ಅತ್ಯುತ್ತಮ ಆರೋಗ್ಯಕರ ಆಹಾರಗಳಲ್ಲಿ ಹಾಲು ಕೂಡಾ ಒಂದು. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯಂತಹ ಸಮೃದ್ಧ ಗುಣಗಳನ್ನು ಹೊಂದಿರುವ ಹಾಲು ಸೇವಿಸಿದರೆ ಕೆಲವರಿಗೆ ಆರೋಗ್ಯ ಸಮಸ್ಯೆ ಬಿಗಡಾಯಿಸುತ್ತದೆ. ಹೀಗಾಗಿ, ಮಗುವಿದ್ದಾಗಿನಿಂದಲೇ ಕೆಲವರು ಹಾಲಿನಿಂದ ಅಂತರ ಹೊಂದಿರುತ್ತಾರೆ. ಹಾಲು ಪೌಷ್ಟಿಕಾಂಶಯುಕ್ತ ಎಂದು ಎಳೆಯ ವಯಸ್ಸಿನಲ್ಲೂ ಪೋಷಕರು ಅಭ್ಯಾಸ ಮಾಡಿದರೂ, ಹಾಲಿಗೂ ಅವರಿಗೂ ಅಷ್ಟಕ್ಕಷ್ಟೇ. ಕೆಲವೊಮ್ಮೆ ಒತ್ತಾಯಪೂರ್ವಕವಾಗಿ ಸೇವಿಸಿದರೆ, ಆರೋಗ್ಯ ಏರುಪೇರಾಗುತ್ತದೆ.
ಹಾಲಿನಲ್ಲಿ ಲ್ಯಾಕ್ಟೋಸ್ ಎಂಬ ಸಕ್ಕರೆಯ ಅಂಶವಿದೆ. ಈ ನೈಸರ್ಗಿಕ ಸಕ್ಕರೆಯನ್ನು ಸಣ್ಣ ಕರುಳಿನಿಂದ ಹುಟ್ಟುವ ಲ್ಯಾಕ್ಟೇಸ್ ಕಿಣ್ವಗಳು ವಿಭಜಿಸಿ, ಹಾಲನ್ನು ಜೀರ್ಣಿಸುತ್ತವೆ. ಇದು ಜೀರ್ಣವಾಗದೇ ಹೋದಾಗ ಹಾಲು ದೇಹಕ್ಕೆ ಸೂಕ್ತವಲ್ಲ. ಆದರೆ, ಮಗು ಹುಟ್ಟಿದ ಐದು ವರ್ಷಗಳ ಬಳಿಕ ನೈಸರ್ಗಿಕವಾಗಿ ಇದರ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಕೆಲವರು ಆನುವಂಶಿಕವಾಗಿ ಕಡಿಮೆ ಮಟ್ಟದ ಲ್ಯಾಕ್ಟೇಸ್ ಕಿಣ್ವ ಹೊಂದಿರುತ್ತಾರೆ. ಇದರಿಂದ ಕೊಂಚ ಹಾಲು ಸೇವಿಸಿದರೂ ಸಾಕು ಅವರಿಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದು.
ಈ ರೀತಿ ಹಾಲಿನ ಅಲರ್ಜಿಯನ್ನು ಲ್ಯಾಕ್ಟೇಸ್ ಅಸಹಿಷ್ಣು ಎನ್ನಲಾಗಿದೆ. ಲ್ಯಾಕ್ಟೇಸ್ ಕಿಣ್ವಗಳು ಸಾಮಾನ್ಯವಾಗಿ ಹಾಲಿನಿಂದ ಗ್ಲುಕೋಸ್ ಮತ್ತು ಗ್ಯಾಲಕ್ಟಿಸ್ ಸಕ್ಕರೆಯೊಳಗೆ ವಿಭಜನೆ ಹೊಂದುತ್ತದೆ. ಲ್ಯಾಕ್ಟೇಸ್ ಕಿಣ್ವಗಳು ಸಣ್ಣ ಕರುಳಿನಲ್ಲಿ ಹೆಚ್ಚಾಗಿ ಉತ್ಪಾದನೆಯಾಗದೇ ಹೋದಾಗ, ಹಾಲಿನಲ್ಲಿರುವ ಲ್ಯಾಕ್ಟೋಸ್ ಅಂಶ ನೇರವಾಗಿ ದೊಡ್ಡ ಕರುಳಿಗೆ ಹರಿಯುತ್ತದೆ. ಇಲ್ಲಿ ಅದು ಅಲ್ಲಿರುವ ಬ್ಯಾಕ್ಟೀರಿಯಾದೊಂದಿಗೆ ಪ್ರತಿಕ್ರಿಯಿಸುತ್ತದೆ. ಫಲಿತಾಂಶವಾಗಿ ಅತಿಸಾರ, ತಲೆ ಸುತ್ತು, ಕೆಲವು ಬಾರಿ ವಾಂತಿ, ಹೊಟ್ಟೆ ನೋವು, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಡುತ್ತವೆ.
ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಹಾಲು ಕುಡಿದ ಅರ್ಧಗಂಟೆಯಲ್ಲಿ ಕಾಣುತ್ತದೆ. ಹಾಲಿಗೂ ತಮಗೂ ಆಗುವುದಿಲ್ಲ ಎಂಬುದನ್ನು ಇದರಿಂದಲೇ ತಿಳಿಯಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು ಇರುವ ಮಾರ್ಗ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ತಪ್ಪಿಸುವುದು. ಆದರೆ, ಯೋಗರ್ಟ್ ಬೇಕಾದಲ್ಲಿ ಇವರು ಬಳಕೆ ಮಾಡಬಹುದು. ಇದು ಭಾಗಶಃ ಜೀರ್ಣವಾಗುವ ಹಾಲಿನಿಂದ ಮಾಡಲಾಗಿದ್ದು, ದೇಹದಲ್ಲಿ ಸುಲಭವಾಗಿ ಸೇರಿಕೊಳ್ಳುತ್ತದೆ. ಇಲ್ಲದೇ ಹೋದಲ್ಲಿ ಲ್ಯಾಕ್ಟೋಸ್ ಮುಕ್ತ ಹಾಲಿನ ಸೇವನೆಯನ್ನು ಇವರು ಮಾಡಬಹುದು.
ಇದನ್ನೂ ಓದಿ: ಹಾಲಿನಲ್ಲಿ ಸಕ್ಕರೆ ಮಿಕ್ಸ್ ಮಾಡಿ ಕುಡಿಯುತ್ತಿದ್ದೀರಾ?, ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ?