ನವದೆಹಲಿ: ಮಾರಣಾಂತಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಆರಂಭಿಕ ಪತ್ತೆ ಕಾರ್ಯ ಅಗತ್ಯ. ಈ ಹಿನ್ನೆಲೆಯಲ್ಲಿ ಮಹಿಳೆಯರು ತಿಂಗಳಿಗೊಮ್ಮೆ ಸ್ವಯಂ ಸ್ತನ ಪರೀಕ್ಷೆಗೆ ಮುಂದಾಗುವುದು ಉತ್ತಮ. ಜಾಗತಿಕವಾಗಿ ಮಹಿಳೆಯರನ್ನು ಹೆಚ್ಚು ಕಾಡುವ ಸಾಮಾನ್ಯ ಕ್ಯಾನ್ಸರ್ನಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದತ್ತಾಂಶದ ಪ್ರಕಾರ, 2022ರಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಕ್ಯಾನ್ಸರ್ಗೆ 2,10,108 ಮಂದಿ ಬಲಿಯಾಗಿದ್ದು, ಇದರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಶೇ 28.2ರಷ್ಟಿದೆ ಎಂಬುದುನ್ನು ಗಮನಿಸಬೇಕು.
ಸ್ವಯಂ ಪತ್ತೆ ಹೇಗೆ?: ಸ್ತನ ಕ್ಯಾನ್ಸರ್ನ ಸಾಮಾನ್ಯ ಸೂಚನೆಗಳನ್ನು ಮಹಿಳೆಯರು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದು. ಇದು ಕೇವಲ 3ರಿಂದ 4 ನಿಮಿಷದಲ್ಲಿ ಸಾಧ್ಯವಿದೆ. ಮಹಿಳೆಯರಿಗೆ ಅವರ ಸಾಮಾನ್ಯ ಸ್ತನದ ಪರಿಚಯವಿರುತ್ತದೆ. ಮೊದಲು, ಸ್ತನದಲ್ಲಿನ ಬದಲಾವಣೆಗಳನ್ನು ತಕ್ಷಣ ಗಮನಿಸಿ. ಸ್ತನದಲ್ಲಾಗುವ ಸಣ್ಣ ವ್ಯತ್ಯಾಸಗಳನ್ನು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿ. ಇದರಿಂದ ಮುಂದಾಗುವ ಅಪಾಯಗಳನ್ನು ಆರಂಭದಲ್ಲಿಯೇ ತಪ್ಪಿಸಬಹುದು ಎನ್ನುತ್ತಾರೆ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ತಜ್ಞೆ ಡಾ.ಗರಿಮ ದಗಾ.
ಸ್ತನ ಸ್ವಯಂ ಪರೀಕ್ಷೆ ಆರೋಗ್ಯಯುತವೂ ಹೌದು. ಸ್ತನದ ತ್ವಚೆಯ ಬಿಗಿತನ, ಸೋರುವಿಕೆ, ಹುಣ್ಣು, ಸ್ತನ, ಕಂಗುಳಿ ಅಥವಾ ಸ್ತನಗಳ ಕೆಳಗೆ ಗಡ್ಡೆಯಂತಹ ಅನುಭವಗಳು ಉಂಟಾದಲ್ಲಿ ವೈದ್ಯರ ಗಮನಕ್ಕೆ ತಪ್ಪದೇ ತನ್ನಿ.
ಸ್ತನ ಕ್ಯಾನ್ಸರ್ನ ಸಾಮಾನ್ಯ ಲಕ್ಷಣಗಳು: ಗಡ್ಡೆ ಅಥವಾ ಸ್ತನಗಳಲ್ಲಿ ರಕ್ತ ಅಥವಾ ಹಸಿರು ಆಕಾರದ ಸ್ತ್ರಾವ ಕಂಡುಬಂದರೆ, ಜಾಗ್ರತೆ ವಹಿಸುವುದು ಅತೀ ಅಗತ್ಯ. ಸಾಮಾನ್ಯವಾಗಿ, ಸ್ತನ ಕ್ಯಾನ್ಸರ್ ವಯಸ್ಸಾದವರನ್ನು ಕಾಡುತ್ತದೆ. ಆದರೆ, ಕಳೆದ ಮೂರು ದಶಕಗಳಿಂದ ಇದು 40 ಅಥವಾ 50ರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರಲ್ಲೂ ಕಂಡುಬರುತ್ತಿದೆ.
ಆರಂಭಿಕ ಪತ್ತೆಯ ಮಹತ್ವ: ತಜ್ಞರ ಪ್ರಕಾರ, ಆನುವಂಶಿಕತೆ, ಪರಿಸರ ಮತ್ತು ಜೀವನಶೈಲಿಗಳು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯಯುತ ದೇಹ ತೂಕ, ಆರೋಗ್ಯಯುತ-ಸಮತೋಲಿತ ಆಹಾರಗಳು, ನಿಯಮಿತ ವ್ಯಾಯಾಮಗಳಂತಹ ಜೀವನಶೈಲಿ ಬದಲಾವಣೆ ಮೂಲಕ ಖಾಯಿಲೆ ತಡೆಗಟ್ಟಬಹುದು.
ಪ್ರತಿ ತಿಂಗಳು ಸ್ತನದ ಸ್ವಯಂ ಪರೀಕ್ಷೆಯು ಆರಂಭಿಕ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಕಾರಣ ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ನಲ್ಲಿ ಯಾವುದೇ ನೋವು ಕಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಬೇಕು ಎಂದು ಚೆನ್ನೈನ ಅಪೋಲೊ ಪ್ರೊಟೊನ್ ಕ್ಯಾನ್ಸರ್ ಕೇಂದ್ರದ ಅನ್ಕೊಪ್ಲಾಸ್ಟಿಕ್ ಬ್ರೆಸ್ಟ್ ಸರ್ಜನ್ ಡಾ.ಮಂಜುಳ ರಾವ್ ತಿಳಿಸಿದ್ದಾರೆ.
ಸ್ತನದಲ್ಲಿ ಆರಂಭಿಕ ಹಂತದಲ್ಲಿ ಉಂಟಾಗುವ ಸಣ್ಣ ಗಂಟುಗಳ ಪತ್ತೆಯನ್ನು ಕಡಿಮೆ ತೀವ್ರತರದ ಚಿಕಿತ್ಸೆ ಮತ್ತು ಕಡಿಮೆ ಆಕ್ರಮಣಕಾರಿ ಸರ್ಜರಿ ಮೂಲಕ ಪರಿಹರಿಸಬಹುದು. ಆರಂಭಿಕ ಹಂತದ ಪತ್ತೆ ಮೂಲಕ ಶೇ 90ರಿಂದ 95ರಷ್ಟು ಗುಣಮುಖಗೊಳಿಸಬಹುದು. ಇದರಿಂದ ಗುಣಮುಖ ದರ ಕೂಡಾ ಹೆಚ್ಚುತ್ತಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹೀನಾ ಖಾನ್ಗೆ ಸ್ತನ ಕ್ಯಾನ್ಸರ್: ಬ್ರೆಸ್ಟ್ ಕ್ಯಾನ್ಸರ್ ವಿರುದ್ಧ ಹೋರಾಡಿದ ನಟಿಮಣಿಯರಿವರು