ವಿನಾ ಡೆಲ್ ಮಾರ್: ''ಚಿಲಿಯಲ್ಲಿ ದಿನೇ ದಿನೇ ಏರುತ್ತಿರುವ ತಾಪಮಾನದಿಂದಾಗಿ ಕಾಡ್ಗಿಚ್ಚು ಉಂಟಾಗಿದೆ. ಬೆಂಕಿ ನಿರಂತರವಾಗಿ ಹಬ್ಬುತ್ತಿದ್ದು ಈವರೆಗೆ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರಿಗೆ ಗಾಯಗಳಾಗಿವೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಸುಮಾರು 1,100 ಮನೆಗಳು ಬೆಂಕಿಗೆ ಆಹುತಿಯಾಗಿವೆ'' ಎಂದು ಚಿಲಿ ಅಧ್ಯಕ್ಷ ಬೋರಿಕ್ ಗೇಬ್ರಿಯಲ್ ಅವರು ಶನಿವಾರ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ದೂರದರ್ಶನದಲ್ಲಿ ಮಾತನಾಡಿದ ಅವರು, "ವಾಲ್ಪಾರೈಸೊ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಬೆಂಕಿಯ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಅಗ್ನಿಶಾಮಕ ದಳದವರು ಯುದ್ಧೋಪಾದಿಯಲ್ಲಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಜನರು ಸಹಕರಿಸಬೇಕು. ಬೆಂಕಿ ಅತ್ಯಂತ ವೇಗವಾಗಿ ಹರಡುತ್ತಿದೆ. ಹವಾಮಾನ ವೈಪರೀತ್ಯದಿಂದ ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ" ಎಂದು ಅವರು ತಿಳಿಸಿದರು.
ಹೆಚ್ಚುತ್ತಿರುವ ತಾಪಮಾನ, ಜೋರಾದ ಗಾಳಿ, ಕಡಿಮೆ ಆರ್ದ್ರತೆಯಿಂದ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತಿದೆ. ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸುಮಾರು 92 ಕಡೆಗಳಲ್ಲಿ ಬೆಂಕಿ ಹಬ್ಬುತ್ತಿದೆ ಎಂದು ಸಚಿವ ಕೆರೊಲಿನಾ ಬಹಿರಂಗಪಡಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿರುವ ವಾಲ್ಪಾರೈಸೊ ಪ್ರದೇಶದಿಂದ ಈಗಾಗಲೇ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ವಾಲ್ಪಾರಾಸೊ ಪ್ರದೇಶದಲ್ಲಿ ಬೆಂಕಿಯ ಆರ್ಭಟ ತೀವ್ರವಾಗಿದೆ. ಅಲ್ಲಿರುವ ಅಧಿಕಾರಿಗಳು, ಮನೆಗಳಲ್ಲಿದ್ದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಒತ್ತಾಯಿಸಿದ್ದಾರೆ. ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಇತರ ತುರ್ತು ವಾಹನಗಳು ರಸ್ತೆಗಳಲ್ಲಿ ಬೀಡುಬಿಟ್ಟಿವೆ. ದನರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಶುಕ್ರವಾರದಿಂದ ಕ್ವಿಲ್ಪು ಮತ್ತು ವಿಲ್ಲಾ ಅಲೆಮಾನಾ ಪಟ್ಟಣಗಳ ಬಳಿ ಕಾಡ್ಗಿಚ್ಚಿನಿಂದ ಕನಿಷ್ಠ 8,000 ಹೆಕ್ಟೇರ್ (19,770 ಎಕರೆ) ಸುಟ್ಟುಹೋಗಿದೆ. ಕರಾವಳಿಯ ರೆಸಾರ್ಟ್ ಪಟ್ಟಣವಾದ ವಯಾ ಡೆಲ್ ಮಾರ್ನತ್ತ ಬೆಂಕಿ ಹಬ್ಬುತ್ತಿದೆ. ಅಲ್ಲಿನ ಕೆಲವು ಪ್ರದೇಶಗಳನ್ನು ಈಗಾಗಲೇ ಬೆಂಕಿ ಆವರಿಸಿಕೊಂಡಿದೆ.
ಕಾಡ್ಗಿಚ್ಚಿನಿಂದ ಮನೆಗಳು ನಾಶ: ವಿಲ್ಲಾ ಇಂಡಿಪೆಂಡೆನ್ಸಿಯಾದಲ್ಲಿ ಪಟ್ಟಣದ ಪೂರ್ವ ಅಂಚಿನಲ್ಲಿರುವ ಬೆಟ್ಟ ಹಾಗೂ ಹಲವಾರು ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಹಲವು ಕಾರುಗಳು ಸುಟ್ಟು ಕರಕಲಾಗಿವೆ.
