ವ್ಯಕ್ತಿಗಳು ವೆಸ್ಟ್ ಬ್ಯಾಂಕ್ ಕಡೆಯಿಂದ ಇಸ್ರೇಲಿ ವಸತಿ ಪ್ರದೇಶದ ಮೇಲೆ ಹಲವಾರು ಸುತ್ತು ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಹಮಾಸ್ನಿಂದ ದಾಳಿಗೊಳಗಾದ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಪ್ರತ್ಯೇಕಿಸುವ ತಡೆಗೋಡೆಯ ಬಳಿ ಇರುವ ಬ್ಯಾಟ್ ಹೆಫರ್ ಎಂಬ ಹಳ್ಳಿಯಲ್ಲಿ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ ಎಂದು ಇಸ್ರೇಲ್ನ ಆರ್ಮಿ ರೇಡಿಯೋ ವರದಿ ಮಾಡಿದೆ. ಹಮಾಸ್ ಹೆಡ್ ಬ್ಯಾಂಡ್ ಧರಿಸಿರುವ ದಾಳಿಕೋರರು ವೆಸ್ಟ್ ಬ್ಯಾಂಕ್ನ ಪ್ಯಾಲೆಸ್ಟೈನ್ ನಗರ ತುಲ್ಕರ್ಮ್ನ ನಿರಾಶ್ರಿತರ ಶಿಬಿರಗಳ ನಿವಾಸಿಗಳು ಎನ್ನಲಾಗಿದೆ. ಇಸ್ರೇಲಿ ಸೇನೆಯು ತುಲ್ಕರ್ಮ್ ಮತ್ತು ವೆಸ್ಟ್ ಬ್ಯಾಂಕ್ನ ಇತರ ಪ್ಯಾಲೆಸ್ಟೈನ್ ಪಟ್ಟಣಗಳು ಮತ್ತು ನಗರಗಳ ಮೇಲೆ ಪದೇ ಪದೆ ದಾಳಿ ನಡೆಸುತ್ತಿರುವ ಮಧ್ಯೆ ಹಮಾಸ್ ಉಗ್ರರು ಮತ್ತೊಮ್ಮೆ ಇಸ್ರೇಲ್ ಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ.
ರಫಾ ಮೇಲಿನ ದಾಳಿಗೆ ಸೌದಿ ಅರೇಬಿಯಾ ಖಂಡನೆ: ದಕ್ಷಿಣ ಗಾಜಾ ಪಟ್ಟಿಯ ರಫಾ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿದೆ. "ರಫಾದಲ್ಲಿನ ಅಮಾಯಕ ಪ್ಯಾಲೆಸ್ಟೈನ್ ನಿರಾಶ್ರಿತರ ಡೇರೆಗಳ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲಿ ಪಡೆಗಳ ನಿರಂತರ ಹತ್ಯಾಕಾಂಡಗಳನ್ನು ರಿಯಾದ್ ಖಂಡಿಸುತ್ತದೆ. ರಫಾ ಮತ್ತು ಆಕ್ರಮಿತ ಪ್ಯಾಲೆಸ್ಟೈನ್ನಲ್ಲಿ ನಡೆಯುತ್ತಿರುವ ಪ್ರಾಣ ಹಾನಿಗಳಿಗೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಗಾರನಾಗಿದೆ." ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸಂಘರ್ಷಕ್ಕೆ ಅಮೆರಿಕವೇ ಕಾರಣ: ಗಾಜಾ ಪಟ್ಟಿಯ ದಕ್ಷಿಣದ ತುದಿಯಲ್ಲಿರುವ ರಫಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಮೆರಿಕ ಸರ್ಕಾರವೇ ಕಾರಣ ಎಂದು ಪ್ಯಾಲೆಸ್ಟೈನ್ ಅಧ್ಯಕ್ಷೀಯ ವಕ್ತಾರ ನಬಿಲ್ ಅಬು ರುಡಿನೆಹ್ ಆರೋಪಿಸಿದ್ದಾರೆ.
"ರಫಾ ಮತ್ತು ಗಾಜಾದಾದ್ಯಂತದ ಪರಿಸ್ಥಿತಿಗೆ ಅಮೆರಿಕ ಆಡಳಿತವೇ ಸಂಪೂರ್ಣವಾಗಿ ಜವಾಬ್ದಾರನಾಗಿದೆ" ಎಂದು ಅಬು ರುಡಿನೆಹ್ ರಮಲ್ಲಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇಸ್ರೇಲ್ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಉಲ್ಲಂಘಿಸುತ್ತ ಗಾಜಾ ನಗರದಲ್ಲಿ ಮನುಷ್ಯರು ವಾಸಿಸಲು ಸಾಧ್ಯವಾಗದಂಥ ವಿನಾಶ ಎಸಗಿದ್ದಾರೆ ಎಂದು ಅವರು ಆರೋಪಿಸಿದರು. ಇಸ್ರೇಲ್ ಪದೇ ಪದೆ ದಾಳಿ ನಡೆಸುತ್ತಿದ್ದರೂ ಅಮೆರಿಕ ಮೌನವಾಗಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ವ್ಯಾಪಕವಾದ ಅಂತಾರಾಷ್ಟ್ರೀಯ ವಿರೋಧದ ಹೊರತಾಗಿಯೂ ಇಸ್ರೇಲ್ಗೆ ಯುನೈಟೆಡ್ ಸ್ಟೇಟ್ಸ್ ಒದಗಿಸಿದ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಬೆಂಬಲವೇ ಇಸ್ರೇಲ್ ಆಕ್ರಮಣ ಮುಂದುವರಿಸಲು ಕಾರಣವಾಗಿವೆ ಅಬು ರುಡಿನೆಹ್ ಆರೋಪಿಸಿದರು.