ಸಿನಿಮಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಪ್ರತೀ ವರ್ಷ ಅದ್ಧೂರಿಯಾಗಿ ನಡೆಯುತ್ತಿದೆ. ಅದರಂತೆ, ಇತ್ತೀಚೆಗೆ ಐಫಾ-2024 ಕೂಡಾ ಅದ್ಧೂರಿಯಾಗಿ ಜರುಗಿತು. ಆದ್ರೆ ಕಾರ್ಯಕ್ರಮದ ಆಯೋಜಕರ ವಿರುದ್ಧ ನಿರ್ದೇಶಕ ಹೇಮಂತ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಿನಿಮಾಗೆ ಪ್ರಶಸ್ತಿ ಬಂದಿದೆ ಎಂದು ಕರೆಸಿಕೊಂಡು, ಪ್ರಶಸ್ತಿ ಕೊಡದೇ ಕಾರ್ಯಕ್ರಮ ಮುಗಿಸಿದ್ದೇ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಿರ್ದೇಶಕರ ಅಸಮಾಧಾನಕ್ಕೆ ಕಾರಣ. ಈ ಬಗ್ಗೆ ಅವರು 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದಾರೆ.
''ಐಫಾ ಅವಾರ್ಡ್ಸ್ ಆಯೋಜಕರು ನಮಗೆ ಕರೆ ಮಾಡಿ ನಿಮ್ಮ ಸಿನಿಮಾಗೆ ಪ್ರಶಸ್ತಿ ನೀಡಲಾಗುತ್ತಿದೆ. ನೀವು ನಿಮ್ಮ ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆ ಅಬು ಧಾಬಿಗೆ ಬರಲು ಫ್ಲೈಟ್ ವ್ಯವಸ್ಥೆ ಮಾಡಿದ್ದೇವೆ ಎಂದು ಕರೆಸಿಕೊಂಡರು. ಆದ್ರೆ ಟಿವಿಯಲ್ಲಿ ತೋರಿಸುವಂತೆ ಅವಾರ್ಡ್ ಕಾರ್ಯಕ್ರಮ ಇರೋದಿಲ್ಲ. ಈ ಐಫಾ ಅವಾರ್ಡ್ ಆಯೋಜಕರು ಮೊದಲು ಹಿಂದಿ, ತೆಲುಗು, ತಮಿಳು ಮಲಯಾಳಂ ಸಿನಿಮಾ ಇಂಡಸ್ಟ್ರಿಯವರಿಗೆ ಪ್ರಶಸ್ತಿಗಳನ್ನು ಕೊಟ್ಟ ಮೇಲೆ ನಮ್ಮ ಕನ್ನಡ ಸಿನಿಮಾಗಳಿಗೆ ಅವಾರ್ಡ್ ಕೊಡುತ್ತಾರೆ. ಈ ಕಾರ್ಯಕ್ರಮ ಬೆಳಗ್ಗೆ 3 ಗಂಟೆ ಹೊತ್ತಿಗೆ ಪೂರ್ಣಗೊಂಡಿತು. ಕನ್ನಡ ಅಂತಾ ಬಂದಾಗ ಕಾಟೇರ ಸಿನಿಮಾಗೆ ಅವಾರ್ಡ್ ಕೊಟ್ರು. ಇದಾದ ನಂತರ ನಮ್ಮ ಸಿನಿಮಾ ಅನೌನ್ಸ್ ಮಾಡುತ್ತಾರೆಂದು ನಾನು ಮತ್ತು ನಮ್ಮ ಸಂಗೀತ ನಿರ್ದೇಶಕ ಚರಣ್ ರಾಜ್ ಕಾತರದಿಂದ ಕಾಯುತ್ತಿದ್ದೆವು. ಆದ್ರೆ ಕಾರ್ಯಕ್ರಮ ಪೂರ್ಣಗೊಂಡಿತು. ಆಗ ನನಗೆ ಬಹಳ ಆಶ್ಚರ್ಯ ಆಯಿತು. ಇದೇನು ಕಾರ್ಯಕ್ರಮ ಮುಗಿಸುತ್ತಿದ್ದಾರೆ. ನಮ್ಮ ಸಿನಿಮಾಗೆ ಅವಾರ್ಡ್ ಕೊಡಲಿಲ್ಲ ಎಂದು ಬೇಸರವಾಯಿತು'' - ನಿರ್ದೇಶಕ ಹೇಮಂತ್ ಎಂ.ರಾವ್
ಇಷ್ಟಾದ್ರೂ ಕೂಡಾ ನಾವು ಶನಿವಾರ ಮತ್ತು ಭಾನುವಾರ ದುಬೈನಲ್ಲೇ ಇದ್ದೆವು. ಆದ್ರೆ ಐಫಾ ಅವಾರ್ಡ್ ಆಯೋಜಕರಾಗಲಿ, ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವವರಾಗಲಿ ನಮ್ಮ ಕಡೆಯಿಂದ ಮಿಸ್ಟೇಕ್ ಆಗಿದೆ ಎಂದು ಯಾರೂ ಬಂದು ನಮ್ಮ ಹತ್ತಿರ ಮಾತನಾಡಲಿಲ್ಲ. ಅದು ನನಗೆ ಬಹಳ ಬೇಸರವಾಯಿತು. ನಾನು ಎಂದಿಗೂ ಪ್ರಶಸ್ತಿಗಾಗಿ ಸಿನಿಮಾ ಮಾಡಿದವನಲ್ಲ. ನನಗೆ ಸಿನಿಮಾ ಪ್ರೇಕ್ಷಕರು ಕೊಡುವ ಪ್ರತಿಕ್ರಿಯೆಯೇ ದೊಡ್ಡ ಅವಾರ್ಡ್. ನ್ಯಾಷನಲ್ ಅವಾರ್ಡ್ ಬಂದಾಗಲೂ ನಾನು ಬೀಗಲಿಲ್ಲ. ಆದ್ರ ನನ್ನ ಟೈಮ್ ವೇಸ್ಟ್ ಮಾಡಿದ್ರು ಅನ್ನೋದು ನನ್ನ ಆರೋಪವಷ್ಟೇ ಎಂದರು.
ಇನ್ನೂ ಕನ್ನಡದಿಂದ ಮಾಸ್ ಲೀಡರ್ ಹಾಗು ಛೂ ಮಂತರ್ ಸಿನಿಮಾದ ನಿರ್ಮಾಪಕ ತರುಣ್ ಶಿವಪ್ಪ ಉಸ್ತುವಾರಿ ವಹಿಸಿದ್ದರು ಎಂಬುದಕ್ಕೆ ಪ್ರತಿಕ್ರಿಯಿಸಿ, ತರುಣ್ ಶಿವಪ್ಪ ಯಾರು ಅನ್ನೋದೇ ಗೊತ್ತಿಲ್ಲ. ಆದ್ರೆ ಅವರಿಗೆ ಒಂದು ಸಣ್ಣ ಅರಿವು ಇರಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.