''ನಾನು 32 ವರ್ಷಗಳಿಂದ ಇಲ್ಲಿದ್ದೇನೆ. ಇಂಥ ಕಾಡ್ಗಿಚ್ಚು ಸಂಭವಿಸುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ'' ಎಂದು ಮನೆ ಕಳೆದುಕೊಂಡ ನಿವಾಸಿಗಳಲ್ಲಿ ಒಬ್ಬರಾದ ರೊಲಾಂಡೋ ಫೆರ್ನಾಂಡಿಸ್ ದುಃಖ ತೋಡಿಕೊಂಡರು.
''ಶುಕ್ರವಾರ ಮಧ್ಯಾಹ್ನ ಸಮೀಪದ ಗುಡ್ಡದಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿದೆ. 15 ನಿಮಿಷಗಳಲ್ಲಿ ಆ ಪ್ರದೇಶ ಬೆಂಕಿ ಮತ್ತು ಹೊಗೆಯಿಂದ ಆವರಿಸಿತು. ಎಲ್ಲರೂ ಅಪಾಯದಿಂದ ಪಾರಾಗಲು ಓಡಿಹೋದೆವು. ನಾನು ನನ್ನ ಜೀವಮಾನವಿಡೀ ಕೆಲಸ ಮಾಡಿ ಸಂಪಾದನೆ ಮಾಡಿ ಮನೆ ನಿರ್ಮಿಸಿಕೊಂಡಿದ್ದೆ. ಈಗ ನನಗೇನೂ ಉಳಿದಿಲ್ಲ'' ಎಂದು ಹೇಳಿದರು.
ವಾಲ್ಪಾರಾಸೊ ಪ್ರದೇಶದಲ್ಲಿ ಮೂರು ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದೆ. 19 ಹೆಲಿಕಾಪ್ಟರ್‌ಗಳು ಮತ್ತು 450ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ವಯಾ ಡೆಲ್ ಮಾರ್‌ನ ಅಂಚಿನಲ್ಲಿ ಪರ್ವತದ ಪ್ರದೇಶಗಳಲ್ಲಿ ಮೇಲೆ ಬೆಂಕಿಯ ಆರ್ಭಟ ಹೆಚ್ಚಾಗಿರುವುದರಿಂದ ವಿದ್ಯುತ್ ಸಂಪರ್ಕವೂ ಕಡಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಲ್ಪಾರಾಸೊ ಪ್ರದೇಶದಲ್ಲಿ ನಾಲ್ಕು ಆಸ್ಪತ್ರೆಗಳು ಮತ್ತು ಮೂರು ನರ್ಸಿಂಗ್ ಹೋಮ್ಗಳಿವೆ. ವೃದ್ಧರ ಮನೆಗಳನ್ನು ಸ್ಥಳಾಂತರ ಮಾಡಬೇಕಿದೆ. ಬೆಂಕಿಯಿಂದ ಎರಡು ಬಸ್ ಟರ್ಮಿನಲ್‌ಗಳು ನಾಶವಾಗಿವೆ ಎಂದು ಆಂತರಿಕ ಸಚಿವರು ತಿಳಿಸಿದ್ದಾರೆ.
ಎಲ್ ನಿನೋ ಹವಾಮಾನದ ಪರಿಣಾಮ: ಎಲ್ ನಿನೋ ಹವಾಮಾನದಿಂದ ಈ ವರ್ಷ ದಕ್ಷಿಣ ಅಮೆರಿಕದ ಪಶ್ಚಿಮ ಭಾಗ ಎಂದಿಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಇದು ಕಾಡ್ಗಿಚ್ಚು ಅಪಾಯ ಹೆಚ್ಚಿಸುತ್ತದೆ. ಜನವರಿಯಲ್ಲಿ ಕೊಲಂಬಿಯಾದಲ್ಲಿ 17,000 ಹೆಕ್ಟೇರ್‌ಗಳಿಗಿಂತ ಹೆಚ್ಚು (42,000 ಎಕರೆ) ಕಾಡುಗಳು ಹಲವಾರು ವಾರಗಳ ಶುಷ್ಕ ಹವಾಮಾನದ ನಂತರ ಬೆಂಕಿಯಿಂದ ನಾಶವಾಗಿದ್ದವು.
ಇದನ್ನೂ ಓದಿ: ಗಾಜಾದಲ್ಲಿ ಯುದ್ಧದಿಂದಾಗಿ 17 ಸಾವಿರ ಮಕ್ಕಳು ಅನಾಥ; ವಿಶ್ವಸಂಸ್ಥೆ