ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬ, ಚಿತ್ರರಂಗ ಸೇರಿದಂತೆ ಅಭಿಮಾನಿ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಸಂದರ್ಭದಲ್ಲಿ ನಟ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ತಮ್ಮ ಹುಟ್ಟುಹಬ್ಬದಂದೇ 14ನೇ ಚಿತ್ರವನ್ನು ಘೋಷಿಸಿದ್ದಾರೆ. ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಮುಂಬರುವ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸಲಿದ್ದಾರೆ. ರಾಹುಲ್ ಜೊತೆ ದೇವರಕೊಂಡ ಎರಡನೇ ಬಾರಿ ಕೈಜೋಡಿಸಿದ್ದು, ಚಿತ್ರಕ್ಕೆ ತಾತ್ಕಾಲಿಕವಾಗಿ ವಿಡಿ 14 ಎಂದು ಹೆಸರಿಡಲಾಗಿದೆ.
ವಿಜಯ್ ದೇವರಕೊಂಡ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ನಿರ್ಮಾಪಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಮಹಾಕಾವ್ಯಗಳು ಬರೆಯಲ್ಪಟ್ಟಿಲ್ಲ, ಅವು ವೀರರ ರಕ್ತದಲ್ಲಿ ಕೆತ್ತಲ್ಪಟ್ಟಿವೆ. 'VD14 - ದಿ ಲೆಜೆಂಡ್ ಆಫ್ ದಿ ಕರ್ಸ್ಡ್ ಲ್ಯಾಂಡ್'. ಹ್ಯಾಪಿ ಬರ್ತ್ಡೇ ವಿಜಯ್ ದೇವರಕೊಂಡ. ರಾಹುಲ್ ಸಂಕೃತ್ಯನ್ ನಿರ್ದೇಶನದ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮಾಡುತ್ತಿದೆ'' ಎಂದು ಬರೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ನಡೆದ ಪೀರಿಯಾಡಿಕಲ್ ಆ್ಯಕ್ಷನ್ ಡ್ರಾಮಾ ಕಥೆಯನ್ನು ಈ ಚಿತ್ರ ಒಳಗೊಂಡಿರಲಿದೆ. ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯು ಈ ಸಿನಿಮಾವನ್ನು ಬಿಗ್ ಬಜೆಟ್ನಲ್ಲಿ ನಿರ್ಮಿಸಲಿದೆ.
ರಾಜಮನೆತನದ ಶಿಲ್ಪವನ್ನು ಪ್ರದರ್ಶಿಸುವ ಪೋಸ್ಟರ್ ಅನ್ನು ವಿಜಯ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ "ದಿ ಲೆಜೆಂಡ್ ಆಫ್ ದಿ ಕರ್ಸ್ಡ್ ಲ್ಯಾಂಡ್, 1854-1878" ಎಂದು ಬರೆಯಲಾಗಿದೆ. ವರದಿಗಳ ಪ್ರಕಾರ, ಶ್ರೀಲೀಲಾ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಆದಾಗ್ಯೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಸದ್ಯ ಚಿತ್ರದ ಬಗ್ಗೆ ತಂಡ ಹೆಚ್ಚೇನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಅಪ್ಡೇಟ್ಸ್ ಹಂತಹಂತವಾಗಿ ಬಹಿರಂಗಗೊಳ್ಳಲಿದೆ.
ಇದನ್ನೂ ಓದಿ: ಸಾಯಿ ಪಲ್ಲವಿ ಬರ್ತ್ಡೇಗೆ 'ತಂಡೆಲ್' ಸ್ಪೆಷಲ್ ವಿಡಿಯೋ ಅನಾವರಣ - HBD Sai Pallavi
ವಿಜಯ್ ದೇವರಕೊಂಡ ಕೊನೆಯದಾಗಿ ದಿ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಂಡರು. ಮೃಣಾಲ್ ಠಾಕೂರ್ ಜೊತೆ ತೆರೆ ಹಂಚಿಕೊಂಡ ಈ ಚಿತ್ರ ಯಶಸ್ವಿಯಾಗಿದೆ. ಸಿನಿಮಾ ಪ್ರಸ್ತುತ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಇನ್ನೂ, ವಿಜಯ್ ಅವರು ನಿರ್ಮಾಪಕ ದಿಲ್ ರಾಜು ಮತ್ತು ನಿರ್ದೇಶಕ ರವಿಕಿರಣ್ ಕೋಲಾ ಜೊತೆಯೂ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ತಾತ್ಕಾಲಿಕವಾಗಿ ಎಸ್ವಿಸಿ 59 ಎಂದು ಹೆಸರಿಸಲಾಗಿದೆ. ರೂರಲ್ ಆ್ಯಕ್ಷನ್ ಜಾನರ್ನಲ್ಲಿ ದೇವರಕೊಂಡ ಅವರ ಚೊಚ್ಚಲ ಪ್ರಯತ್ನವಿದು. ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ದೇವರಕೊಂಡ ಅವರ ಮುಂದಿನ ಚಿತ್ರಗಳ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ 'ಸಿಖಂದರ್'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna