ಬೆಂಗಳೂರು: ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಹೊಗೆ ಸೇವನೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಧೂಮಪಾನದಿಂದ ಫಸ್ಟ್ ಹ್ಯಾಂಡ್ ಹೊಗೆ ಸೇವನೆ ಮಾಡುತ್ತಿದ್ದರೆ, ಧೂಮಪಾನ ಮಾಡುವವರ ಸುತ್ತಲೂ ಇರುವವರು ಸೆಕೆಂಡ್ ಹ್ಯಾಂಡ್ ಮತ್ತು ಥರ್ಡ್ ಹ್ಯಾಂಡ್ ಹೊಗೆ ಸೇವಿಸುತ್ತಿದ್ದಾರೆ.
ಫಸ್ಟ್ ಹ್ಯಾಂಡ್ ಸ್ಮೋಕ್ ಎಂದರೇನು?: ನೇರವಾಗಿ ವಿವಿಧ ರೀತಿಯ ಧೂಮಪಾನ ಮಾಡುವವರಿಗೆ ಕಲುಷಿತ ಹೊಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಲಂಗ್ ಕ್ಯಾನ್ಸರ್ ಉಂಟುಮಾಡುತ್ತದೆ. ಇವರನ್ನು ಫಸ್ಟ್‌ಹ್ಯಾಂಡ್ ಹೊಗೆ ಸೇವಕರು ಎನ್ನಲಾಗುತ್ತದೆ. ಇಂದು ಸಾಕಷ್ಟು ಜನರು ಲಿಂಗ ಬೇಧವಿಲ್ಲದೆ ಧೂಮಪಾನ ಮಾಡುತ್ತಿದ್ದಾರೆ. ಅಂಥವರಿಗೆ ಕ್ಯಾನ್ಸರ್ ಬರುವ ಪ್ರಮಾಣ ಶೇ.85ರಷ್ಟಿದೆ. ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಧೂಮಪಾನಕ್ಕೆ ಸಂಬಂಧಿಸಿವೆ ಎಂದು ಅಧ್ಯಯನಗಳು ತೋರಿಸಿವೆ.
ವೈದ್ಯರ ಮಾತು: ತಂಬಾಕು ಹೊಗೆಯಲ್ಲಿರುವ ಕಾರ್ಸಿನೋಜೆನ್‌ಗಳು ಶ್ವಾಸಕೋಶದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ನೇರವಾಗಿ ಕಾರಣವಾಗುತ್ತಿವೆ. ಕ್ಯಾನ್ಸರ್ ಹೊರತಾಗಿ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಗೆ ಧೂಮಪಾನ ಒಂದು ಪ್ರಮುಖ ಕಾರಣ. ಇದು ಒಟ್ಟಾರೆ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ ಹಿರಿಯ ನಿರ್ದೇಶಕಿ ಡಾ.ನಿತಿ ರೈಜಾಡಾ ಹೇಳಿದ್ದಾರೆ.
ಸೆಕೆಂಡ್ ಹ್ಯಾಂಡ್ ಸ್ಮೋಕ್ ಎಂದರೇನು?: ಸೆಕೆಂಡ್ ಹ್ಯಾಂಡ್ ಹೊಗೆ ಅಥವಾ ನಿಷ್ಕ್ರಿಯ ಹೊಗೆ ಸೇವಕರೆಂದರೆ, ಧೂಮಪಾನಿಗಳ ಸಮೀಪ ಇರುವವರು. ಹೌದು, ಸಾಕಷ್ಟು ಜನರು ಸಿಗರೇಟು ಸೇದುವವರ ಜೊತೆ ನಿಲ್ಲುತ್ತಾರೆ. ತಾವು ಸೇದುವುದಿಲ್ಲ ಎಂದುಕೊಳ್ಳಬಹುದು. ಆದರೆ, ಸಿಗರೇಟಿನ ಹೊಗೆ ಹಾಗೂ ಸಿಗರೇಟು ಸೇದುವವರ ಉಸಿರಾಟವು ಎದುರಿನ ವ್ಯಕ್ತಿ ಮೇಲೆ ಪರಿಣಾಮ ಬೀರುತ್ತದೆ. ಸಿಗರೇಟಿನ ನೇರ ಸಂಪರ್ಕವಿಲ್ಲದಿದ್ದರೂ ಸಹ ಇದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಅಮೆರಿಕದ ಸರ್ಜನ್ ಜನರಲ್ ಸಂಶೋಧನೆಯಲ್ಲಿ ಸೆಕೆಂಡ್ ಹ್ಯಾಂಡ್ ಹೊಗೆಗೆ ಯಾವುದೇ ಸುರಕ್ಷಿತ ಮಟ್ಟದ ಮಾನ್ಯತೆ ಇಲ್ಲ ಎಂದು ದೃಢಪಡಿಸಲಾಗಿದೆ.
