ನಾವು ಇಷ್ಟಪಡುವ ಬಟ್ಟೆಗಳ ಮೇಲೆ ಸ್ವಲ್ಪ ಕಲೆಯಾದರೂ ಸಾಕು, ಅದು ನಮ್ಮ ದಿನದ ಮೂಡನ್ನೇ ಹಾಳು ಮಾಡಿಬಿಡುತ್ತದೆ. ಬಿಳಿ, ತಿಳಿ ಗುಲಾಬಿ ಬಣ್ಣಗಳ ಪ್ಲೈನ್ ಬಟ್ಟೆಗಳ ಮೇಲಂತೂ ಸಣ್ಣ ಕಲೆಯಾದರೂ ಅದು ಬಟ್ಟೆಯ ಅಂದ ಕೆಡಿಸಿಬಿಡುತ್ತದೆ. ನಾವು ಅಂತಹ ಕಲೆಗಳನ್ನು ತೆಗೆಯಲು ಹರಸಾಹಸಪಟ್ಟು, ಕೊನೆಗೆ ಹೋಗದೇ ಬಟ್ಟೆಯನ್ನೇ ಬಿಸಾಕುವಂಥ ಸಂದರ್ಭವನ್ನೂ ಎದುರಿಸಿರುತ್ತೇವೆ. ಕೆಲವು ವಸ್ತುಗಳು ಬಟ್ಟೆ ಮೇಲೆ ಬಿದ್ದರೆ ಅವುಗಳನ್ನು ತೆಗೆಯುವುದು ಬಲು ಕಷ್ಟ. ಆದರೆ ಇಲ್ಲಿರುವ ಉಪಾಯಗಳನ್ನು ನೀವು ಪಾಲಿಸಿದರೆ ಎಂತಹ ಕಲೆಗಳನ್ನಾದರೂ ಸುಲಭವಾಗಿ ತೆಗೆದುಹಾಕಬಹುದು.
ವಿನೆಗರ್: ಬಟ್ಟೆಗಳ ಮೇಲೆ ಸಾಮಾನ್ಯವಾದ ಕಲೆಗಳಿದ್ದಲ್ಲಿ, ಅವುಗಳನ್ನು ಹೋಗಲಾಡಿಸಲು ಮನೆಯಲ್ಲಿಯೇ ಇರುವ ವಿನೆಗರ್ ಸಾಕು. ಎರಡು ಕಪ್ ನೀರಿಗೆ ಒಂದು ಚಮಚ ವಿನೆಗರ್ ಹಾಕಿ ಮಿಶ್ರಣ ಮಾಡಿ. ಆ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ. ನಿಧಾನವಾಗಿ ಉಜ್ಜಿ. ಕಲೆ ಕ್ರಮೇಣ ಮಾಯ.
ಬಟ್ಟೆಗಳ ಮೇಲೆ ಎಣ್ಣೆಯ ಕಲೆಗಳಾದರೂ ಅವುಗಳನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಮೊದಲು ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಕಲೆಯಾಗಿರುವ ಜಾಗಕ್ಕೆ ಡಿಶ್ವಾಶಿಂಗ್ ಲಿಕ್ವಿಡ್ ಹಾಕಿ. ಕಲೆ ಮಾಯವಾಗುವವರೆಗೆ ಚೆನ್ನಾಗಿ ಸ್ಕ್ರಬ್ ಮಾಡಿ. ಆಗಲೂ ಹೋಗದಿದ್ದರೆ, ಅಡುಗೆ ಸೋಡಾವನ್ನು ಕಲೆಯ ಮೇಲೆ ಹಾಕಿ ಸ್ವಲ್ಪ ಸಮಯ ಬಿಡಿ. ನಂತರ ಕಲೆ ಇರುವ ಜಾಗದಲ್ಲಿ ಉಜ್ಜಿ. ಅಂತಿಮವಾಗಿ, ಎರಡು ಕಪ್ ವಿನೆಗರ್ ಮಿಶ್ರಿತ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ, ಉಜ್ಜಿ.
ಕಳಪೆ ಗುಣಮಟ್ಟದ ಬಟ್ಟೆಗಳು ಮೊದಲ ಬಾರಿಗೆ ತೊಳೆಯುವಾಗಲೇ ಬಣ್ಣ ಮಸುಕಾಗುತ್ತದೆ. ನೀರಲ್ಲಿ ಹಾಕಿಟ್ಟಾಗ ಆ ಬಟ್ಟೆಯ ಬಣ್ಣ ಬೇರೆ ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಬಣ್ಣ ಇತರ ಬಟ್ಟೆಗಳನ್ನೂ ಹಾಳು ಮಾಡುತ್ತವೆ. ಅಂತಹ ಕಲೆಗಳನ್ನು ತೆಗೆದುಹಾಕಲು ಸಣ್ಣ ಬಿಳಿ ಬಟ್ಟೆಯನ್ನು ತೆಗೆದುಕೊಳ್ಳಿ. ಹೇರ್ ಸ್ಪ್ರೇ ಅಥವಾ ಶೇ 80 ಆಲ್ಕೋಹಾಲ್ ಹೊಂದಿರುವಂತಹ ಯಾವುದೇ ದ್ರಾವಣವನ್ನು ಸ್ಪ್ರೇ ಮಾಡಿ. ಬಟ್ಟೆಯಿಂದ ಕಲೆಯಾಗಿರುವ ಜಾಗವನ್ನು ಉಜ್ಜಿರಿ.
ಹೈಡ್ರೋಜನ್ ಪೆರಾಕ್ಸೈಡ್: ಕೆಲವೊಮ್ಮೆ ನಿಮ್ಮ ಬಟ್ಟೆಯ ಮೇಲೆ ರಕ್ತದ ಕಲೆಯಾಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಇವುಗಳನ್ನು ಹೋಗಲಾಡಿಸಲು ಹೈಡ್ರೋಜನ್ ಪೆರಾಕ್ಸೈಡ್ ಸಾಕು. ರಕ್ತದ ಕಲೆಯ ಮೇಲೆ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ, ಸ್ವಲ್ಪ ಹೊತ್ತು ನೆನೆಯಲು ಬಿಡಿ. ಸಂಪೂರ್ಣವಾಗಿ ನೆನೆದ ನಂತರ ಡಿಟರ್ಜೆಂಟ್ ಸೋಪಿನಿಂದ ತೊಳೆಯಿರಿ.
2011ರಲ್ಲಿ ಜರ್ನಲ್ 'ಟೆಕ್ಸ್ಟೈಲ್ ರಿಸರ್ಚ್'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೈಡ್ರೋಜನ್ ಪೆರಾಕ್ಸೈಡ್ ರಕ್ತದ ಕಲೆಗಳನ್ನು ತೆಗೆದುಹಾಕುವಲ್ಲಿ ಹೆಚ್ಚು ಪರಿಣಾಮಕಾರಿ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ ಹತ್ತಿ, ಪಾಲಿಸ್ಟರ್ ಮತ್ತು ಉಣ್ಣೆ ಸೇರಿದಂತೆ ವಿವಿಧ ರೀತಿಯ ಬಟ್ಟೆಗಳನ್ನು ಪರೀಕ್ಷೆ ಮಾಡಲಾಗಿತ್ತು. ಜವಳಿ ವಿಭಾಗದಲ್ಲಿ ಡಾಕ್ಟರೇಟ್ ಪಡೆದಿರುವ ಡಾ.ಮೇರಿ ಸ್ಮಿತ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
- ಶಾಯಿಯ ಕಲೆಗಳಿದ್ದರೆ, ಪೇಪರ್ ಟವೆಲ್‌ನಿಂದ ಒರೆಸಿ ನಂತರ ಹೇರ್ ಸ್ಪ್ರೇ ಸಿಂಪಡಿಸಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಇನ್ನು, ಚಾಕಲೇಟ್ ಕಲೆಗಳಾಗಿದ್ದರೆ, ಬೇಕಿಂಗ್ ಸೋಡಾ ಮಿಶ್ರಿತ ನೀರಿನಲ್ಲಿ ಬಟ್ಟೆಯನ್ನು ನೆನೆಸಿಟ್ಟು ನಂತರ ಡಿಟರ್ಜೆಂಟ್ನಿಂದ ತೊಳೆಯಿರಿ.
- ಹಸಿರು ಕಲೆಗಳಿದ್ದರೆ, ವಿನೆಗರ್/ನಿಂಬೆ ರಸದಿಂದ ತೆಗೆದುಹಾಕಬಹುದು. ವಿನೆಗರ್/ನಿಂಬೆ ರಸದಲ್ಲಿ ಕಲೆಯಾಗಿರುವ ಜಾಗವನ್ನು ನೆನೆಸಿಟ್ಟು, ಸ್ವಲ್ಪ ಸಮಯದ ನಂತರ ಸೋಪಿನಿಂದ ಸ್ವಚ್ಛಗೊಳಿಸಿ.
ಸೂಚನೆ: ಈ ಮೇಲಿನ ಅಂಶಗಳನ್ನು ಅನೇಕ ತಜ್ಞರು ಮತ್ತು ಸಂಶೋಧನೆಗಳು ಒದಗಿಸಿವೆ. ಅವರನ್ನು ಅನುಸರಿಸುವುದು ಅಥವಾ ಅನುಸರಿಸದೇ ಇರುವುದು ವೈಯಕ್ತಿಕ ವಿಷಯ.
ಇದನ್ನೂ ಓದಿ: ಕೂದಲು ಕಪ್ಪಾಗಬೇಕೇ? ತ್ವಚೆಯೂ ಹೊಳೆಯಬೇಕೇ? ಆಲೂಗಡ್ಡೆಯ ಹಲವು ಪ್ರಯೋಜನ ತಿಳಿಯಿರಿ - Health Benefits Of Potatoes