ನವದೆಹಲಿ: ಭಾರತ ಇಂದು ಅನಾರೋಗ್ಯದಿಂದ ಆರೋಗ್ಯದೆಡೆಗೆ ಪರಿವರ್ತನೆಯ ಪ್ರಯಾಣ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಭುವನೇಶ್ವರ ಕಲಿತಾ ತಿಳಿಸಿದ್ದಾರೆ. ಅಸೋಚಮ್ ರಾಷ್ಟ್ರೀಯ ಸಿಎಸ್ಆರ್ ಮಂಡಳಿಯಲ್ಲಿ ಅನಾರೋಗ್ಯದಿಂದ ಆರೋಗ್ಯದೆಡೆಗೆ ಎಂಬ ಜಾಗೃತಿ ಸಮಾವೇಶದ ಎರಡನೇ ಆವೃತ್ತಿಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯ ಮತ್ತು ಶುಚಿತ್ವದ ಪರಿಶೀಲನೆಯಲ್ಲಿ ಭಾರತ ಗಮನಾರ್ಹ ವಿಕಸನ ಕಂಡಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ 1,000 ಜನಸಂಖ್ಯೆಗೆ ಒಬ್ಬ ವೈದ್ಯ ಇರಬೇಕು ಎಂಬ ಮಾರ್ಗಸೂಚಿಯನ್ನು ಹೊಂದಿದೆ. ನಾವು ಇಂದು 900 ಜನರಿಗೆ ಒಬ್ಬ ವೈದ್ಯರನ್ನು ಹೊಂದುವ ಮೂಲಕ ಈ ಮಾರ್ಗಸೂಚಿಯಲ್ಲಿ ಸುಧಾರಣೆ ಸಾಧಿಸಿದ್ದೇವೆ. ಆರೋಗ್ಯ ಮತ್ತು ಶುಚಿತ್ವವು ನೈತಿಕ ಅಗತ್ಯತೆಯಾಗಿದ್ದು, ಇದು ಆರ್ಥಿಕ ಅವಶ್ಯಕತೆಯಲ್ಲ ಎಂದು ಅವರು ತಿಳಿಸಿದರು.
ಆರೋಗ್ಯ ಮತ್ತು ಶುಚಿತ್ವ ಎಂಬುದು ಆರೋಗ್ಯಯುತ ಸಮಾಜ ನಿರ್ಮಾಣದ ಎರಡು ಸ್ಥಂಭಗಳು. ಈ ಪ್ರಯಾಣ ಪ್ರಯಾಸದಾಯಕವಾಗಿದ್ದರೂ, ಸ್ಪೂರ್ತಿದಾಯಕವಾಗಿದೆ. ಸೋಂಕಿನ ವಿರುದ್ಧ ಹೋರಾಟದಿಂದ ಅನೇಕ ಆರೋಗ್ಯದ ಮುನ್ನೆಚ್ಚರಿಕೆ ವಹಿಸುವವರೆಗೆ ದೇಶದ ಸ್ವಾಸ್ಥ್ಯ ಕಾಪಾಡುವಲ್ಲಿ ಗಣನೀಯ ಸಾಧನೆ ಮಾಡಿದೆ. ಕಳೆದ ದಶಕದಲ್ಲಿ ನಾವು ತಾಯಂದಿರ ಮರಣ ದರ ಮತ್ತು ಶಿಶು ಮರಣ ದರ ಹಾಗೂ ಐದು ವರ್ಷದೊಳಗಿನ ಮಕ್ಕಳ ಸಾವಿನ ದರದಲ್ಲೂ ಇಳಿಕೆ ಸಾಧಿಸಿದ್ದೇವೆ.
ಆರೋಗ್ಯ ವಲಯದಲ್ಲಿ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿ ಮತ್ತು ಶುಚಿತ್ವ ಅಭ್ಯಾಸಕ್ಕೆ ಪ್ರಾಧಾನ್ಯತೆ ನೀಡುವುದರಿಂದ ಈ ಸಾಧನೆ ಸಾಧ್ಯವಾಗಿದೆ. ನಮ್ಮ ಸಮಾಜ ಆರೋಗ್ಯಯುತ ಪ್ರಜ್ಞಾಪೂರ್ವಕವಾಗುವ ನಿಟ್ಟಿನಲ್ಲಿ ಸರ್ಕಾರ ಕೂಡ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.
ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿದ್ದು, ಸಮುದಾಯಗಳನ್ನು ಜ್ಞಾನ ಮತ್ತು ಸಂಪನ್ಮೂಲಗಳಿಂದ ಸಬಲೀಕರಣ ಮಾಡಿ, ಜನರಿಗೆ ಆರೋಗ್ಯಯುತ ಸುರಕ್ಷತೆಯನ್ನು ಒದಗಿಸಲಾಗುತ್ತಿದೆ. ಸರ್ಕಾರ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸಿದೆ. ಇದೀಗ ನಾವು ಪ್ರತೀ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಹೊಂದಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಕೊರತೆಯಾಗುತ್ತಿರುವ ವೈದ್ಯರ ಸಂಖ್ಯೆಯನ್ನೂ ಕೂಡ ಶೀಘ್ರದಲ್ಲೇ ನಿವಾರಿಸುತ್ತೇವೆ ಎಂದು ಅವರು ವಿವರಿಸಿದರು.
2014ರಲ್ಲಿ ಅನಾರೋಗ್ಯದಿಂದ ಆರೋಗ್ಯದೆಡೆಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಆರೋಗ್ಯ ಸೇವಾ ಮುಂಜಾಗ್ರತೆಗಳೊಂದಿಗೆ ಇಂದು ಅನೇಕ ರೋಗಗಳ ನಿರ್ಮೂಲನೆ ಮತ್ತು ನಿಯಂತ್ರಣ ಸಾಧ್ಯವಾಗಿದೆ. ಪ್ರತಿಯೊಬ್ಬರ ಆರೋಗ್ಯ ಮತ್ತು ಕಾಳಜಿಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಸಭಾ ಸದಸ್ಯ ಭುವನೇಶ್ವರ ಕಲಿತಾ ಹೇಳಿದರು. (ಐಎಎನ್ಎಸ್)
ಇದನ್ನೂ ಓದಿ: ಲಸಿಕೆಗಳು ಕೇವಲ ಮಕ್ಕಳಿಗಾಗಿ ಅಲ್ಲ, ಅವು ವಯಸ್ಕರರಿಗೂ ಇವೆ : ಅವುಗಳು ಯಾವವು ಎಂದರೆ?