How to remove make up: ಮದುವೆ ಸೇರಿದಂತೆ ಇನ್ನಿತರ ಸಮಾರಂಭದಲ್ಲಿ ಸೌಂದರ್ಯಕ್ಕೆ ಮೆರಗು ಹೆಚ್ಚಿಸಲು ಯುವತಿಯರು, ಮಹಿಳೆಯರು ಮೇಕಪ್ ಮಾಡಿಕೊಳ್ಳುವುದು ಸಹಜ. ಆದರೆ, ಈ ಮೇಕಪ್ನಲ್ಲಿಯೇ ಇಡೀ ದಿನ ಇದ್ದರೂ, ರಾತ್ರಿ ಮಲಗುವ ಮುನ್ನ ತಪ್ಪದೇ ಇದನ್ನು ತೆಗೆಯಬೇಕು. ಇಲ್ಲದೇ ಹೋದಲ್ಲಿ ವಿವಿಧ ತ್ವಚೆಯ ಸಮಸ್ಯೆಗೆ ಕಾರಣವಾಗುತ್ತದೆ. ಅನೇಕ ಮಂದಿ ಮೇಕಪ್ ತೆಗೆಯಲು ಮಾರುಕಟ್ಟೆಯಲ್ಲಿ ಲಭ್ಯವಾಗುವ ರಾಸಾಯನಿಕಗಳ ಬಳಕೆ ಮಾಡುತ್ತಾರೆ. ಈ ಮೇಕಪ್ ಅನ್ನು ಮನೆಯಲ್ಲಿಯೇ ಲಭ್ಯವಾಗುವ ನೈಸರ್ಗಿಕ ಪದಾರ್ಥಗಳಿಂದ ಸುಲಭವಾಗಿ ತೆಗೆಯಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಕೂಡ ಇರುವುದಿಲ್ಲ.
ಹಾಲು: ಕುದಿಸಿಲ್ಲದ ಕಚ್ಛಾ ಹಾಲನ್ನು ಅನೇಕ ಸೌಂದರ್ಯ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಹಾಲು ಕೂಡ ಮೇಕಪ್ ತೆಗೆಯಲು ಸಹಾಯ ಮಾಡುತ್ತದೆ. ಹತ್ತಿಯ ಉಂಡೆಗಳನ್ನು ಹಾಲಿನಲ್ಲಿ ಅದ್ದಿ, ಮುಖವನ್ನು ನಯವಾಗಿ ಒರೆಸಿ. ಇದರಿಂದ ಮೇಕಪ್ ತೆಗೆಯುವುದರ ಜೊತೆಗೆ ಮುಖ ಕೂಡ ತಾಜಾತನದಿಂದ ಕಾಣುತ್ತದೆ. ಹೆಚ್ಚಿನ ಮೇಕಪ್ ಧರಿಸಿದ್ದರೆ, ಟೇಬಲ್ಸ್ಪೂನ್ ಬಾದಾಮಿ ಎಣ್ಣೆಯನ್ನು ಹಾಲಿನೊಂದಿಗೆ ಬೆರಸಿ, ಮೇಕಪ್ ತೆಗೆಯಬಹುದು.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಡರ್ಮಾಟಾಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಾಲು ಸುಲಭವಾಗಿ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆಯುತ್ತದೆ. ಜೊತೆಗೆ ಹೈಡ್ರೇಷನ್ ಮತ್ತು ಮೃದುತ್ವ ಹೆಚ್ಚಿಸುತ್ತದೆ. ಡಾ. ಡಾನ್ ಯಾಂಗ್ ಮತ್ತು ನ್ಯೂಯಾರ್ಕ್ ಸಿಟಿಯ ಮೌಂಟ್ ಸಿನಾಯಿ ಸ್ಕೂಲ್ ಆಫ್ ಮೆಡಿಸಿನ್ ಪ್ರೊಫೆಸರ್ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿದೆ.
