ಹೈದರಾಬಾದ್: ದೇಶದಲ್ಲಿ ಸರಿಸುಮಾರು 70 ಲಕ್ಷ ಮಂದಿ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಇತ್ತೀಚಿನ ಸಂಶೋಧನೆಯಲ್ಲಿ ಬಹಿರಂಗಗೊಂಡಿದೆ ಎಂದು ಕಿಮ್ಸ್ ಸಿಎಂಡಿ ಡಾ ಬೊಲ್ಲಿನೆನಿ ಭಾಸ್ಕರ್ ರಾವ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಪಾರ್ಕಿನ್ಸನ್ ದಿನದ ಹಿನ್ನೆಲೆ ಈ ಸಮಸ್ಯೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಸಿಕಂದರಾಬಾದ್ನ ಕೃಷ್ಣ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಆಯೋಜಿಸಲಾಗಿತ್ತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ನರರೋಗ ತಜ್ಞರಾದ ಸೀತಾಜಯಲಕ್ಷ್ಮಿ, ನರಶಸ್ತ್ರಚಿಕಿತ್ಸಕರಾದ ಡಾ ಮನಸ್ ಪಣಿಗ್ರಹಿ, ಪಾರ್ಕಿನ್ಸನ್ ತಜ್ಞ ಡಾ ಜಯಶ್ರೀ, ಡಾ ಮೋಹನ್ದಾಸ್, ಡಾ ಪ್ರವೀಣ್ ಮತ್ತು ಇತರರು ಉಪಸ್ಥಿತರಿದ್ದರು. ವ್ಯಕ್ತಿಯ ಅಂಗವಿಕಲತೆ ಮತ್ತು ಸಾವಿಗೆ ಪಾರ್ಕಿನ್ಸನ್ ಎಂಬ ನರ ಸಮಸ್ಯೆ ಕಾರಣವಾಗುತ್ತಿದೆ. 40 ವರ್ಷ ದಾಟಿದ ಲಕ್ಷದಲ್ಲಿ 94 ಮಂದಿ ಈ ರೋಗದ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವೈದ್ಯರು ತಿಳಿಸಿದರು.
ಲಕ್ಷಣ ಅರಿಯಿರಿ: ಪಾರ್ಕಿನ್ಸನ್ ರೋಗದ ಪ್ರಮುಖ ಲಕ್ಷಣ ಎಂದರೆ ಕೈ ನಡುಗುವಿಕೆ, ಮಾತನಾಡಲು ಕಷ್ಟಪಡುವುದು ಮತ್ತು ನಡೆಯಲು ಸಾಧ್ಯವಾಗದಿರುವುದಾಗಿದೆ. ನೂರಾರು ವರ್ಷದ ಹಿಂದೆ ಆಯುರ್ವೇದವನ್ನು ಕಂಪವತಂ ಎಂದು ಕರೆಯಲಾಗುತ್ತಿತ್ತು. ಕಂಪ ಎಂದರೆ ನಡುಗುವಿಕೆ ಮತ್ತು ವತಂ ಎಂದರೆ ಸ್ನಾಯು ಸಮಸ್ಯೆ. ಆ ಸಮಯದಲ್ಲಿ ಈ ಸಮಸ್ಯೆಗೆ ವೆಲ್ವೆಟ್ ಬೀನ್ ಸಸ್ಯದ ಸಹಾಯದಿಂದ ಚಿಕಿತ್ಸೆ ನೀಡುತ್ತಿದ್ದರು. ಈ ರೋಗವೂ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರನ್ನು ಕಾಡುತ್ತದೆ ಎಂದು ವೈದ್ಯರಾದ ಡಾ ಜಯಶ್ರೀ ತಿಳಿಸಿದ್ದಾರೆ.
ಆಳ ಮಿದುಳಿನ ಪ್ರಚೋದಕ ಶಸ್ತ್ರಚಿಕಿತ್ಸೆ ಸಮಸ್ಯೆ ಪರಿಹಾರಕ್ಕೆ ಜನಜನಿತ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯನ್ನು ರೋಗಿಯ ವಯಸ್ಸು ಮತ್ತು ಪರಿಸ್ಥಿತಿ ಆಧರಿಸಿ ನಿರ್ಧರಿಸಲಾಗುವುದು ಎಂಡು ಡಾ ಮಾನಸ ತಿಳಿಸಿದ್ದಾರೆ.
ಏನಿದು ಪಾರ್ಕಿನ್ಸನ್ ಕಾಯಿಲೆ?: ಪಾರ್ಕಿನ್ಸನ್ ಕಾಯಿಲೆಯು ನರ ಸಂಬಂಧಿ ಸಮಸ್ಯೆ ಆಗಿದೆ. ಪಾರ್ಕಿನ್ಸನ್ ಡಾಟ್ ಆರ್ಗ್ ಪ್ರಕಾರ, ಮೆದುಳಿನ ನಿರ್ದಿಷ್ಟ ಭಾಗದಲ್ಲಿ ಸಬ್ಸ್ಟಾಂಟಿಯಾ ನಿಗ್ರಾದಲ್ಲಿ ಡೋಪಮೈನ್-ಉತ್ಪಾದಿಸುವ ನರಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗ ಯಾವುದೇ ಲಕ್ಷಣ ತೋರಿಸದೇ ನಿಧಾನವಾಗಿ ಬೆಳವಣಿಗೆ ಕಂಡು ಗೋಚರವಾಗುತ್ತದೆ. ಅಲ್ಲದೇ ಇದರ ಲಕ್ಷಣ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಈ ಅಸ್ವಸ್ಥತೆಯಿಂದಾಗಿ ಕೈ ಕಾಲು ನಡುಗುತ್ತದೆ. ದೇಹದ ಸಮತೋಲನ ಕಷ್ಟವಾಗುತ್ತದೆ. ಈ ರೋಗಕ್ಕೆ ಇದುವರೆಗೂ ನಿರ್ದಿಷ್ಟವಾದ ಚಿಕಿತ್ಸೆಯನ್ನು ಪತ್ತೆ ಮಾಡಿಲ್ಲ. ಈ ಅಸ್ವಸ್ಥತೆ ಪತ್ತೆಯಾದವರು ಸೂಕ್ತ ಆಹಾರ ಕ್ರಮದ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗ ನಿಯಂತ್ರಣ ಮಾಡಬಹುದು. ಈ ರೋಗ ಮಾರಣಾಂತಿಕವಲ್ಲದೇ ಇದ್ದರೂ ಗಂಭೀರ ಸ್ವರೂಪದಿಂದ ಕೂಡಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಎಚ್ಚರ! ಪಾರ್ಕಿನ್ಸನ್ ರೋಗ ಅಪಾಯ ಹೆಚ್ಚಿಸುತ್ತದೆ ವಾಯು ಮಾಲಿನ್ಯ