ಜೀನ್ಸ್ ಧರಿಸಿ ನಿದ್ರೆ ಮಾಡುತ್ತೀರಾ ಎಚ್ಚರ!: ಸ್ವಲ್ಪ ಯಾಮಾರಿದ್ರೂ ಈ ಸಮಸ್ಯೆಗೆ ತುತ್ತಾಗುತ್ತೀರಾ ಜಾಗ್ರತೆ - Side Effects of Sleeping in Jeans - SIDE EFFECTS OF SLEEPING IN JEANS
ಜೀನ್ಸ್ ಧರಿಸಿ ಮಲಗುವುದರಿಂದ ಏನಾಗುತ್ತದೆ. ಯಾವೆಲ್ಲ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗುವ ಗಂಭೀರ ಸಮಸ್ಯೆಗಳು ಯಾವುವು? ಸಂಶೋಧನೆ ಏನು ಹೇಳುತ್ತದೆ ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ಅರಿತುಕೊಳ್ಳೋಣ.
Published : Jun 22, 2024, 12:29 PM IST
Sleeping with Jeans: ಆಧುನಿಕ ಜಗತ್ತಿನಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಧಿರಿಸುಗಳಲ್ಲಿ ಜೀನ್ಸ್ ಕೂಡ ಒಂದು. ಇದು ಹೆಣ್ಣು, ಗಂಡು, ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೇ ಎಲ್ಲಾ ವಯೋಮಾನದವರಿಗೆ ಹೊಂದಾಣಿಕೆ ಆಗುತ್ತದೆ. ಹಾಗಾಗಿ ಹೆಚ್ಚಿನ ಜನರು ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೇ ಕೆಲವರು ರಾತ್ರಿ ಮಲುಗುವ ವೇಳೆ ಜೀನ್ಸ್ ಧರಿಸಿ ನಿದ್ರಿಸುತ್ತಾರೆ. ಹೀಗೆ ಮಾಡುವುದರಿಂದ ತುಂಬಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು. ಒಂದು ವೇಳೆ ನೀವು ಜೀನ್ಸ್ ಧರಿಸಿ ನಿದ್ರಿಸುವ ಅಭ್ಯಾಸ ಹೊಂದಿದ್ದರೇ ಇಂದಿನಿಂದಲೇ ಬಿಟ್ಟುಬಿಡಿ. ಇಲ್ಲದಿದ್ದರೇ ಈ ಗಂಭೀರ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಹಾಗಾದರೆ ಆ ಸಮಸ್ಯೆಗಳು ಯಾವವು ಮತ್ತು ಜೀನ್ಸ್ ಧರಿಸುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯೋಣ.
ಫಂಗಲ್ ಇನ್‌ಫೆಕ್ಷನ್ಸ್: ಜೀನ್ಸ್ ಎಂಬುದನ್ನು ಡೆನಿಮ್ ಫ್ಯಾಬ್ರಿಕ್ನಿಂದ ತಯಾರಿಸಲಾಗುತ್ತದೆ. ಈ ಬಟ್ಟೆ ನಮ್ಮ ದೇಹದ ಹೊರ ಬರುವ ಬೆವರನ್ನು ಹೀರಿಕೊಳ್ಳುವ ಗುಣವನ್ನು ಹೊಂದಿಲ್ಲ. ಹಾಗಾಗಿ ಜೀನ್ಸ್ ಧರಿಸಿದ ವೇಳೆ ನಮ್ಮ ಗುಪ್ತಾಂಗ, ತೊಡೆ, ಕಾಲು ಭಾಗದಲ್ಲಿ ಬೆವರು ಹಾಗೇ ಉಳಿದುಕೊಂಡಿರುತ್ತದೆ. ರಾತ್ರಿಯೂ ಇದನ್ನು ಧರಿಸಿ ಮಲಗುವುದರಿಂದ ಫಂಗಲ್ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜತೆಗೆ ಇದು ಸಂತಾನೋತ್ಪತ್ತಿ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ 2018ರ ಅಧ್ಯಯನದ ಪ್ರಕಾರ ಬಿಗಿಯಾದ ಜೀನ್ಸ್ ಧರಿಸುವುದರಿಂದ ಫಂಗಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಬ್ರೆಜಿಲ್‌ನ ಸಾವೊ ಪಾಲೊದಲ್ಲಿರುವ ಯೂನಿವರ್ಸಿಡೇಡ್ ಎಸ್ಟಾಡ್ಯುಯಲ್ ಡಿ ಕ್ಯಾಂಪನಿಯಾಸ್‌ನ ಚರ್ಮರೋಗ ತಜ್ಞ ಡಾ. ಬಿಯಾಂಕಾ ಶಾನ್ ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
ಚರ್ಮದ ಮೇಲೆ ದದ್ದುಗಳು: ಬಿಗಿಯಾದ ಜೀನ್ಸ್ ಧರಿಸಿ ನಿದ್ರಿಸುವುದರಿಂದ ಗಾಳಿಯ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ತ್ವಚೆಯಲ್ಲಿ ತುರಿಕೆ, ದದ್ದು, ಕೆಂಪಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗಿದೆ. ಹಾಗಾಗಿ ಆದಷ್ಟು ಕಡಿಮೆ ಸಮಯ ಜೀನ್ಸ್ ಧರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಅದರಲ್ಲೂ ಹೆಚ್ಚಾಗಿ ಬೆವರುವವರು ಈ ವಿಷಯದಲ್ಲಿ ಜಾಗರೂಕರಾಗಿರುವುದು ಉತ್ತಮ.
