ನವದೆಹಲಿ: ಸಮತೋಲಿತ ಆಹಾರ ಸೇವನೆಯಿಂದ ಕ್ಷಯ ರೋಗದಿಂದ ದೂರವಿರಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸಲಹೆ ನೀಡಿದೆ. ಸಮತೋಲಿತ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಕ್ಷಯದಂಥ ರೋಗ ಬರದಂತೆ ತಡೆಗಟ್ಟಬಹುದು ಎಂದು ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವಾಲಯ, "ಸಮತೋಲಿತ ಆಹಾರ ಸೇವನೆಯು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದರಿಂದ ಟಿಬಿಯಂಥ ರೋಗಗಳಿಂದ ದೂರವಿರಬಹುದು. ಆರೋಗ್ಯ ರಕ್ಷಣೆಗೆ ಸಮತೋಲಿತ ಆಹಾರ ಸೇವಿಸಿ ಮತ್ತು ದೇಶವನ್ನು ಕ್ಷಯಮುಕ್ತವಾಗಿಸಿ" ಎಂದು ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಭಾರತವು 2025 ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ. ಇದು 2030 ರ ಜಾಗತಿಕ ಗುರಿಗಿಂತ ಐದು ವರ್ಷ ಮುಂಚಿತವಾಗಿದೆ. ಭಾರತದಲ್ಲಿ 2.8 ಮಿಲಿಯನ್ ಕ್ಷಯರೋಗ ಪ್ರಕರಣಗಳಿದ್ದು, ಜಾಗತಿಕವಾಗಿ ನೋಡಿದರೆ ಶೇಕಡಾ 27ರಷ್ಟು ಕ್ಷಯ ರೋಗಿಗಳು ಭಾರತದಲ್ಲೇ ಇದ್ದಾರೆ.
ಭಾರತೀಯರು ಒಟ್ಟಾಗಿ ಕೆಲಸ ಮಾಡುವ ಮೂಲಕ ದೇಶವನ್ನು ಕ್ಷಯರೋಗದಿಂದ ಮುಕ್ತ ಮಾಡಬಹುದು ಎಂದು ಕಳೆದ ತಿಂಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದರು.
ದೇಶದ 25 ಲಕ್ಷ ಕ್ಷಯ ರೋಗಿಗಳಿಗೆ ಉಚಿತ ಔಷಧಿ, ಪರೀಕ್ಷೆ ಮತ್ತು ಪೌಷ್ಠಿಕಾಂಶಕ್ಕಾಗಿ ಸರ್ಕಾರ ವಾರ್ಷಿಕವಾಗಿ ಸುಮಾರು 3,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಫೆಬ್ರವರಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದರು. ದೇಶದ 10 ಲಕ್ಷ ಕ್ಷಯ ರೋಗಿಗಳನ್ನು ಸೇವಾ ಮನೋಭಾವದ ನಾಗರಿಕರು ದತ್ತು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಪ್ರತಿ ತಿಂಗಳು ಅವರು ರೋಗಿಗಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ವಿತರಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.
2022 ರ ಅಂಕಿ ಅಂಶಗಳ ಪ್ರಕಾರ ಸುಮಾರು 7.44 ಲಕ್ಷ ಕ್ಷಯ ರೋಗಿಗಳು ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಸರ್ಕಾರವು ಮಾಸಿಕ 500 ರೂ.ಗಳ ಸಹಾಯಧನ ನೀಡುತ್ತಿದೆ ಮತ್ತು ಸುಮಾರು ಒಂದು ಕೋಟಿ ಫಲಾನುಭವಿಗಳಿಗೆ ಸುಮಾರು 2,781 ಕೋಟಿ ರೂ.ಗಳನ್ನು ವಿತರಿಸಿದೆ. ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಎಚ್ಐವಿ ಬಾಧಿತ ಜನರಿಗೆ ಕ್ಷಯರೋಗ ತಗಲುವ ಸಾಧ್ಯತೆ ಶೇ 20ರಷ್ಟು ಹೆಚ್ಚು.
ಇದನ್ನೂ ಓದಿ : ವಿಶ್ವ ಆರೋಗ್ಯ ದಿನ: ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಭಾರತ ಇನ್ನೂ ಸಾಧಿಸಬೇಕಿರುವುದೇನು? - WORLD HEALTH DAY