ಯಕೃತ್ತಿನ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 19 ಅನ್ನು ವಿಶ್ವ ಯಕೃತ್ ದಿನವೆಂದು ಆಚರಿಸಲಾಗುತ್ತದೆ. 2010ರಲ್ಲಿ ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ (ಇಎಎಸ್ಎಲ್) ವಿಶ್ವ ಯಕೃತ್ತಿನ ದಿನವನ್ನು ಜಾರಿಗೆ ತಂದಿತು. ಶೀಘ್ರದಲ್ಲೇ ಇದು ಜಾಗತಿಕ ಮನ್ನಣೆ ಪಡೆದು 1966ರ ಏಪ್ರಿಲ್ 19ರಂದು ಆಚರಣೆಗೆ ಬಂತು. ಯಕೃತ್ತಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ 2019ರಲ್ಲಿ ವಿಶ್ವ ಯಕೃತ್ತಿನ ದಿನಾಚರಣೆ ಶುರುವಾಯಿತು. 2023ರಲ್ಲಿ ಇದನ್ನು ವಿಶ್ವಾದ್ಯಂತ ವಿಸ್ತರಿಸಲಾಗಿದೆ.
ಈ ವರ್ಷದ ಘೋಷವಾಕ್ಯ: 'ಜಾಗರೂಕರಾಗಿರಿ, ಯಕೃತ್ತಿನ ತಪಾಸಣೆಗಳನ್ನು ನಿಯಮಿತವಾಗಿ ಮಾಡಿ ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳನ್ನು ತಡೆಯಿರಿ' ಎಂಬುದು ಈ ವರ್ಷದ ಘೋಷವಾಕ್ಯ. ಈ ಮೂಲಕ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಮಾಡಿ ತಡೆಯುವುದು ಇದರ ಮೂಲ ಉದ್ದೇಶ.
ದೇಹದ 500ಕ್ಕೂ ಹೆಚ್ಚು ಕಾರ್ಯಾಚರಣೆಗಳನ್ನು ಯಕೃತ್ ನಡೆಸುತ್ತದೆ. ದೇಹದ ಅತಿ ದೊಡ್ಡ ಅಂಗವೂ ಇದೇ. ರಕ್ತ ಶೋಧಿಸುವುದು ಇದರ ಪ್ರಮುಖ ಕೆಲಸ. ಇಷ್ಟೆಲ್ಲ ಪ್ರಾಮುಖ್ಯತೆ ಹೊಂದಿದ್ದರೂ ಅನೇಕ ಬಾರಿ ಯಕೃತ್ ಆರೋಗ್ಯವನ್ನು ಜನರು ನಿರ್ಲಕ್ಷ್ಯಿಸುತ್ತಾರೆ. ಯಕೃತ್ ಕಾಯಿಲೆಗಳು ವಂಶವಾಹಿನಿ ಮೂಲಕವೂ ಬರಬಹುದು. ಯಕೃತ್‌ಗೆ ಯಾವುದೇ ಹಾನಿಯಾದಾಗ ಅದು ತೀವ್ರ ಸ್ವರೂಪದ ಸಮಸ್ಯೆಗೆ ಕಾರಣವಾಗುತ್ತದೆ. ವೈರಸ್, ವಿಷಪೂರಿತ ರಾಸಾಯನಿಕ, ಆಲ್ಕೋಹಾಲ್ ಬಳಕೆ ಮತ್ತು ಸ್ಥೂಲಕಾಯ ಯಕೃತ್ ಬಾಧೆಗೆ ಕಾರಣವಾಗುತ್ತದೆ.
ಯಕೃತ್ ರೋಗದ ಲಕ್ಷಣಗಳು:
- ಚರ್ಮ, ಕಣ್ಣುಗಳು ಹಳದಿಯಾಗುವುದು (ಜಾಂಡೀಸ್)
- ಹೊಟ್ಟೆ ನೋವು, ಊತ
- ಕಾಲುಗಳು, ಕಣಕಾಲುಗಳಲ್ಲಿ ಊತ
- ಹಸಿವಾಗದೇ ಇರುವುದು
- ಹೊಟ್ಟೆನೋವು
- ಜ್ವರ
- ತುರಿಕೆ
- ತೂಕ ಇಳಿಕೆ
- ಕಪ್ಪು ಬಣ್ಣದ ಮೂತ್ರ
- ಮಸುಕಾದ ಮಲ
- ನಿರಂತರ ಆಯಾಸ
- ವಾಕರಿಕೆ ಅಥವಾ ವಾಂತಿ
ಯಕೃತ್ ಕಾಯಿಲೆಯ ವಿಧಗಳು:
ಹೆಪಟೈಟಿಸ್: ವೈರಸ್ ಅಥವಾ ಇತರ ಅಂಶಗಳಿಂದ ಇದು ಉಂಟಾಗುತ್ತದೆ. ಕೆಲವು ಬಾರಿ ಲೈಂಗಿಕ ಸಂಪರ್ಕದ ಮೂಲಕವೂ ಹರಡಬಹುದು. ವೈರಲ್ ಹೆಪಟೈಟಿಸ್ ಮತ್ತು ನಾನ್ವೈರಲ್ ಹೆಪಟೈಟಿಸ್ ಹೆಪಟೈಟಿಸ್‌ನಲ್ಲಿ ಎರಡು ಮುಖ್ಯ ವಿಭಾಗಗಳು.
