ವಾಷಿಂಗ್ಟನ್: ಜೋ ಬೈಡನ್ ಅವರ ಅಧಿಕಾರಾವಧಿ ಕೊನೆಯಾಗುವ ಮುನ್ನವೇ ತಾವು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಎಫ್ಬಿಐ ಡೈರೆಕ್ಟರ್ ಕ್ರಿಸ್ಟೋಫರ್ ವ್ರೇ ಬುಧವಾರ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಮುಂದಿನ ಎಫ್ಬಿಐ ಡೈರೆಕ್ಟರ್ ಎಂದು ನಾಮನಿರ್ದೇಶಿತಗೊಂಡಿರುವ ಕಶ್ಯಪ್ ಕಾಶ್ ಪಟೇಲ್ ಹಾದಿ ಸುಗಮವಾಗಲಿದೆ.
"ಜನವರಿಯಲ್ಲಿ ಈ ಸರ್ಕಾರದ ಆಡಳಿತಾವಧಿಯ ಅಂತ್ಯದವರೆಗೆ ನಾನು ಸೇವೆ ಸಲ್ಲಿಸಿ ಹುದ್ದೆಯಿಂದ ಕೆಳಗಿಳಿಯುವುದು ಸಂಸ್ಥೆಯ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಿದೆ" ಎಂದು ವ್ರೇ ಟೌನ್ ಹಾಲ್ ಮೀಟಿಂಗ್ನಲ್ಲಿ ತಮ್ಮ ಎಫ್ಬಿಐ ಉದ್ಯೋಗಿಗಳಿಗೆ ತಿಳಿಸಿದ್ದಾರೆ. "ನಾವು ಇಲ್ಲಿ ನಮ್ಮ ಕೆಲಸ ಮಾಡುವಾಗ ಬಹಳ ಮುಖ್ಯವಾಗಿ ಬೇಕಾದ ಮೌಲ್ಯಗಳು ಮತ್ತು ತತ್ವಗಳನ್ನು ಬಿಡದೇ ಬ್ಯೂರೋದಲ್ಲಿ ಯಾವುದೇ ಸಂಘರ್ಷ ಉಂಟಾಗದಂತೆ ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ" ಎಂದು ಅವರು ಹೇಳಿದ್ದಾರೆ.
ವ್ರೇ ಅವರ 10 ವರ್ಷಗಳ ಅಧಿಕಾರಾವಧಿಯಲ್ಲಿ ಇನ್ನೂ ಮೂರು ವರ್ಷ ಬಾಕಿ ಇವೆ. ಆದರೆ ಟ್ರಂಪ್ ಪಟೇಲ್ ಅವರನ್ನು ಎಫ್ಬಿಐ ಮುಖ್ಯಸ್ಥರ ಹುದ್ದೆಗೆ ನಾಮನಿರ್ದೇಶನ ಮಾಡಿದ ಕಚೇರಿಯಲ್ಲಿ ವ್ರೇ ಅವರ ಸ್ಥಾನಮಾನ ದುರ್ಬಲವಾಗಿದೆ. ಆದಾಗ್ಯೂ ನಿಯೋಜಿತ ಅಧ್ಯಕ್ಷ ಟ್ರಂಪ್ ವ್ರೇ ಅವರು ರಾಜೀನಾಮೆ ನೀಡಬೇಕೆಂದು ಹೇಳಿಲ್ಲ ಮತ್ತು ಜನವರಿ 20 ರಂದು ಪ್ರಮಾಣವಚನ ಸ್ವೀಕರಿಸಿದ ನಂತರ ಅವರನ್ನು ವಜಾಗೊಳಿಸಲಿದ್ದಾರೆಯೇ ಎಂಬುದನ್ನೂ ಸ್ಪಷ್ಟಪಡಿಸಿಲ್ಲ.
ಟ್ರಂಪ್ ಪ್ರತಿಕ್ರಿಯೆ: "ಕ್ರಿಸ್ಟೋಫರ್ ವ್ರೇ ಅವರ ರಾಜೀನಾಮೆ ಅಮೆರಿಕಕ್ಕೆ ಉತ್ತಮ ದಿನವಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಇಂಜಸ್ಟಿಸ್ ಎಂದು ಕರೆಯಲಾಗುವ ಅನ್ಯಾಯವನ್ನು ಕೊನೆಗೊಳಿಸಲಿದೆ" ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್ನಲ್ಲಿ ಬರೆದಿದ್ದಾರೆ.
"ಅವರಿಗೆ ಏನಾಗಿದೆ ಎಂಬುದು ನನಗೆ ತಿಳಿದಿಲ್ಲ. ನಾವು ಈಗ ಎಲ್ಲಾ ಅಮೆರಿಕನ್ನರಿಗೆ ಕಾನೂನಿನ ನಿಯಮವನ್ನು ಪುನಃಸ್ಥಾಪಿಸುತ್ತೇವೆ. ಕ್ರಿಸ್ಟೋಫರ್ ವ್ರೇ ಅವರ ನಾಯಕತ್ವದಲ್ಲಿ ಎಫ್ಬಿಐ ಯಾವುದೇ ಕಾರಣವಿಲ್ಲದೆ ನನ್ನ ಮನೆಯ ಮೇಲೆ ಕಾನೂನುಬಾಹಿರವಾಗಿ ದಾಳಿ ಮಾಡಿತ್ತು. ಕಾನೂನುಬಾಹಿರವಾಗಿ ನನಗೆ ವಾಗ್ದಂಡನೆ ವಿಧಿಸಲು ಸಾಕಷ್ಟು ಯತ್ನಿಸಿತ್ತು ಮತ್ತು ನನ್ನ ಮೇಲೆ ಆರೋಪ ಹೊರಿಸಿತ್ತು. ಅಲ್ಲದೇ ಅಮೆರಿಕದ ಯಶಸ್ಸು ಮತ್ತು ಭವಿಷ್ಯ ಹಾಳು ಮಾಡಲು ಎಲ್ಲ ರೀತಿಯ ಹಸ್ತಕ್ಷೇಪ ಮಾಡಿದೆ" ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ವ್ರೇ ಅವರನ್ನು ಎಫ್ಬಿಐ ನಿರ್ದೇಶಕರನ್ನಾಗಿ ಮಾಡಿದ್ದು ಟ್ರಂಪ್ ಎಂಬುದು ಗಮನಾರ್ಹ. ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಅವರನ್ನು ನೇಮಿಸಿದ್ದರು. ಆದರೆ ವ್ರೇ ಅವರ ನಾಯಕತ್ವದಲ್ಲಿ ಎಫ್ಬಿಐ ಟ್ರಂಪ್ ವಿರುದ್ಧ ಹಲವಾರು ತನಿಖೆಗಳನ್ನು ಪ್ರಾರಂಭಿಸಿತು ಮತ್ತು ರಹಸ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಅವರ ಫ್ಲೋರಿಡಾ ನಿವಾಸದ ಮೇಲೆ ದಾಳಿಯನ್ನೂ ನಡೆಸಿತ್ತು.
ಇದನ್ನೂ ಓದಿ : ಬಂಡುಕೋರರ ತೆಕ್ಕೆಗೆ ಸಿರಿಯಾ: ಇರಾನ್, ರಷ್ಯಾಗೆ ಮರ್ಮಾಘಾತ - ಇಸ್ರೇಲ್ಗೆ ಮುಕ್ತ ಹಸ್ತ