Eating Boiled Eggs: ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು, ಪ್ರೋಟಿನ್ಗಳು ಮತ್ತು ವಿಟಮಿನ್‌ಗಳನ್ನು ಪಡೆಯಲು ಅನೇಕರು ಪ್ರತಿದಿನ ಒಂದರಿಂದ ಎರಡು ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾರೆ. ಪ್ರತಿದಿನ ಕನಿಷ್ಠ ಒಂದು ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಪೌಷ್ಟಿಕ ತಜ್ಞ ಡಾ.ಶುಭಂಗಿ ತಮ್ಮಾಳ್ವಾರ್ ಹೇಳಿದ್ದಾರೆ.
ಸಮೃದ್ಧ ಪೋಷಕಾಂಶ: ಮೊಟ್ಟೆಯಲ್ಲಿ ವಿಟಮಿನ್ ಎ, ಡಿ, ಇ, ಬಿ12, ಫೋಲೆಟ್, ಕಬ್ಬಿಣ, ರಂಜಕ, ಸೆಲೆನಿಯಂ ಮತ್ತು ದೇಹಕ್ಕೆ ಅಗತ್ಯವಿರುವ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ, ಪ್ರತಿದಿನ ಬೇಯಿಸಿದ ಮೊಟ್ಟೆಯ ಸೇವನೆಯಿಂದ ಸಿಗುವ ಈ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.
ಸ್ನಾಯುಗಳು ಬಲಿಷ್ಠ: ಪ್ರೋಟಿನ್ ಸಮೃದ್ಧವಾಗಿರುವ ಆಹಾರಗಳಲ್ಲಿ ಮೊಟ್ಟೆಯೂ ಒಂದು. ಹಾಗಾಗಿ ಪ್ರತಿದಿನ ಬೇಯಿಸಿದ ಮೊಟ್ಟೆಯನ್ನು ಸೇವಿಸುವುದರಿಂದ ದೊರೆಯುವ ಪ್ರೋಟಿನ್ ಮತ್ತು ಅಮೈನೋ ಆಮ್ಲಗಳು ಸ್ನಾಯುಗಳನ್ನು ಬಲಿಷ್ಠಗೊಳಿಸಲು ತುಂಬಾ ಸಹಕಾರಿ. ಇದಲ್ಲದೇ, ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸಲು ಅವು ಸಹಾಯ ಮಾಡುತ್ತವಂತೆ.
ಹೃದಯದ ಆರೋಗ್ಯ ಸುಧಾರಣೆ: ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಅಂಶವಿದ್ದರೂ, ಮಿತ ಸೇವನೆ ಹೃದಯದ ಆರೋಗ್ಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತದೆ. ಮೊಟ್ಟೆಗಳಲ್ಲಿ ವಿಶೇಷವಾಗಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಹೇರಳವಾಗಿವೆ. ಇವು ಹೊಟ್ಟೆಯಲ್ಲಿನ ಉರಿಯೂತ ಕಡಿಮೆ ಮಾಡುತ್ತದೆ. ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕ.
ಮೆದುಳಿನ ಕಾರ್ಯ ಸುಧಾರಿಸುತ್ತದೆ: ಮೊಟ್ಟೆಗಳಲ್ಲಿ ಕೋಲಿನ್ ಸಮೃದ್ಧವಾಗಿದೆ (ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ರಿಪೋರ್ಟ್). ಇದು ಮೆದುಳಿನ ಆರೋಗ್ಯ ಮತ್ತು ಅರಿವಿನ ಕಾರ್ಯಕ್ಕೆ ಅಗತ್ಯವಾದ ಪೋಷಕಾಂಶ. ಹಾಗಾಗಿ, ನಿತ್ಯ ಒಂದು ಅಥವಾ ಎರಡು ಬೇಯಿಸಿದ ಮೊಟ್ಟೆಗಳನ್ನು ಸೇವಿಸುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ ಹಾಗೂ ಒಟ್ಟಾರೆ ಮೆದುಳಿನ ಕಾರ್ಯ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ ಡಾ.ಶುಭಾಂಗಿ.
ತೂಕ ನಿಯಂತ್ರಣ: ಮೊಟ್ಟೆಯಲ್ಲಿ ಕಡಿಮೆ ಕ್ಯಾಲೊರಿ ಇರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಬೇಯಿಸಿದ ಮೊಟ್ಟೆ ತಿನ್ನುವ ಮೂಲಕ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಪರಿಣಾಮ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇತರೆ ಆರೋಗ್ಯ ಲಾಭಗಳು: ಮೊಟ್ಟೆಯಲ್ಲಿರುವ ವಿಟಮಿನ್-ಎ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುವುದಲ್ಲದೇ ದೇಹಕ್ಕೆ ಶಕ್ತಿಯೂ ಸಿಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬೇಯಿಸಿದ ಮೊಟ್ಟೆಗಳನ್ನು ತಿನ್ನುವವರು ತಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಅನುಭವಿಸುತ್ತಾರೆ ಎಂದು ಡಾ.ಶುಭಂಗಿ ತಮ್ಮಾಳ್ವಾರ್ ಮಾಹಿತಿ ನೀಡಿದರು. ಅಷ್ಟೇ ಅಲ್ಲದೇ, ಪ್ರತಿದಿನ ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಕೆಲವು ಅಡ್ಡಪರಿಣಾಮಗಳು ಉದ್ಭವಿಸುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಡ್ಡ ಪರಿಣಾಮಗಳೇನು?:
ಅಲರ್ಜಿ: ಪ್ರತಿದಿನ ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. ಮೇಲಾಗಿ, ತ್ವಚೆಯಲ್ಲಿ ದದ್ದು, ಕೆಂಪಾಗುವುದು ಮುಂತಾದ ಸಮಸ್ಯೆ ಇರುವವರು ಕೆಲವು ದಿನಗಳ ಕಾಲ ಮೊಟ್ಟೆ ತಿನ್ನದೇ ಇದ್ದರೆ ಒಳ್ಳೆಯದು ಎಂಬುದು ತಜ್ಞರ ಸಲಹೆ.
ಹೃದ್ರೋಗದ ತೊಂದರೆ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವವರು ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವಿದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆ ಬಾಧಿಸುವ ಸಾಧ್ಯತೆ ಇದೆ.
ಜೀರ್ಣಕ್ರಿಯೆ ಸಮಸ್ಯೆ: ದಿನನಿತ್ಯ ಮೊಟ್ಟೆ ಸೇವಿಸುವುದರಿಂದ ಕೆಲವರಲ್ಲಿ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಇಂಥ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ ಅನ್ನು ಸಂಪರ್ಕಿಸಿ:
ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.