ನವದೆಹಲಿ: 2023ರಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿ 11ರಲ್ಲಿ ಒಬ್ಬರು ತೀವ್ರ ಸ್ವರೂಪದ ಹಸಿವಿನಿಂದ ಬಳಲಿದ್ದು, 2030ರ ವೇಳೆಗೆ ದೀರ್ಘಕಾಲದ ಅಪೌಷ್ಟಿಕತೆಯಿಂದ 582 ಮಿಲಿಯನ್ ಜನರು ಬಳಲುವ ಸಾಧ್ಯತೆ ಇದೆ. ಇದು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ಹಿನ್ನಡೆಯಾಗಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
2008-2009ರ ಅಪೌಷ್ಠಿಕತೆ ವರದಿಗೆ ಹೋಲಿಸಿದರೆ ಈ ವಾರ್ಷಿಕ ವರದಿಯಲ್ಲಿ ಜಗತ್ತು 15 ವರ್ಷಗಳ ಹಿನ್ನಡೆ ಅನುಭವಿಸಿದೆ. ಸ್ತನ್ಯಪಾನ ಮತ್ತು ಬೆಳವಣಿಗೆ ಕುಂಠಿತದಂತಹ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊರತಾಗಿಯೂ ಜನರು ಆಹಾರದ ಅಭದ್ರತೆ ಮತ್ತು ಅಪೌಷ್ಠಿಕತೆಯನ್ನು ಎದುರಿಸುತ್ತಿದ್ದಾರೆ. ಇದು ಜಾಗತಿಕ ಹಸಿವಿನ ಮಟ್ಟವನ್ನು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿಸಿದೆ. 2019ರಲ್ಲಿ 152 ಮಿಲಿಯನ್ ಮಂದಿ ಮಧ್ಯಮ ಅಪೌಷ್ಟಿಕತೆ ಹೊಂದಿದ್ದರೆ, 2023ರಲ್ಲಿ 213ರಿಂದ 757 ಮಿಲಿಯನ್ ಮಂದಿ ಅಪೌಷ್ಟಿಕತೆ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ಆಫ್ರಿಕಾ ಖಂಡದಲ್ಲಿ ಹಸಿವಿನಿಂದ ಬಳಲುತ್ತಿರುವ ಶೇಕಡಾವಾರು ಜನಸಂಖ್ಯೆ ಏರುಗತಿಯಲ್ಲಿ ಸಾಗಿದೆ ಎಂದು ವರದಿ ಹೇಳುತ್ತದೆ. ಏಷ್ಯಾದಲ್ಲಿ ಹಸಿವಿನ ಶೇಕಡಾವಾರು ಪ್ರಮಾಣ (ಶೇ 8.1) ಸ್ಥಿರವಾಗಿದ್ದು, ಇಂದಿಗೂ ಗಮನಾರ್ಹ ಸವಾಲಾಗಿದೆ. ವಿಶ್ವಾದ್ಯಂತ ಹಸಿವಿನಿಂದ ಬಳಲುತ್ತಿರುವವರ ಪೈಕಿ ಅರ್ಧಕ್ಕಿಂತ ಹೆಚ್ಚಿನ ಜನರು ಇಲ್ಲಿದ್ದಾರೆ. ಲ್ಯಾಟಿನ್ ಅಮೆರಿಕ ಖಂಡ (ಶೇ 6.2) ಹಸಿವಿನ ದರ ಇಳಿಸುವಲ್ಲಿ ಪ್ರಗತಿ ಕಂಡಿದೆ.
ಹಸಿವಿನ ದರವನ್ನು ಎಲ್ಲಾ ಸೂಚಕಗಳ ಮೇಲೆ ಪತ್ತೆ ಮಾಡಿಲ್ಲ. ಆದರೂ ಸ್ಪಷ್ಟವಾಗಿರುವ ಅಂಶವೆಂದರೆ, 2030ರ ಹೊತ್ತಿಗೆ 582 ಮಿಲಿಯನ್ ಜನರು ದೀರ್ಘಕಾಲದ ಅಪೌಷ್ಠಿಕತೆ ಅಥವಾ ಹಸಿವಿನಿಂದ ಬಳಲುವ ಸಾಧ್ಯತೆ ಇದೆ ಎಂದು ಎಫ್ಎಒನ ಅರ್ಥಶಾಸ್ತ್ರಜ್ಞ ಮಾಕ್ಸಿಮೊ ಟೊರೆರೊ ತಿಳಿಸಿದ್ದಾರೆ.
ನಮ್ಮ ಗುರಿ ಸಾಧನೆಗೆ ನಾವು ಪ್ರಕ್ರಿಯೆಯನ್ನು ವೇಗಗೊಳಿಸಬೇಕು. 2023ರಲ್ಲಿ ಜಾಗತಿಕವಾಗಿ ಸುಮಾರು 233 ಬಿಲಿಯನ್ ಮಂದಿ ಮಧ್ಯಮ ಅಥವಾ ತೀವ್ರ ಆಹಾರ ಅಭದ್ರತೆ ಎದುರಿಸಿದರು. ಕೋವಿಡ್ ಸಮಯದಲ್ಲಿ ಈ ಪ್ರಮಾಣ ಹೆಚ್ಚಾಯಿತು. 864 ಮಿಲಿಯನ್ ಮಂದಿ ತೀವ್ರ ಆಹಾರ ಅಭದ್ರತೆ ಎದುರಿಸಿದ್ದು, ಒಂದು ಹೊತ್ತು ಊಟವನ್ನೂ ಹೊಂದಿರಿಲ್ಲ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಇನ್ನು ಈ ವರದಿ ಕಡಿಮೆ ಹಾಲುಣಿಸುವ ದರಗಳು, ಕಡಿಮೆ ಜನನ ತೂಕ ಮತ್ತು ರಕ್ತಹೀನತೆಯಂತಹ ಹಲವು ಸಂಕೀರ್ಣ ಸವಾಲು ಕುರಿತೂ ತಿಳಿಸಿದೆ. ಈ ಸಂಬಂಧ ಜಗತ್ತು ತುರ್ತಾಗಿ ಮಧ್ಯಪ್ರವೇಶಿಸಲೇಬೇಕಿದೆ ಎಂದು ಒತ್ತಿ ಹೇಳಿದೆ.(ಐಎಎನ್ಎಸ್)
ಇದನ್ನೂ ಓದಿ: ಅಸುರಕ್ಷಿತ ಆಹಾರ ಸೇವನೆಯಿಂದ ನಿತ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ 1.6ಮಿಲಿಯನ್ ಜನ; WHO ಕಳವಳ