ಬಾಲ್ಟಿಮೋರ್(ಯುಎಸ್‌ಎ): ಇಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ನಾಪತ್ತೆಯಾಗಿದ್ದ 8 ಜನರ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು 6 ಜನ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಆಗಿದ್ದೇನು?: ಸರಕು ಸಾಗಣೆ ಹಡಗೊಂದು ಮಂಗಳವಾರ ಇಂಜಿನ್ ವೈಫಲ್ಯದಿಂದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಇಡೀ ಸೇತುವೆ ಕುಸಿದು ಪಾಟಾಪ್‌ಸ್ಕೋ ನದಿಗೆ ಬಿತ್ತು. ಸೇತುವೆ ಮೇಲಿದ್ದ 8 ಜನರು ನೀರಿಗೆ ಬಿದ್ದರು. ತಕ್ಷಣ ಇಬ್ಬರನ್ನು ರಕ್ಷಿಸಲಾಗಿತ್ತು. ಉಳಿದಂತೆ ಆರು ಮಂದಿ ಕಾಣೆಯಾಗಿದ್ದು ಶೋಧ ಕಾರ್ಯ ಮುಂದುವರೆಸಲಾಗಿದೆ. ರಕ್ಷಣಾ ಸಿಬ್ಬಂದಿ ನಿರಂತರ ಹುಡುಕಾಟ ನಡೆಸಿದರೂ ಯಾರೂ ಪತ್ತೆಯಾಗದ ಕಾರಣ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಈ ಭೀಕರ ಘಟನೆಗೆ ಯುಎಸ್‌ಎ ಅಧ್ಯಕ್ಷ ಜೋ ಬೈಡನ್ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದರು. "ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆಸಲಾಗುತ್ತದೆ. ರಕ್ಷಿಸಲ್ಪಟ್ಟ ಇಬ್ಬರ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಉಳಿದಂತೆ ಮುಂದಿನ ಸೂಚನೆ ಬರುವವರೆಗೆ ಬಾಲ್ಟಿಮೋರ್ ಬಂದರಿನಲ್ಲಿ ಹಡಗು ಸಂಚಾರ ಸ್ಥಗಿತಗೊಳಿಸಲಾಗಿದೆ. ಹಡಗು ಸಂಚಾರವನ್ನು ಮತ್ತೆ ಪುನರಾರಂಭಿಸುವ ಮೊದಲು ಸೇತುವೆಯನ್ನು ಸರಿಪಡಿಸಲಾಗುತ್ತದೆ. ಇದೊಂದು ಅನಿರೀಕ್ಷಿತ ದುರಂತ. ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಲ್ಲ" ಎಂದು ಸ್ಫಷ್ಟಪಡಿಸಿದರು.
ಘಟನೆಗೂ ಮುನ್ನ 8 ಜನ ಸೇತುವೆ ಮಧ್ಯದಲ್ಲಿ ರಸ್ತೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು ಎಂದು ಬ್ರೌನರ್ ಬಿಲ್ಡರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಫ್ರೆ ಪ್ರಿಟ್ಜ್ಕರ್ ತಿಳಿಸಿದ್ದಾರೆ.
ಹಡಗಿನಲ್ಲಿದ್ದರು 22 ಮಂದಿ ಭಾರತೀಯರ ಸಿಬ್ಬಂದಿ: ಅಪಘಾತಕ್ಕೀಡಾದ ಕಂಟೈನರ್ ಹಡಗಿನಲ್ಲಿ 22 ಸಿಬ್ಬಂದಿ ಭಾರತೀಯ ಸಿಬ್ಬಂದಿ ಇದ್ದರು. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹಡಗು ನಿರ್ವಹಿಸುವ ಕಂಪನಿ ಮಾಹಿತಿ ನೀಡಿದೆ. ಇಬ್ಬರು ಪೈಲಟ್‌ಗಳೂ ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಪತ್ತೆ ಮಾಡಲಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಸಿನರ್ಜಿ ಮರೈನ್ ಗ್ರೂಪ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಕೊಲಂಬೊಗೆ ತೆರಳುತ್ತಿದ್ದ ಹಡಗು: ಸಿಂಗಾಪುರದ ಫ್ಲ್ಯಾಗ್ ಶಿಪ್ 'ಡಲ್ಲಿ' ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿತು. ನೌಕೆಯು 985 ಅಡಿ ಉದ್ದ ಮತ್ತು 157 ಅಡಿ ಅಗಲವಿದೆ. ಈ ಹಡಗನ್ನು ಮಾರ್ಸ್ಕ್ ಶಿಪ್ಪಿಂಗ್ ಕಂಪನಿ ಚಾರ್ಟರ್ ಮಾಡಿತ್ತು. ಅಪಘಾತದ ಸುದ್ದಿಯಿಂದ ನಾಸ್ಡಾಕ್ ಕೋಪನ್ ಹ್ಯಾಗನ್ ಷೇರುಗಳು ಶೇ.2ರಷ್ಟು ಕುಸಿದವು.
1977ರಲ್ಲಿ ನಿರ್ಮಿಸಲಾಗಿದ್ದ ಸೇತುವೆ: ಬಾಲ್ಟಿಮೋರ್ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯನ್ನು 1977ರಲ್ಲಿ ನಗರದ ಪಾಟಾಪ್‌ಸ್ಕೋ ನದಿ ಮೇಲೆ ನಿರ್ಮಿಸಲಾಗಿದೆ. ಬಾಲ್ಟಿಮೋರ್ ಅಮೆರಿಕದ ಪೂರ್ವ ಕರಾವಳಿಯಲ್ಲಿದ್ದು ಇದು ಪ್ರಮುಖ ಸರಕು ಸಾಗಣೆ ಕೇಂದ್ರ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ: 5 ಚೀನೀಯರು ಸೇರಿ 6 ಮಂದಿ ದುರ್ಮರಣ - suicide attack in pakistan