ಮಾಸ್ಕೋ, ರಷ್ಯಾ: ಬ್ರಿಕ್ಸ್ ದೇಶಗಳು ಹವಾಮಾನ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿವೆ. ಈ ದಿಕ್ಕಿನಲ್ಲಿ ಜಂಟಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ. ಮಾಸ್ಕೋದಲ್ಲಿ ನಡೆದ ಆಧುನಿಕ ಪರಿಸ್ಥಿತಿಗಳ ವೇದಿಕೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎರಡು ದಿನಗಳ ಬ್ರಿಕ್ಸ್ ಹವಾಮಾನ ಕಾರ್ಯಸೂಚಿ ಸಭೆಯಲ್ಲಿ ಬ್ರಿಕ್ಸ್ ದೇಶಗಳು ಹವಾಮಾನ ಮತ್ತು ಸುಸ್ಥಿರ ಅಭಿವೃದ್ಧಿಯ ಚೌಕಟ್ಟನ್ನು ಅಳವಡಿಸಿಕೊಂಡಿವೆ.
ಈ ಸಭೆಯಲ್ಲಿ ತಯಾರಿ ಮಾಡಿರುವ ಡಾಕ್ಯುಮೆಂಟ್ನಲ್ಲಿ ಹವಾಮಾನ ಕ್ರಿಯೆಯ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಳ್ಳುವಂತೆ ರೂಪಿಸಲಾಗಿದೆ. ಹವಾಮಾನ ದುಷ್ಷರಿಣಾಮ ತಗ್ಗಿಸುವಿಕೆ, ರೂಪಾಂತರ, ಕಾರ್ಬನ್ ಹೊರ ಸೂಸುವಿಕೆಗೆ ಕಡಿವಾಣ, ಹಣಕಾಸು, ವಿಜ್ಞಾನ ಮತ್ತು ವ್ಯವಹಾರ ಸೇರಿದಂತೆ ಎಲ್ಲ ಅಂಶಗಳ ಮೇಲೆ ಬೆಳಕು ಚಲ್ಲಲಾಗಿದೆ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಇಲಾಖೆ ಹೇಳಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಏಕಪಕ್ಷೀಯ ಹಸಿರು ರಕ್ಷಣಾ ಕ್ರಮಗಳ ಬಳಕೆಯನ್ನು ನಿಲ್ಲಿಸುವ ಅಗತ್ಯವನ್ನು ಎಲ್ಲಾ ಬ್ರಿಕ್ಸ್ ದೇಶಗಳು ಗುರುತಿಸುತ್ತವೆ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವ ಮ್ಯಾಕ್ಸಿಮ್ ರೆಶೆಟ್ನಿಕೋವ್ ಹೇಳಿದ್ದಾರೆ. ಈ ಕ್ರಮಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆ ಮತ್ತು ಪೂರೈಕೆ ಸರಪಳಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
BRIC (ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ) ದೇಶಗಳ ನಾಯಕರು ಮೊದಲ ಬಾರಿಗೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜುಲೈ 2006 ರಲ್ಲಿ G8 ಔಟ್‌ರೀಚ್ ಶೃಂಗಸಭೆಯ ವೇಳೆ ಭೇಟಿಯಾಗಿ ಪರಸ್ಪರ ಒಪ್ಪಿಗೆ ಸೂಚಿಸಿದ್ದರು. ಉನ್ನತ ಮಟ್ಟದ ಸಭೆಗಳ ಸರಣಿಯ ನಂತರ, 1 ನೇ BRIC ಶೃಂಗಸಭೆಯು ಜೂನ್ 16, 2009 ರಂದು ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ ನಡೆದಿತ್ತು. ಸೆಪ್ಟೆಂಬರ್ 2010 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ BRIC ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ದಕ್ಷಿಣ ಆಫ್ರಿಕಾವನ್ನು ಪೂರ್ಣ ಸದಸ್ಯನನ್ನಾಗಿ ಸ್ವೀಕರಿಸಲಾಗಿತ್ತು. ಆ ನಂತರ BRIC ಗುಂಪನ್ನು BRICS (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಎಂದು ಮರುನಾಮಕರಣ ಮಾಡಲಾಯಿತು.
ದಕ್ಷಿಣ ಆಫ್ರಿಕಾವು, ಏಪ್ರಿಲ್ 14, 2011 ರಂದು ಚೀನಾದ ಸನ್ಯಾದಲ್ಲಿ ನಡೆದ ಮೂರನೇ BRICS ಶೃಂಗಸಭೆಯಲ್ಲಿ ಭಾಗವಹಿಸಿತ್ತು. ಬ್ರಿಕ್ಸ್ ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಒಂದು ಪ್ರಮುಖ ಗುಂಪಾಗಿದೆ. ಇದು ವಿಶ್ವದ ಜನಸಂಖ್ಯೆಯ 41 ಪ್ರತಿಶತ, ವಿಶ್ವದ ಜಿಡಿಪಿಯ 24 ಪ್ರತಿಶತ ಮತ್ತು ವಿಶ್ವ ವ್ಯಾಪಾರದಲ್ಲಿ 16 ಪ್ರತಿಶತದಷ್ಟು ಪಾಲನ್ನು ಒಳಗೊಂಡಿದೆ.
ಇದನ್ನು ಓದಿ: ಡೊನಾಲ್ಡ್ ಟ್ರಂಪ್ ಅಧ್ಯಾಯದ ಪುಟ ತಿರುವಿ ಹಾಕಲು ಅಮೆರಿಕನ್ನರು ಸಿದ್ಧ: ಕಮಲಾ ಹ್ಯಾರಿಸ್ - WHAT SAYS KAMALA HARRIS