ಬೈರುತ್: ಲೆಬನಾನ್ನಲ್ಲಿ ಇಸ್ರೇಲಿ ಸೇನಾ ಪಡೆಗಳು ರವಿವಾರ ನಡೆಸಿದ ಬಾಂಬ್ ದಾಳಿಯಲ್ಲಿ ಮೂವರು ಹಿಜ್ಬುಲ್ಲಾ ಸದಸ್ಯರು ಹಾಗೂ ಅಮಾಲ್ ಮೂವ್ಮೆಂಟ್ನ ಓರ್ವ ಸದಸ್ಯ ಮೃತಪಟ್ಟಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ. ಲೆಬನಾನ್ನ ಗಡಿ ಪ್ರದೇಶದ ಅಲ್-ತಿರಿ ಎಂಬ ಗ್ರಾಮದಲ್ಲಿನ ಮನೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಿಲಿಟರಿ ಮೂಲಗಳು ತಿಳಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೆಬನಾನ್ನ ದೇರ್ ಸೆರಿಯನ್ ಹೊರವಲಯದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮತ್ತೊಬ್ಬ ಹಿಜ್ಬುಲ್ಲಾ ಸದಸ್ಯ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಇದಲ್ಲದೆ, ಆಗ್ನೇಯದಲ್ಲಿರುವ ಖಿಯಾಮ್ ಎಂಬ ಹಳ್ಳಿಯಲ್ಲಿ ಕಾರಿನ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಅಮಾಲ್ ಮೂವ್ಮೆಂಟ್ನ ಸದಸ್ಯನೊಬ್ಬ ಸಾವನ್ನಪ್ಪಿದ್ದಾನೆ.
ಲೆಬನಾನ್ನ ಟೈರ್ ನಗರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಸ್ಥಳಾಂತರಗೊಂಡ ಸಿರಿಯನ್ ಸೇರಿದಂತೆ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ನೂರಾರು ಡ್ರೋನ್ಗಳು ಮತ್ತು ರಾಕೆಟ್ಗಳೊಂದಿಗೆ ಹಿಜ್ಬುಲ್ಲಾ ಭಾನುವಾರ ನಡೆಸಿದ ದೊಡ್ಡ ಪ್ರಮಾಣದ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಈ ದಾಳಿಗಳನ್ನು ನಡೆಸಿದೆ. ವಿವಿಧ ಸ್ಥಾನಗಳಿಂದ ಇಸ್ರೇಲ್ನ ಪ್ರದೇಶದೊಳಗೆ ಡ್ರೋನ್ಗಳು ಮತ್ತು ರಾಕೆಟ್ಗಳನ್ನು ಉಡಾಯಿಸಿದ್ದು, ಅವು ಲೆಬನಾನ್-ಪ್ಯಾಲೆಸ್ಟೈನ್ ಗಡಿಯನ್ನು ದಾಟಿ ತನ್ನ ಉದ್ದೇಶಿತ ಗುರಿಗಳಿಗೆ ತಲುಪಿವೆ ಎಂದು ಹಿಜ್ಬುಲ್ಲಾ ಹೇಳಿಕೆಯಲ್ಲಿ ದೃಢಪಡಿಸಿದೆ.
ಇಸ್ರೇಲ್ನ ಬೃಹತ್ ದಾಳಿಯ ನಂತರ ಲೆಬನಾನ್ ಪ್ರಧಾನಿ ನಜೀಬ್ ಮಿಕಾಟಿ ತುರ್ತು ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇಸ್ರೇಲ್ನ ಆಕ್ರಮಣವನ್ನು ನಿಲ್ಲಿಸಲು ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಬ್ಲೂ ಲೈನ್ ಉದ್ದಕ್ಕೂ ಯುದ್ಧ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಎರಡೂ ಕಡೆಯವರು ಕದನ ವಿರಾಮ ಘೋಷಿಸಬೇಕೆಂದು ಲೆಬನಾನ್ನಲ್ಲಿ ನಿಯೋಜಿತವಾಗಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ (ಯುಎನ್ಐಎಲ್) ಮತ್ತು ಲೆಬನಾನ್ಗಾಗಿ ವಿಶ್ವಸಂಸ್ಥೆಯ ವಿಶೇಷ ಸಂಯೋಜಕರ ಕಚೇರಿ (ಯುಎನ್ಎಸ್ಸಿಒಎಲ್) ಗಳು ಜಂಟಿ ಹೇಳಿಕೆಯಲ್ಲಿ ಮನವಿ ಮಾಡಿವೆ. ಜುಲೈ 30 ರಂದು ಬೈರುತ್ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಫವಾದ್ ಶುಕೂರ್ ಸೇರಿದಂತೆ ಏಳು ಹಿಜ್ಬುಲ್ಲಾ ಸದಸ್ಯರು ಸಾವನ್ನಪ್ಪಿದ್ದರು.
ಇದನ್ನೂ ಓದಿ : ಹಿಜ್ಬುಲ್ಲಾ ಉಗ್ರರಿಂದ ಸಂಭಾವ್ಯ ದಾಳಿ: ಇಸ್ರೇಲ್ನಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಜಾರಿ - Israel Hezbollah War