ವರನಟ ಡಾ.ರಾಜ್‌ಕುಮಾರ್ ಮೊಮ್ಮಗ ಮತ್ತು ನಟ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಯುವ' ಚಿತ್ರ ರಾಜ್ಯಾದ್ಯಂತ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹಾಗೂ ಯುವ ರಾಜ್‌ಕುಮಾರ್ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ 'ಈಟಿವಿ ಭಾರತ' ಜೊತೆ ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
"ನನ್ನ ತಲೆಯಲ್ಲಿ ಮೊದಲೇ ಈ ಕಥೆಯ ಎಳೆಯಿತ್ತು. ಯುವ ರಾಜ್‌ಕುಮಾರ್ ಅವರಿಗೆ ಸಿನಿಮಾ ಮಾಡಬೇಕು ಅಂತಾ ನಿರ್ಧರಿಸಿದ ಮೇಲೆ ಇದ್ದಂತಹ ಕಥೆಯ ಎಳೆಯನ್ನು ಯುವಗಾಗಿ ಡಿಸೈನ್ ಮಾಡಿದೆವು. ಇದು ಅಪ್ಪು ಸರ್ಗೆ ಮಾಡಿದ ಕಥೆಯಲ್ಲ. ಅಪ್ಪು ಸರ್ ಅಗಲಿಕೆಯಿಂದ ಇಡೀ ಕುಟುಂಬ ನೋವಿನಲ್ಲಿತ್ತು. ಆ ಸಮಯದಲ್ಲಿ ಯುವರಾಜ್ ಕುಮಾರ್ ಅವರನ್ನು ಸಿನಿಮಾ ಇಂಡಸ್ಟ್ರಿಗೆ ಲಾಂಚ್ ಮಾಡಬೇಕು ಅಂದಾಕ್ಷಣ ನನಗೆ ದೊಡ್ಡ ಚಾಲೆಂಜ್ ಇತ್ತು. ಇನ್ನು ನಾವು ಸಿನಿಮಾ ಶೂಟಿಂಗ್‌ಗೆ ಹೋಗುವುದಕ್ಕಿಂತ ಮುಂಚೆ ಸುಮಾರು ಆರು ತಿಂಗಳು ಯುವಗೆ ಡ್ಯಾನ್ಸ್ ಹಾಗೂ ಫೈಟ್ ಬಗ್ಗೆ ಟ್ರೈನಿಂಗ್ ಮಾಡಿದೆವು. ಆಮೇಲೆ ಶೂಟಿಂಗ್ ಮಾಡಿದೆವು. ಯುವ ಕೂಡ ಬಹಳ ಬದ್ಧತೆ ಇರುವ ಹುಡುಗ. ಕೆಲಸದಲ್ಲಿ ಅವರಿಗೆ ಫೋಕಸ್ ಇದೆ. ಹಾಗಾಗಿ ಈ ಸಿನಿಮಾದಲ್ಲಿ ನನಗೆ ಅವರ ಜೊತೆಗೆ ಕೆಲಸ ಮಾಡುವುದು ಸುಲಭವಾಯಿತು" ಅಂತಾರೆ ಸಂತೋಷ್.
"ತಿಂಗಳು ಕಾಲ ಚರ್ಚೆ ಮಾಡಿ ಟೈಟಲ್ ಇಟ್ಟಿದ್ವಿ. ಈ ಟೈಟಲ್ ಅನ್ನು ನಮ್ಮ ನಿರ್ಮಾಪಕ ವಿಜಯ್ ಫೈನಲ್ ಮಾಡಿದರು. ಯಾಕಂದ್ರೆ ನಾನು ಯುವರತ್ನ ಸಿನಿಮಾ ಮಾಡಿದ್ದೆ. ಮತ್ತೆ ಅದೇ ಟೈಟಲ್ ಬ್ಯಾಕ್ ಟು ಬ್ಯಾಕ್ ಆಗುತ್ತೆ ಅಂತಾ ಹೇಳಿದ್ದೆ. ಇನ್ನು ಅಪ್ಪು ಸರ್ಗೆ ಅವರ ಮನೆಯಲ್ಲಿ ಅಪ್ಪು ಅಂತಾ ಕರೆಯುತ್ತಿದ್ದರು. ಹೀಗಾಗಿ ಅವರ ಚಿತ್ರಕ್ಕೆ ಆಗ ಅಪ್ಪು ಟೈಟಲ್ ಇಟ್ಟಿದ್ದರು. ಅದೇ ರೀತಿ ಯುವರಾಜ್ ಕುಮಾರ್ ಅಂತಾ ಹೆಸರು ಬದಲಿಸಿಕೊಂಡಾಗ 'ಯುವ' ಟೈಟಲ್ ಸೂಕ್ತ ಅಂತಾ ಅದನ್ನೇ ಇಟ್ವಿ" ಎಂದು ಅವರು ತಿಳಿಸಿದರು.