ಸಿರೋಸಿಸ್: ಸಿರೋಸಿಸ್ ಎನ್ನುವುದು ಯಕೃತ್ತಿನ ಕಾಯಿಲೆ. ಇತರ ಕಾರಣಗಳಿಂದ ಉಂಟಾಗುವ ಯಕೃತ್ತಿನ ಹಾನಿಯ ಗುರುತನ್ನು ಇದು ಸೂಚಿಸುತ್ತದೆ. ಉದಾಹರಣೆಗೆ ಆಲ್ಕೋಹಾಲ್ ಬಳಕೆ ಈ ಸಮಸ್ಯೆಗೆ ಕಾರಣವಾಗುತ್ತದೆ.
ಫ್ಯಾಟಿ ಲಿವರ್ ರೋಗ: ಯಕೃತ್ತಿನ ಜೀವಕೋಶಗಳಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾದಾಗ ಇದು ಉಂಟಾಗುತ್ತದೆ. ಜೀವನಶೈಲಿಯ ಬದಲಾವಣೆಗಳೊಂದಿಗೆ ಇದಕ್ಕೆ ಚಿಕಿತ್ಸೆ ನೀಡಬಹುದು. ಉದಾಹರಣೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಸುಧಾರಣೆ, ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದು.
ಲಿವರ್ ಕ್ಯಾನ್ಸರ್: ಯಕೃತ್ ಜೀವಕೋಶಗಳಿಂದ ಯಕೃತ್ತಿಗೆ ಹರಡುವ ಕ್ಯಾನ್ಸರ್ ಇದು. ಲಿವರ್ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ.
ಲಸಿಕೆ, ಆರೋಗ್ಯಕರ ತೂಕ, ಶುಚಿತ್ವ ಅಭ್ಯಾಸ, ಆಲ್ಕೋಹಾಲ್ ಸೇವನೆ ತಪ್ಪಿಸುವುದು, ಸುರಕ್ಷಿತ ಲೈಂಗಿಕ ಅಭ್ಯಾಸ, ವ್ಯಾಯಾಮ, ನಿಯಮಿತ ಆರೋಗ್ಯ ತಪಾಸಣೆಗಳು ಈ ರೋಗವನ್ನು ಕಡಿಮೆ ಮಾಡುತ್ತದೆ. ಚಿಕಿತ್ಸೆಗೆ ಯಕೃತ್ ರೋಗದ ಆರಂಭಿಕ ಪತ್ತೆ ಬಹಳ ಮುಖ್ಯ.
ಜಾಗತಿಕ ಪರಿಣಾಮ:
- ವಿಶ್ವದಾದ್ಯಂತ 2 ಮಿಲಿಯನ್ ಸಾವು ಯಕೃತ್ ಕಾಯಿಲೆಯಿಂದ ಸಂಭವಿಸಿದರೆ, 844 ಮಿಲಿಯನ್ ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
- ಎಲ್ಲಾ ರೀತಿಯ ಸಾವು ಪ್ರಕರಣಗಳಲ್ಲಿ ಯಕೃತ್ ಸಮಸ್ಯೆ ಕಾರಣ ಶೇ.4ರಷ್ಟಿದೆ. ಯಕೃತ್ ಸಂಬಂಧಿತ ಸಾವಿನಲ್ಲಿ ಮೂರನೇ ಒಂದು ಭಾಗ ಪುರುಷರಲ್ಲಿ ಸಂಭವಿಸಿದೆ.
- ಲಿವರ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, 2020ರಲ್ಲಿ 9,05,677 ಪ್ರಕರಣಗಳು ದಾಖಲಾಗಿವೆ.
- ಸಿರೋಸಿಸ್ ಜಾಗತಿಕವಾಗಿ 1 ಮಿಲಿಯನ್ ಸಾವಿಗೆ ಕಾರಣವಾಗುತ್ತಿರುವ ಲಿವರ್ ರೋಗ ಇದಾಗಿದೆ.
- ವೈರಲ್ ಹೆಪಟೈಟಿಸ್ ಕೂಡ ಜಾಗತಿಕ ಆರೋಗ್ಯಕ್ಕೆ ಹೆಚ್ಚುವರಿ ಸವಾಲಾಗಿದೆ.
ಭಾರತದಲ್ಲಿ: ಭಾರತದಲ್ಲಿ ರಾಷ್ಟ್ರೀಯ ಕಾರ್ಯ ಯೋಜನೆ- ವೈರಲ್ ಹೆಪಟೈಟಿಸ್ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಹೆಪಟೈಟಿಸ್ ಅನ್ನು ಎದುರಿಸುವ ಜೊತೆಗೆ 2030ರ ಹೊತ್ತಿಗೆ ಹೆಪಟೈಟಿಸ್ ಸಿ ನಿರ್ಮೂಲನೆ ಮಾಡುವುದಾಗಿದೆ. ಭಾರತದಲ್ಲಿ ಹೆಪಟೈಟಿಸ್ ಬಿಯಿಂದ 40 ಮಿಲಿಯನ್ ಜನರು ಬಳಲುತ್ತಿದ್ದರೆ, ಹೆಪಟೈಟಿಸ್ ಸಿಯಿಂದ 6-12 ಮಿಲಿಯನ್ ಜನ ಬಳಲುತ್ತಿದ್ದಾರೆ.
ಇದನ್ನೂ ಓದಿ: ಆಲ್ಕೋಹಾಲ್ ಮಾತ್ರವಲ್ಲ, ಅತಿಯಾದ ಸಕ್ಕರೆ, ಎಣ್ಣೆ ಪದಾರ್ಥ ಸೇವನೆ ಕೂಡ ಲಿವರ್ಗೆ ಅಪಾಯ