ವಾಶಿಂಗ್ಟನ್ : ಕಳೆದ ವರ್ಷದ ಆಗಸ್ಟ್ನಿಂದ ಚೀನಾದಲ್ಲಿ ಕಾರ್ಮಿಕ ಪ್ರತಿಭಟನೆಗಳು ತೀವ್ರಗತಿಯಲ್ಲಿ ಹೆಚ್ಚಾಗಿವೆ ಎಂದು ಮಾನವ ಹಕ್ಕು ಸಂಘಟನೆಗಳು ತಿಳಿಸಿವೆ. ನ್ಯೂಯಾರ್ಕ್ ಮೂಲದ ಅಂತರರಾಷ್ಟ್ರೀಯ ಹಕ್ಕುಗಳ ಗುಂಪು ಫ್ರೀಡಂ ಹೌಸ್ನ ಚೀನಾ ಡಿಸೆಂಟ್ ಮಾನಿಟರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2022 ರ ಇದೇ ಅವಧಿಗೆ ಹೋಲಿಸಿದರೆ 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಮಿಕ ಪ್ರತಿಭಟನೆಗಳು ಮೂರು ಪಟ್ಟು ಹೆಚ್ಚಾಗಿವೆ ಎಂದು ವಿಒಎ ವರದಿ ಮಾಡಿದೆ.
ಕಳಪೆ ಕೆಲಸದ ಪರಿಸ್ಥಿತಿಗಳು ಮತ್ತು ಚೀನಾದ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಕಾರ್ಮಿಕ ಪ್ರತಿಭಟನೆಗಳು ಭುಗಿಲೆದ್ದಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಚೀನಾ ಅಸಮ್ಮತಿ ಮಾನಿಟರ್ (China Dissent Monitor) 2023 ರ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವೆ ಚೀನಾದಲ್ಲಿ 777 ಕಾರ್ಮಿಕ ಪ್ರತಿಭಟನೆಗಳು ನಡೆದಿರುವುದಾಗಿ ಹೇಳಿದೆ. 2022 ರ ಇದೇ ಅವಧಿಯಲ್ಲಿ 245 ಪ್ರತಿಭಟನೆಗಳು ನಡೆದಿದ್ದವು.
ಚೀನಾದ ಕಾರ್ಮಿಕರ ಹಕ್ಕುಗಳ ಬಗ್ಗೆ ಹೋರಾಡುವ ಹಾಂಗ್ ಕಾಂಗ್ ಮೂಲದ ಚೀನಾ ಲೇಬರ್ ಬುಲೆಟಿನ್ನ ಸ್ವತಂತ್ರ ದತ್ತಾಂಶವು 2024 ರ ಜನವರಿ 1 ಮತ್ತು ಫೆಬ್ರವರಿ 3 ರ ನಡುವೆ ಹೆಚ್ಚುವರಿ 183 ಪ್ರತಿಭಟನೆಗಳು ನಡೆದಿರುವುದನ್ನು ದಾಖಲಿಸಿದೆ. ಇದರ ಪೈಕಿ ಗುವಾಂಗ್ಡಾಂಗ್ ಪ್ರಾಂತ್ಯವೊಂದರಲ್ಲಿಯೇ 40 ಪ್ರತಿಭಟನೆಗಳು ನಡೆದಿವೆ ಎಂದು ವಿಒಎ ವರದಿ ಮಾಡಿದೆ.
ಕಾರ್ಮಿಕರ ಪ್ರತಿಭಟನೆಗಳು ಹೆಚ್ಚಾಗಿ ವೇತನ ವಿವಾದಗಳು ಮತ್ತು ಔದ್ಯೋಗಿಕ ಸುರಕ್ಷತೆಗೆ ಸಂಬಂಧಿಸಿವೆ ಎಂದು ಚೀನಾ ಡಿಸೆಂಟ್ ಮಾನಿಟರ್ ನೇತೃತ್ವ ವಹಿಸಿರುವ ಕೆವಿನ್ ಸ್ಲಾಟನ್ ಹೇಳಿದ್ದಾರೆ.
ಚೀನಾದ ಆರ್ಥಿಕ ಕುಸಿತದ ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಬಿಕ್ಕಟ್ಟು ಮತ್ತು ಕಡಿಮೆ ಉತ್ಪಾದನೆಯೂ ಒಂದು ಅಂಶವಾಗಿದೆ ಎಂದು ಚೀನಾದ ಕಾರ್ಮಿಕ ಚಳವಳಿಯನ್ನು ಬೆಂಬಲಿಸುವ ನ್ಯೂಯಾರ್ಕ್ ಮೂಲದ ಚೀನಾ ಲೇಬರ್ ವಾಚ್ನ (China Labour Watch) ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಲಿ ಕಿಯಾಂಗ್ ಹೇಳಿದ್ದಾರೆ ಎಂದು ವಿಒಎ ವರದಿ ಮಾಡಿದೆ.
"ಚೀನಾದ ಉನ್ನತ ಮಟ್ಟದ ಆರ್ಥಿಕ ಸಮಸ್ಯೆಗಳು ಅಂತಿಮವಾಗಿ ಈ ವರ್ಷ ಕಾರ್ಮಿಕ ಪ್ರತಿಭಟನೆಗಳ ಹೆಚ್ಚಳಕ್ಕೆ ಕಾರಣವಾಗಿವೆ. ಉತ್ಪಾದನಾ ಆರ್ಡರ್ಗಳ ಇಳಿಕೆಯಿಂದಾಗಿ ಇತರ ವಿಷಯಗಳ ಜೊತೆಗೆ ಬಹಳಷ್ಟು ಕಂಪನಿಗಳು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ" ಎಂದು ವಿಒಎ ವರದಿ ಮಾಡಿದೆ.
ಇದನ್ನೂ ಓದಿ : ನೆತನ್ಯಾಹು ವಿರುದ್ಧ ಇಸ್ರೇಲಿಗರ ಪ್ರತಿಭಟನೆ: ಅವಧಿಪೂರ್ವ ಚುನಾವಣೆ ತಿರಸ್ಕರಿಸಿದ ಪ್ರಧಾನಿ