ಟೆಹ್ರಾನ್(ಇರಾನ್): ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ. ಮಂಗಳವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆಹ್ ಟೆಹ್ರಾನ್‌ಗೆ ಬಂದಿದ್ದರು ಎಂದು ವರದಿಯಾಗಿದೆ.
ಟೆಹ್ರಾನ್‌ನಲ್ಲಿರುವ ಹನಿಯೆಹ್ ನಿವಾಸದ ಮೇಲೆ ನಡೆದ ವಿಶ್ವಾಸಘಾತುಕ ಜಿಯೋನಿಸ್ಟ್ ವೈಮಾನಿಕ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. ಈ ಘಟನೆಗೆ ಇಸ್ರೇಲ್ ಅನ್ನು ದೂಷಿಸಿದೆ. ಮತ್ತೊಂದೆಡೆ, ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏಪ್ರಿಲ್ನಲ್ಲಿ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಹನಿಯೆಹ್ ಕುಟುಂಬದ 13 ಸದಸ್ಯರು ಮೃತಪಟ್ಟಿದ್ದರು.
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ಭೀಕರ ದಾಳಿ ಮಾಡಿತ್ತು. ಇದರಲ್ಲಿ 1,200 ಜನರು ಸಾವನ್ನಪ್ಪಿದ್ದರು. ಸುಮಾರು 250 ಜನರನ್ನು ಒತ್ತೆಯಾಳುಗಳನ್ನಾಗಿ ಹಮಾಸ್ ಇರಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದ್ದು, ಹನಿಯೆಹ್ ಮತ್ತು ಹಮಾಸ್‌ನ ಇತರ ನಾಯಕರನ್ನು ಸರ್ವನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ.
ಇದರ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೆಹ್ರಾನ್‌ಗೆ ಬಂದಿದ್ದ ಹನಿಯೆಹ್ ಕೊಲೆಯಾಗಿದ್ದಾರೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಸುದ್ದಿ ವೆಬ್‌ಸೈಟ್ ಈ ಬಗ್ಗೆ ವರದಿ ಮಾಡಿದ್ದು, ಹಮಾಸ್ ಇಸ್ಲಾಮಿಕ್ ರೆಸಿಸ್ಟೆನ್ಸ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಅವರ ಅಂಗರಕ್ಷಕರಲ್ಲಿ ಒಬ್ಬರು ಹತರಾಗಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ರಷ್ಯಾ-ಉತ್ತರ ಕೊರಿಯಾ ರಕ್ಷಣಾ ಒಪ್ಪಂದ ಜಗತ್ತಿಗೆ ಅಪಾಯಕಾರಿ: ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