ರಗಡ್ ಯಂಗ್ ಹೀರೋಗಳ ಖಾಲಿತನ: "ನಮ್ಮ ಸಿನಿಮಾ ಇಂಡಸ್ಟ್ರಿಗೆ ಹೊಸ ಹೀರೋಗಳ ಅವಶ್ಯಕತೆ ಇದೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ರಗಡ್ ಆಗಿರುವ ಯಂಗ್ ಹೀರೋಗಳ ಖಾಲಿತನ ಆವರಿಸಿದೆ. ಅದನ್ನು ಯುವ ರಾಜ್‌ಕುಮಾರ್ ಖಂಡಿತಾ ನೀಗಿಸುತ್ತಾರೆ. ಈಗ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದರೆ ನಾವು ಎಷ್ಟು ಒಳ್ಳೆಯ ಕಂಟೆಂಟ್ ಅನ್ನು ಅವರಿಗೆ ನೀಡುತ್ತಿದ್ದೇವೆ ಎಂಬುದನ್ನು ಸಹ ನೋಡಬೇಕು. ಅವರಿಗೆ ಇಷ್ಟವಾಗುವಂತಹ ಕಂಟೆಂಟ್ ಕೊಟ್ಟು ಕರೆಸಬೇಕು" ಅನ್ನೋದು ಸಂತೋಷ್ ಮಾತು.
"ಇದರ ಜೊತೆಗೆ ಯಾವುದೇ ಸಿನಿಮಾದ ನಾಯಕ ಹೊಸಬರೇ ಆಗಿರಲಿ ಅಥವಾ ಸ್ಟಾರ್ ಆಗಿರಲಿ, ಜನರಿಗೆ ಆ ಕಂಟೆಂಟ್ ಮುಖ್ಯ. ಈ ನಿಟ್ಟಿನಲ್ಲಿ ಯುವ ಸಿನಿಮಾ ಕಂಟೆಂಟ್ ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗಲಿದೆ. ನಟನಾಗಿ ಯುವ ರಾಜ್‌ಕುಮಾರ್ ಕೂಡ ಗಮನ ಸೆಳೆಯುತ್ತಾರೆ. ಈ ಚಿತ್ರ ಹಲವು ಹೊಸಬರಿಗೆ ಸ್ಫೂರ್ತಿಯಾಗಲಿದೆ" ಎಂದಿದ್ದಾರೆ ಸಂತೋಷ್ ಆನಂದ್ ರಾಮ್.
ಇದನ್ನೂ ಓದಿ: ಸಿನಿಮಾ, ರಾಜಕೀಯ ಎರಡೂ ಇಲ್ಲ: ಅಚ್ಚರಿ ಮೂಡಿಸಿದ ನಟಿ ರಮ್ಯಾ ನಡೆ - Ramya
ಯುವ ಸರಳ, ಪ್ರಾಮಾಣಿಕ: "ಯುವ ರಾಜ್‌ಕುಮಾರ್ ಅಣ್ಣಾವ್ರ ಕುಟುಂಬದ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಸರಳ ಮತ್ತು ಪ್ರಾಮಾಣಿಕರಾಗಿದ್ದು, ಸ್ಕ್ರಿಪ್ಟ್‌ಗೆ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ. ಯುವ ನೋಡ್ತಾ ಇದ್ರೆ ಅವರು ನಿರ್ದೇಶಕರ ನಟ. ಮೊದಲ ಸಿನಿಮಾದಲ್ಲಿಯೇ ದೊಡ್ಡ ಗೆಲುವು ಸಾಧಿಸಲು ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಅವರ ಕಣ್ಣಲ್ಲಿ ಒಂದು ಪವರ್ ಇದೆ ಹಾಗೆ ಫೈಯರ್ ಕೂಡ ಇದೆ. ಅದು ನನ್ನ ಕಥೆಯನ್ನು ನಾನು ಅಂದುಕೊಂಡಂತೆ ತೆರೆಯ ಮೇಲೆ ತರಲು ನನಗೆ ಸಹಾಯ ಆಯಿತು" ಎಂದು ತಿಳಿಸಿದರು.
"ಈ ಸಿನಿಮಾ ನನ್ನ ಒಬ್ಬನಿಂದ ಆಗಿಲ್ಲ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಬ್ಯಾಗ್ರೌಂಡ್ ಮ್ಯೂಜಿಕ್ ಸೂಪರ್ ಆಗಿದೆ. ಕ್ಯಾಮರಮ್ಯಾನ್ ಶ್ರೀಶು ಕುದುವಳ್ಳಿ, ಎಡಿಟರ್ ಹಾಗೂ ಆರ್ಟ್ ಡೈರೆಕ್ಟರ್, ನನ್ನ ಡೈರೆಕ್ಷನ್ ಡಿಪಾರ್ಟ್ಮೆಂಟ್ ಟೀಮ್ನ ಶ್ರಮದಿಂದಾಗಿ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ."
ಇದನ್ನೂ ಓದಿ: ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲೇ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ನಟ ಚಿರಂಜೀವಿ - Chiranjeevi
"ಯುವ ಸಿನಿಮಾ ಅಪ್ಪ ಮಗನ ಒಂದು ಸಂಬಂಧದ ಜೊತೆಗೆ ಚಿತ್ರದ ಕ್ಲೈಮಾಕ್ಸ್ನಲ್ಲಿ ಒಂದು ಸಂದೇಶ ಇದೆ. ಯುವ ಸಿನಿಮಾ ಆಗೋದಕ್ಕೆ ಮುಖ್ಯ ಕಾರಣ ಹೊಂಬಾಳೆ ಫಿಲ್ಮ್ಸ್ನ ನಿರ್ಮಾಪಕ ವಿಜಯ ಕಿರಂಗದೂರು. ಈ ಸಿನಿಮಾ ಸಿನಿಮಾ ಪ್ರೇಕ್ಷಕರಿಗೆ ಮೋಸ ಮಾಡೋಲ್ಲ" ಎಂಬ ಭರವಸೆಯನ್ನು ಸಂತೋಷ್ ಆನಂದರಾಮ್ ನೀಡಿದ್ದಾರೆ.