ನಿದ್ರೆಗೆ ಅಡ್ಡಿ: ದೇಹದ ಉಷ್ಣತೆಯು ಸಾಮಾನ್ಯವಾಗಿ ನಿದ್ರೆಗೆ ಜಾರಿದ ಕೆಲವೇ ಗಂಟೆಗಳಲ್ಲಿ ಕ್ರಮೇಣ ಕಡಿಮೆಯಾಗುತ್ತದೆ. ಆದಾಗ್ಯೂ, ನೀವು ಜೀನ್ಸ್ ಧರಿಸಿ ಮಲಗಿದಾಗ, ಗಾಳಿಯ ಸಂಚಾರ ಸರಿಯಾಗಿ ಆಗುವುದಿಲ್ಲ ಮತ್ತು ದೇಹದ ಉಷ್ಣತೆಯು ಮತ್ತಷ್ಟು ಹೆಚ್ಚಾಗುತ್ತದೆ, ಇದು ನಿದ್ರೆಗೆ ಅಡ್ಡಿಪಡಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ.
ತೀವ್ರ ನೋವು: ಜೀನ್ಸ್ ನಂತಹ ಬಿಗಿಯಾದ ಬಟ್ಟೆ ಧರಿಸಿ ಮಲಗುವುದರಿಂದ ಗರ್ಭಾಶಯ, ಹೊಟ್ಟೆ ಮತ್ತು ಜನನಾಂಗಗಳ ಮೇಲೆ ಒತ್ತಡ ಬೀಳುತ್ತದೆ ಮತ್ತು ಆ ಭಾಗಗಳಿಗೆ ರಕ್ತ ಸಂಚಾರ ಸರಾಗವಾಗಿ ಆಗುವುದಿಲ್ಲ ಎನ್ನುತ್ತಾರೆ ತಜ್ಞರು. ಇವೆಲ್ಲದರಿಂದ ಮುಟ್ಟಿನ ಸಮಯದಲ್ಲಿ ನೋವು ಜಾಸ್ತಿಯಾಗುತ್ತದೆ.
"ಪೇನ್" ಜರ್ನಲ್‌ನಲ್ಲಿ ಪ್ರಕಟವಾದ 2018ರ ಅಧ್ಯಯನವು ಸಡಿಲವಾದ ಬಟ್ಟೆಗಳನ್ನು ಧರಿಸಿದ ಮಹಿಳೆಯರಿಗಿಂತ ಬಿಗಿಯಾದ ಬಟ್ಟೆಗಳನ್ನು ಧರಿಸಿದ ಮಹಿಳೆಯರು ಹೆಚ್ಚು ಮುಟ್ಟಿನ ನೋವನ್ನು ಅನುಭವಿಸುತ್ತಾರೆ ಎಂದು ಕಂಡುಹಿಡಿದಿದೆ. ಟರ್ಕಿಯ ಡೊಕುಜ್ ಎಟೆಲಿಕ್ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕ ಡಾ. ಡೆನಿಜ್ ಯಿಲ್ಮಾಜ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ಜೀರ್ಣಕ್ರಿಯೆ ಸಮಸ್ಯೆ: ಬಿಗಿಯಾದ ಜೀನ್ಸ್ ಧರಿಸಿ ನಿದ್ರಿಸುವುದರಿಂದ ಕೆಲವಲ್ಲಿ ಹೊಟ್ಟೆನೋವು, ಅಜೀರ್ಣ, ಹೊಟ್ಟೆ ಉಬ್ಬರ, ಮುಂತಾದ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ವೈದ್ಯರು. ಹಾಗಾಗಿ ಜೀನ್ಸ್ ಧರಿಸಿ ಮಲಗುವುದನ್ನು ನಿಲ್ಲಿಸಿ ನಿದ್ರಾ ಸಮಯದಲ್ಲಿ ಸಾಧ್ಯವಾದಷ್ಟು ಸಡಿಲವಾದ ಹತ್ತಿ ಬಟ್ಟೆಗಳು ಧರಿಸಿ ಮಲುಗುವುದು ಸೂಕ್ತ.
ವಿಶೇಷ ಸೂಚನೆ: ಇಲ್ಲಿ ನೀಡಿರುವ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ.