ನವದೆಹಲಿ: ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ತನ್ನ ಉತ್ಪನ್ನವಾದ PresVu ಐ ಡ್ರಾಪ್ಸ್ ಕುರಿತು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಅನೈತಿಕ ಮತ್ತು ಸುಳ್ಳು ಪ್ರಚಾರ ಮಾಡಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದೆ.
ಈ ಬಗ್ಗೆ ಎಂಟೋಡ್ ಫಾರ್ಮಾಸ್ಯುಟಿಕಲ್ಸ್‌ನ ಸಿಇಒ ನಿಖಿಲ್ ಕೆ ಮಸೂರ್ಕರ್ ಪ್ರತಿಕ್ರಿಯಿಸಿ, "ಪ್ರೆಸ್‌ವು ಐ ಡ್ರಾಪ್ಸ್ ಕುರಿತಾಗಿ ನಾವು ಯಾವುದೇ ಅನೈತಿಕ ಅಥವಾ ಸುಳ್ಳು ಸಂಗತಿಗಳನ್ನು ಮಾಧ್ಯಮಗಳಿಗೆ ಅಥವಾ ಸಾರ್ವಜನಿಕರಿಗೆ ನೀಡಿಲ್ಲ. ಮಾಧ್ಯಮಗಳಿಗೆ ಬಹಿರಂಗಪಡಿಸಲಾದ ಎಲ್ಲಾ ಸಂಗತಿಗಳು ವಯಸ್ಕರಲ್ಲಿ ಪ್ರೆಸ್ಬಿಯೋಪಿಯಾ ಚಿಕಿತ್ಸೆಗಾಗಿ ಅನುಮೋದಿತ ಸೂಚನೆ ಮತ್ತು ನಾವು ಮಾಡಿದ ಮೂರು ಹಂತಗಳ ಕ್ಲಿನಿಕಲ್ ಪ್ರಯೋಗ ದತ್ತಾಂಶದ ಆಧಾರಿತವಾಗಿವೆ. ಸುದ್ದಿಗಳಲ್ಲಿ ಪ್ರಕಟಿಸಲಾದ ಕೆಲವು ಅಭಿಪ್ರಾಯಗಳು ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಅಥವಾ ಅದರ ಯಾವುದೇ ವಕ್ತಾರರನ್ನು ಪ್ರತಿನಿಧಿಸುವುದಿಲ್ಲ" ಎಂದಿದ್ದಾರೆ.
"ಪ್ರೆಸ್‌ವು ಹಲವು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಫಲಿತಾಂಶವಾಗಿದೆ. ಈ ಡಿಸಿಜಿಐ ಅನುಮೋದನೆ ಭಾರತದಲ್ಲಿ ಕಣ್ಣಿನ ಆರೈಕೆಗೆ ನಮ್ಮ ಧ್ಯೇಯದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಪ್ರೆಸ್‌ವು ಲಕ್ಷಾಂತರ ಜನರಿಗೆ ತಮ್ಮ ಕಣ್ಣಿನ ದೃಶ್ಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪರಿಹಾರವಾಗಿದೆ. ನಾವೀನ್ಯತೆ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ "ಎಂದು ಹೇಳಿದ್ದಾರೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ಉನ್ನತ ಅಧಿಕೃತ ಮೂಲಗಳು ಪ್ರತಿಕ್ರಿಯಿಸಿ, ಕಂಪನಿಯು ನೀಡಿದ ಹೇಳಿಕೆಗಳು ಅನೈತಿಕ ಮತ್ತು ಸತ್ಯಾಂಶಗಳನ್ನು ತಪ್ಪಾಗಿ ಪ್ರಸ್ತುತಪಡಿಸುತ್ತವೆ ಎಂದು ತಿಳಿಸಿವೆ. ಮತ್ತೊಂದೆಡೆ, "ಇದು ಅನೈತಿಕ ಮತ್ತು ಸತ್ಯಗಳನ್ನು ತಪ್ಪಾಗಿ ಪ್ರಸ್ತುತಪಡಿಸಲಾಗಿದೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಂಪನಿಯಿಂದ ಅಧಿಕೃತ ವಿವರಣೆ ಕೋರಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಂಪನಿಯು ತನ್ನ ಉತ್ಪನ್ನ ಬಿಡುಗಡೆ ಮಾಡುವ ಸಮಯದಲ್ಲಿ, "ಪ್ರೆಸ್ಬಿಯೋಪಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕನ್ನಡಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾದ ಭಾರತದ ಮೊದಲ ಕಣ್ಣಿನ ಡ್ರಾಪ್ ಪ್ರೆಸ್‌ವು ಆಗಿದೆ. ಪ್ರೆಸ್‌ವು ಪೇಟೆಂಟ್‌ಗಾಗಿ ಸಹ ಅರ್ಜಿ ಸಲ್ಲಿಸಲಾಗಿದೆ. ಪ್ರೆಸ್‌ವು ಐ ಡ್ರಾಪ್ಸ್ ಕನ್ನಡಕಗಳ ಮೇಲಿನ ಅವಲಂಬನೆಯನ್ನಯ ಕಡಿಮೆ ಮಾಡುವ ಜೊತೆಗೆ ಕಣ್ಣುಗಳನ್ನು ಲ್ಯೂಬ್ರಿಕೇಟ್ ಮಾಡಲು ಪ್ರಯೋಜನಕಾರಿಯಾಗಿದೆ" ಎಂದು ಹೇಳಿತ್ತು.