ಢಾಕಾ( ಬಾಂಗ್ಲಾದೇಶ): ಅಪರಾಧಿ ಎಂದು ಸಾಬೀತಾಗಿ ಗೃಹಬಂಧನದಲ್ಲಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಆದೇಶಿಸಿದ್ದಾರೆ. ಮತ್ತೊಂದೆಡೆ ಅವರು ಸಂಸತ್ತನ್ನು ವಿಸರ್ಜಿಸಿ ಆದಷ್ಟು ಬೇಗ ಮಧ್ಯಂತರ ಸರ್ಕಾರ ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮೂರು ಪಡೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಬಂಗಬಾಬನ್‌ನಲ್ಲಿ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಮೂರು ಪಡೆಗಳ ಮುಖಸ್ಥರ ಸಭೆ ಬಳಿಕ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದಲ್ಲಿ ಅಧ್ಯಕ್ಷರು ಭಾಷಣ ಮಾಡಿದರು. ಪ್ರಧಾನಿ ಶೇಖ್ ಹಸೀನಾ ಅವರು ಇಂದು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅದನ್ನು ಮತ್ತು ಅದನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಬಂಗಾಳಿ ಭಾಷೆಯ ದಿನಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ.
ಅರಾಜಕತೆಗೆ ಅಂತ್ಯ ಹಾಡಲು ಎಲ್ಲ ಕ್ರಮ: "ಬಾಂಗ್ಲಾದೇಶದ ಸಂಸತ್ತನ್ನು ವಿಸರ್ಜಿಸುವ ಮೂಲಕ ಆದಷ್ಟು ಬೇಗ ಮಧ್ಯಂತರ ಸರ್ಕಾರ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಚಾಲ್ತಿಯಲ್ಲಿರುವ ಅರಾಜಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಸೇನೆ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಅಧ್ಯಕ್ಷರು ತಮ್ಮ ಭಾಷಣದಲ್ಲಿ ಭರವಸೆ ನೀಡಿದ್ದಾರೆ. ಸೇನಾಪಡೆಗಳ ಮೂರೂ ಮುಖ್ಯಸ್ಥರು ತಮ್ಮ ಬೆನ್ನಿಗೆ ನಿಂತಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ಮಧ್ಯಂತರ ಸರ್ಕಾರವು ಸಾಧ್ಯವಾದಷ್ಟು ಬೇಗ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಿದೆ ಎಂದು ಅವರು ಇದೇ ವೇಳೆ ಘೋಷಣೆ ಮಾಡಿದ್ದಾರೆ.
ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಗೃಹಬಂಧನದಲ್ಲಿರುವ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಸಭೆ ಸರ್ವಾನುಮತದಿಂದ ನಿರ್ಧರಿಸಿದೆ ಎಂಬ ವಿಚಾರವನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿತರಾಗಿದ್ದ ಎಲ್ಲ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಅಧ್ಯಕ್ಷ ಶಹಾಬುದ್ದೀನ್ ಆದೇಶಿಸಿದ್ದಾರೆ. ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಅವರು ಇದೇ ವೇಳೆ ಪ್ರಕಟಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಸರಿದಾರಿಗೆ ತರುವ ಕೆಲಸ ಶುರು: ರಾಜಕೀಯ ಪಕ್ಷಗಳು ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಬೇಕು. ಲೂಟಿ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. "ಜನರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಶಸ್ತ್ರ ಪಡೆಗಳಿಗೆ ನಾನು ನಿರ್ದೇಶನ ನೀಡುತ್ತಿದ್ದೇನೆ. ಕೋಮು ಸೌಹಾರ್ದತೆ, ಅಲ್ಪಸಂಖ್ಯಾತರ ಭದ್ರತೆ ಮತ್ತು ಸರ್ಕಾರಿ ಆಸ್ತಿಯನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕೆಂದೂ ಸಹ ನಾನು ಕರೆ ನೀಡುತ್ತೇನೆ" ಎಂದು ಅವರು ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದಾರೆ.
ನಿಷ್ಪಕ್ಷಪಾತ ತನಿಖೆಯ ಭರವಸೆ: ನಿಷ್ಪಕ್ಷಪಾತ ತನಿಖೆಯ ಮೂಲಕ ಹತ್ಯೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ನ್ಯಾಯಾಂಗದ ಮುಂದೆ ತರಲಾಗುವುದು ಎಂದು ಅವರು ಇದೇ ವೇಳೆ ಘೋಷಣೆ ಮಾಡಿದ್ದಾರೆ. ಮಂಗಳವಾರದಿಂದ ದೇಶದ ಎಲ್ಲಾ ಕಚೇರಿಗಳು ಮತ್ತು ನ್ಯಾಯಾಲಯಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಹೇಳಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿರುವ ಸೇನಾ ಮುಖ್ಯಸ್ಥ: ಬಾಂಗ್ಲಾ ಪ್ರಧಾನಿಯಾಗಿದ್ದ ಹಸೀನಾ ಅವರ ನಿರ್ಗಮನದ ಸುದ್ದಿ ಹರಡುತ್ತಿದ್ದಂತೆ, ನೂರಾರು ಜನರು ಅವರ ನಿವಾಸಕ್ಕೆ ನುಗ್ಗಿ ಸಂಭ್ರಮಾಚರಣೆ ಮಾಡಿದರು. ಅವರ ನಿವಾಸದ ಒಳಾಂಗಣವನ್ನು ಧ್ವಂಸಗೊಳಿಸಿ ಲೂಟಿ ಮಾಡಿದರು, ಹದಿನೈದು ದಿನಗಳಲ್ಲಿ 300 ಕ್ಕೂ ಹೆಚ್ಚು ಜನರನ್ನು ಕೊಂದ ಸರ್ಕಾರದ ವಿರುದ್ಧ ದೊಡ್ಡ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸೇನಾ ಮುಖ್ಯಸ್ಥ ವಕರ್-ಉಜ್-ಝಮಾನ್ ಅವರು ಶೀಘ್ರದಲ್ಲೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ISPR ಹೊರಡಿಸಿದ ಹೇಳಿಕೆ ತಿಳಿಸಿದೆ.
ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು, ಕಾರ್ಖಾನೆಗಳು ಮತ್ತು ಶಾಲೆಗಳು, ಕಾಲೇಜುಗಳು, ಮದರಸಾಗಳು ಮತ್ತು ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮಂಗಳವಾರ ತೆರೆಯಲಿವೆ ಎಂದು ಐಎಸ್‌ಪಿಆರ್ ತಿಳಿಸಿದೆ.