ಹೀಗಾಗಿ ಧೂಮಪಾನ ಮಾಡದವರಿಗೂ ಕೂಡ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿಯರು ವಿಶೇಷವಾಗಿ ಅಪಾಯದಲ್ಲಿದ್ದಾರೆ. ಮಕ್ಕಳಿಗೆ, ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸೋಂಕುಗಳು, ಅಸ್ತಮಾ ಮತ್ತು ಬೆಳವಣಿಗೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸೆಕೆಂಡ್ ಹ್ಯಾಂಡ್ ಹೊಗೆಗೆ ತೆರೆದುಕೊಳ್ಳುವ ಗರ್ಭಿಣಿಯರು ಕಡಿಮೆ ತೂಕ ಮತ್ತು ಪ್ರಸವಪೂರ್ವ ಹೆರಿಗೆಗೆ ಹೆಚ್ಚಿನ ಅಪಾಯ ಹೊಂದಿರುತ್ತಾರೆ.
ಥರ್ಡ್-ಹ್ಯಾಂಡ್ ಸ್ಮೋಕ್ ಎಂದರೇನು?: ಧೂಮಪಾನದ ಹೊಗೆ ಸೇವಿಸದೇ ಇದ್ದರೂ, ಸುತ್ತಮುತ್ತ ಉಳಿದಿರುವ ನಿಕೋಟಿನ್ ಮತ್ತು ಇತರ ವಿಷಕಾರಿ ರಾಸಾಯನಿಕಗಳನ್ನು ವಾತಾವರಣ ಕೆಲಕಾಲ ಹಾಗೆಯೇ ಉಳಿಸಿಕೊಂಡಿರುತ್ತದೆ. ಆ ವಾತಾವರಣಕ್ಕೆ ತೆರೆದುಕೊಳ್ಳುವವರು ಥರ್ಡ್-ಹ್ಯಾಂಡ್ ಸ್ಮೋಕ್ ಕ್ಯಾಟಗರಿಗೆ ಸೇರುತ್ತಾರೆ. ನಮ್ಮ ಸುತ್ತಲೂ ಸಿಗರೇಟು ಸೇದುವವರ ಪ್ರಮಾಣ ಹೆಚ್ಚಾಗಿ ಇರುವುದರಿಂದ ಸಿಗರೇಟಿನ ಹೊಗೆ ಪ್ರತಿಯೊಬ್ಬರನ್ನೂ ಬಾಧಿಸುತ್ತದೆ.
ಪರಿಹಾರವೇನು?: ಮೊದಲಿಗೆ, ಧೂಮಪಾನವನ್ನು ತ್ಯಜಿಸುವುದರಿಂದ ಲಂಗ್ ಕ್ಯಾನ್ಸರ್‌ಗೆ ಒಳಗಾಗುವುದನ್ನು ತಪ್ಪಿಸುವುದರ ಜೊತೆಗೆ, ನಮ್ಮ ಸುತ್ತಮುತ್ತಲಿನ ಜನರನ್ನೂ ಸಹ ಕ್ಯಾನ್ಸರ್‌ನಿಂದ ರಕ್ಷಿಸಬಹುದು. ಇನ್ನು ಪರಿಸರದಲ್ಲಿರುವ ವಾಯು ಮಾಲಿನ್ಯ ತಗ್ಗಿಸಲು ಸಾಕಷ್ಟು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ.
ಹೆಚ್ಚಾಗಿ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದೆ. ಮಕ್ಕಳು, ಹಿರಿಯರು, ಗರ್ಭಿಣಿಯರು ಹೆಚ್ಚು ಮಾಸ್ಕ್ ಧರಿಸುವುದರಿಂದ ಈ ಕಲುಷಿತ ಹೊಗೆಯಿಂದ ಬಚಾವ್ ಆಗಬಹುದು. ಫಿಲ್ಟರ್‌ಗಳೊಂದಿಗೆ ಏರ್ ಪ್ಯೂರಿಫೈಯರ್‌ಗಳನ್ನು ಬಳಸುವುದು ಒಳಾಂಗಣ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಾ ರೀತಿಯ ಹೊಗೆಯ ಅಪಾಯಗಳ ಬಗ್ಗೆ ಜಾಗೃತಿ ಹೆಚ್ಚಿಸಬೇಕಿದೆ ಎಂದು ಡಾ.ನಿತಿ ರೈಜಾಡಾ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ವಾಸಕೋಶದ ಕ್ಯಾನ್ಸರ್: ರೋಗ ಲಕ್ಷಣಗಳೇನು? ಪರಿಹಾರವೇನು? ಸಂಪೂರ್ಣ ವಿವರ