ಟೆಲ್ ಅವೀವ್ : ಸೋಮವಾರ ರಫಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಆರೋಗ್ಯ ಇಲಾಖೆ ತಿಳಿಸಿದೆ. ಇಸ್ರೇಲ್ ವಾಯು ದಾಳಿಯಲ್ಲಿ ಒಂದೇ ಕುಟುಂಬದ ಒಂಬತ್ತು ಜನ ಮತ್ತು ಮತ್ತೊಂದು ಕುಟುಂಬದ ಏಳು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಇಸ್ರೇಲ್ನ ಕೆರೆಮ್ ಶಲೋಮ್ ಬಳಿಯ ಮೈದಾನದ ಮೇಲೆ ಹಮಾಸ್ ಹಾರಿಸಿದ ರಾಕೆಟ್ಗಳ ದಾಳಿಗೆ ಪ್ರತೀಕಾರವಾಗಿ ಈ ವೈಮಾನಿಕ ದಾಳಿ ನಡೆದಿದೆ. ಹಮಾಸ್ನ ರಾಕೆಟ್ ದಾಳಿಯಲ್ಲಿ ಮೂವರು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 11 ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 931 ಬೆಟಾಲಿಯನ್ನ ಸೈನಿಕರು ಮತ್ತು ಶಕೀದ್ ಬೆಟಾಲಿಯನ್ನ ಓರ್ವ ಸೈನಿಕ ಸೇರಿದ್ದಾರೆ.
ಮುಂಜಾನೆ ರಫಾ ಪ್ರದೇಶದಿಂದ ಹಮಾಸ್ ದಾಳಿ ಮಾಡಿದೆ ಎಂದು ಐಡಿಎಫ್ ಹೇಳಿದೆ. ಯುದ್ಧ ಕ್ಯಾಬಿನೆಟ್ ಸೋಮವಾರ ಸಭೆ ಸೇರಲಿದ್ದು ರಫಾ ಮೇಲಿನ ನೆಲದ ಆಕ್ರಮಣದ ಬಗ್ಗೆ ನಿರ್ಧರಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಕಚೇರಿಯ (ಪಿಎಂಒ) ಉನ್ನತ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಖಾತೆ ರಹಿತ ಸಚಿವ ಬೆನ್ನಿ ಗಾಂಟ್ಜ್ ಅವರು ಯುದ್ಧ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕೆರೆಮ್ ಶಲೋಮ್ ಕ್ರಾಸಿಂಗ್ನಲ್ಲಿ ಹಮಾಸ್ ನಡೆಸಿದ ರಾಕೆಟ್ ಮತ್ತು ಮೋರ್ಟಾರ್ ಗುಂಡಿನ ದಾಳಿಯಲ್ಲಿ ಮೂವರು ಐಡಿಎಫ್ ಸೈನಿಕರು ಸಾವನ್ನಪ್ಪಿರುವುದು ಮತ್ತು ಇಸ್ರೇಲ್ನ ಪ್ರತೀಕಾರಗಳ ಕ್ರಮಗಳಿಂದ ಶಾಂತಿ ಸಂಧಾನ ಮಾತುಕತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.
ಕೈರೋದಲ್ಲಿ ಇತ್ತೀಚೆಗೆ ನಡೆದ ಪರೋಕ್ಷ ಮಧ್ಯಸ್ಥಿಕೆ ಮಾತುಕತೆಯಲ್ಲಿ, ಇಸ್ರೇಲ್ ಜೈಲುಗಳಲ್ಲಿನ 600 ಪ್ಯಾಲೆಸ್ಟೈನ್ ಕೈದಿಗಳಿಗೆ ಪ್ರತಿಯಾಗಿ ಹಮಾಸ್ ವಶದಲ್ಲಿರುವ ತನ್ನ ಒತ್ತೆಯಾಳುಗಳ ಪೈಕಿ ಕನಿಷ್ಠ 33 ಜನರನ್ನು ಬಿಡುಗಡೆ ಮಾಡಬೇಕೆಂದು ಇಸ್ರೇಲ್ ಒತ್ತಾಯಿಸಿದೆ.
ಗಾಜಾ ಯುದ್ಧದ ಕುರಿತು ಮತ್ತೊಂದು ಸುತ್ತಿನ ಪರೋಕ್ಷ ಮಾತುಕತೆಗಳು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಭಾನುವಾರ ಕೊನೆಗೊಂಡಿದ್ದು, ಹಮಾಸ್ ಪ್ರತಿನಿಧಿಗಳು ತಮ್ಮ ನಾಯಕತ್ವದೊಂದಿಗೆ ಸಮಾಲೋಚಿಸಲು ಮುಂದಿನ ಹಂತದಲ್ಲಿ ಕತಾರ್ ಗೆ ತೆರಳಲಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಹಮಾಸ್ ನಿಯೋಗವು ಮಧ್ಯಸ್ಥಗಾರರ ಪ್ರಸ್ತಾಪಗಳಿಗೆ ಪ್ರತಿಕ್ರಿಯೆ ನೀಡಿದೆ ಮತ್ತು ಈಜಿಪ್ಟ್ ಮತ್ತು ಕತಾರ್ ಪ್ರತಿನಿಧಿಗಳೊಂದಿಗೆ ಚರ್ಚಿಸಿದೆ ಎಂದು ಸಂಸ್ಥೆ ತನ್ನ ಟೆಲಿಗ್ರಾಮ್ ಚಾನೆಲ್ನಲ್ಲಿ ಬರೆದಿದೆ.
ಇದನ್ನೂ ಓದಿ : ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹತ್ಯೆಗೈಯುವ ಯತ್ನ ತೀವ್ರಗೊಳಿಸಿದ ಇಸ್ರೇಲ್ - Israel Hamas war