ನವದೆಹಲಿ: ಭಾರತದಲ್ಲಿ ಶಾಂಕಾಸ್ಪದ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ವಿದೇಶದಿಂದ ಮರಳಿದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣ ಕಂಡುಬಂದಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ರೋಗಿಯನ್ನು ದೆಹಲಿಯ ಏಮ್ಸ್‌ನಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆಯ ಎಪಿ- 7 ವಾರ್ಡ್ನಲ್ಲಿ ಐಸೋಲೇಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಮಂಕಿಪಾಕ್ಸ್ ದೃಢವಾಗಿರುವ ಕುರಿತು ಯಾವುದೇ ನಿಖರತೆ ಇಲ್ಲ. ರೋಗಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಮಂಕಿಪಾಕ್ಸ್ ಆತಂಕದ ಹಿನ್ನೆಲೆಯಲ್ಲಿ ಮಂಗಳವಾರವ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿತ್ತು. ಇದರಲ್ಲಿ ದೆಹಲಿ ಏಮ್ಸ್ ತನ್ನ ತುರ್ತು ವಿಭಾಗದಲ್ಲಿ ಮಂಕಿಪಾಕ್ಸ್ ಪ್ರಕರಣಗಳನ್ನು ನಿರ್ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿತ್ತು.
ಚಿಕಿತ್ಸೆಗಾಗಿ ಬೇಕಿರುವ ಸೌಲಭ್ಯ ಒದಗಿಸಲು ಆಸ್ಪತ್ರೆ ಅಧಿಕಾರಿಗಳು ಮುಂದಾಗಿದ್ದಾರೆ. ಆಸ್ಪತ್ರೆಯಲ್ಲಿ 33, 34, 35, 36 ಮತ್ತು 37 ಐದು ಬೆಡ್ ಮೀಸಲಿರಿಸಲಾಗಿದೆ. ಶಂಕಾಸ್ಪದ ಮಂಕಿಪಾಕ್ಸ್ ರೋಗಿಗೆ ಎಬಿ- 7 ವಾರ್ಡ್ ಮೀಸಲಿಡಲಾಗಿದೆ.
ಮಂಕಿಪಾಕ್ಸ್ ರೋಗಿಗಳನ್ನು ಸಫ್ಧರ್ಜಂಗ್ ಆಸ್ಪತ್ರೆಗೆ ಕರೆ ತರಲು ಆ್ಯಂಬುಲೆನ್ಸ್ ಅನ್ನು ಕೂಡ ನೀಡಲಾಗಿದೆ. ಇದರ ಹೊರತಾಗಿ ಲೇಡಿ ಹರ್ಡಿಂಗ್, ಆರ್ಎಂಎಲ್ ಆಸ್ಪತ್ರೆ ಮತ್ತು ದೆಹಲಿ ಸರ್ಕಾರ ಲೋಕ್ನಾಯಕ್, ಜಿಟಿಬಿ ಮತ್ತು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮಂಕಿಪಾಕ್ಸ್ಗೆ ನೋಡಲ್ ಆಸ್ಪತ್ರೆ ಗೊತ್ತುಪಡಿಸಲಾಗಿದೆ. 2022ರಲ್ಲಿ ಭಾರತದಲ್ಲಿ 23 ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿದ್ದವು.
ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ- ವಿಶ್ವಸಂಸ್ಥೆ ಘೋಷಣೆ: ಆಫ್ರಿಕಾದಲ್ಲಿ ಆತಂಕ ಮೂಡಿಸಿರುವ ಮಂಕಿಪಾಕ್ಸ್ ಇತ್ತೀಚಿಗೆ ಸ್ವೀಡನ್ ಮತ್ತು ಪಾಕಿಸ್ತಾನದಲ್ಲೂ ಪತ್ತೆಯಾಗಿತ್ತು. ಇದಾದ ಬಳಿಕ ಈ ರೋಗವನ್ನು 'ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ' ಎಂದು ವಿಶ್ವಸಂಸ್ಥೆ ಘೋಷಿಸಿದೆ.
ಇನ್ನು, ಈ ಸೋಂಕು ನಿಕಟ ಸಂಪರ್ಕದಲ್ಲಿದ್ದವರಲ್ಲಿ ಮಾತ್ರ ವರದಿಯಾಗಿದ್ದು, ಹೆಚ್ಚು ಸೋಂಕಿತವಲ್ಲ. ನಿಕಟ ಉಸಿರಾಟ ಸಂಬಂಧವಿದ್ದಲ್ಲಿ ಇದರ ಹರಡುವಿಕೆ ಕಂಡುಬಂದಿದೆ.
ಇದನ್ನೂ ಓದಿ: ನಿಮಗೆ ಈ ರೋಗ ಲಕ್ಷಣಗಳಿದ್ದರೆ ಜಾಗರೂಕರಾಗಿರಿ: ಅದು 'ಮಂಕಿಪಾಕ್ಸ್' ಆಗಿರಬಹುದು!