ತೆಂಗಿನ ಎಣ್ಣೆ: ಅನೇಕ ಮಂದಿ ಮೇಕಪ್ ಬೇಗ ಹಾಳಾಗಬಾರದು ಎಂದು ವಾಟರ್ಫ್ರೂಫ್ ಮೇಕಪ್ ಬಳಕೆ ಮಾಡುತ್ತಾರೆ. ಇದು ಬಳಕೆಗೆ ಉತ್ತಮವಾದರೂ, ತೆಗೆಯಲು ಕೊಂಚ ಕಷ್ಟ. ತಜ್ಞರ ಪ್ರಕಾರ, ಇವುಗಳನ್ನು ತೆಂಗಿನ ಎಣ್ಣೆ ಬಳಕೆ ಮಾಡಿ ಸುಲಭವಾಗಿ ತೆಗೆದು ಹಾಕಬಹುದು. ಇದು ಕೂಡ ಮುಖಕ್ಕೆ ಮಾಶ್ಚರೈಸರ್ ತರಹ ಕೆಲಸ ಮಾಡಿ, ತ್ವಚೆಯನ್ನು ಮೃದುವಾಗಿ ಇಡುತ್ತದೆ. ಎರಡ್ಮೂರು ಹನಿ ತೆಂಗಿನ ಎಣ್ಣೆಯನ್ನು ತೆಗೆದು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಬಳಿಕ ಹತ್ತಿಯ ಪ್ಯಾಡ್ನಿಂದ ಒರೆಸಿ. ಲಿಪ್ಸ್ಟಿಕ್ ಅನ್ನು ಕೂಡ ತೆಂಗಿನ ಎಣ್ಣೆ ಬಳಕೆ ಮಾಡಿ ತೆಗೆಯಬಹುದು.
ಜೇನುತುಪ್ಪ: ಜೇನುತುಪ್ಪದಲ್ಲಿ ಆ್ಯಂಟಿ ಬ್ಯಾಕ್ಟಿರೀಯ ಅಂಶವೂ ಇದ್ದು, ಇದು ತ್ವಚೆಯ ಸತ್ತ ಕೋಶವನ್ನು ತೆಗೆಯುತ್ತದೆ. ಇದು ಕೂಡ ಮಾಶ್ಚರೈಸರ್ ತೆಗೆಯಲು ಸಹಾಯ ಮಾಡುತ್ತದೆ. ಒಂದೆರಡು ಹನಿಯಷ್ಟು ಜೇನುತುಪ್ಪವನ್ನು ಹತ್ತಿ ಉಂಡೆಯಲ್ಲಿ ಹಾಕಿ, ನಿಧಾನವಾಗಿ ಮುಖದ ಮೇಲೆ ಐದು ನಿಮಿಷ ಮಸಾಜ್ ಮಾಡಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
ಆಲೋವೆರಾ (ಲೋಳೆರಸ): ನಿಯಮಿತವಾಗಿ ಮೇಕಪ್ ಧರಿಸುವವರು ಕೂಡ ಮನೆಯಲ್ಲಿಯೇ ಲೋಳೆ ರಸ ಬಳಕೆ ಮಾಡಿ ಇದನ್ನು ತೆಗೆಯಬಹುದು ಎನ್ನುತ್ತಾರೆ ತಜ್ಞರು. ಒಂದು ಚಮಚ ಲೋಳೆ ರಸದ ತಿರಳಿಗೆ, 4-5 ಹನಿಯಷ್ಟು ಬಾದಾಮಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಮಸಾಜ್ ಮಾಡಿ ತೊಳೆಯಿರಿ. ಇದರಿಂದ ಮುಖ ಕೂಡ ಕಾಂತಿಯುತವಾಗುತ್ತದೆ.
ಹಬೆ (ಸ್ಟೀಮ್): ಬಿಸಿ ನೀರಿನ ಹಬೆಯಿಂದ ಕೂಡ ಸುಲಭವಾಗಿ ಮೇಕಪ್ ತೆಗೆಯಬಹುದು. ಇದು ಕೂಡ ಮುಖ ತಾಜಾವಾಗಿರುವಂತೆ ಮಾಡುತ್ತದೆ. ಐದರಿಂದ ಹತ್ತು ನಿಮಿಷದ ಹಬೆ ತೆಗೆದುಕೊಂಡ ಬಳಿಕ ಮುಖವನ್ನು ಹತ್ತಿಉಂಡೆಯಿಂದ ನಯವಾಗಿ ಒರೆಸಿ. ಇದರಿಂದ ಮುಖದಲ್ಲಿರುವ ಮೇಕಪ್ ಜೊತೆ ಬೆವರನ್ನು ಕೂಡ ತೆಗೆಯಬಹುದು. ಹಬೆ ತ್ವಚೆಯಲ್ಲಿನ ರಂಧ್ರದಲ್ಲಿರು ಕೊಳೆಯನ್ನು ತೆಗೆದು ಹಾಕಿ, ತ್ವಚೆಯ ತಾಜಾತನವನ್ನು ಕಾಪಾಡುತ್ತದೆ.
ದಯವಿಟ್ಟು ಗಮನಿಸಿ: ಇಲ್ಲಿ ನೀಡಲಾಗಿರುವ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಯಾವುದಕ್ಕೂ ಒಮ್ಮೆ ನಿಮ್ಮ ಆಪ್ತ ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಉತ್ತಮ.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ನೀವು ಅನ್ನ ತ್ಯಜಿಸಲೇಬೇಕಾ? ಇಲ್ಲಿದೆ ಮಾಹಿತಿ