ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಗುರುವಾರ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ದಂಪತಿ ನಡುವೆ ಬಿರುಕು ಬಿಟ್ಟಿವೆ ಎಂಬ ವರದಿಗಳು ಹರಿದಾಡಿದ್ದವು. ಆದ್ರೆ ಕ್ರಿಕೆಟಿಗನಾಗಲಿ ಅಥವಾ ಡ್ಯಾನ್ಸರ್ ಆಗಲಿ ಇದನ್ನು ಖಚಿತಪಡಿಸಿರಲಿಲ್ಲ. ಕಳೆದ ದಿನ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ವದಂತಿಗಳು ನಿಜವೆಂದು ತಿಳಿಸಿದ್ದಾರೆ. ಹಾರ್ದಿಕ್ ನತಾಶಾ 2020ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು. ವಿಚ್ಛೇದಿತ ದಂಪತಿಗೆ ಅಗಸ್ತ್ಯ ಎಂಬ 3 ವರ್ಷದ ಮಗನಿದ್ದಾನೆ.
ನತಾಶಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ನಿಂದ ಹಾರ್ದಿಕ್ ಅವರ ಹೆಸರು, ಫೋಟೋಗಳನ್ನು ಡಿಲೀಟ್ ಮಾಡಿದ ನಂತರ ಮತ್ತು ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿನ ಹಾರ್ದಿಕ್ ಯಶಸ್ಸಿಗೆ ಅಭಿನಂದಿಸದ ಹಿನ್ನೆಲೆ, ವಿಚ್ಛೇದನದ ಸುತ್ತಲಿನ ವದಂತಿಗಳು ಉಲ್ಭಣಗೊಂಡಿದ್ದವು. ಸದ್ಯ ವದಂತಿಗಳು ನಿಜವೆಂದು ದೃಢಪಡಿಸಿದ್ದಾರೆ. ಪ್ರಣಯ, ಮೂರು ಬಾರಿ ಮದುವೆ, ಪ್ರತ್ಯೇಕತೆ - ಜೋಡಿ ಜೀವನದ ಒಂದು ಸಣ್ಣ ನೋಟ ಇಲ್ಲಿದೆ.
- 2018ರಲ್ಲಿ ಪರಿಚಯ: ವರದಿಗಳ ಪ್ರಕಾರ, ಸರ್ಬಿಯನ್ ಮಾಡೆಲ್ ಹಾಗೂ ಇಂಡಿಯನ್ ಸ್ಟಾರ್ ಕ್ರಿಕೆಟರ್ 2018ರಲ್ಲಿ ಪರಸ್ಪರರ ಸ್ನೇಹಿತರ ಮೂಲಕ ಭೇಟಿಯಾದರು. ನಂತರ ಡೇಟಿಂಗ್ ಪ್ರಾರಂಭಿಸಿದರು.
- ಕ್ರೂಸ್ನಲ್ಲಿ ಪ್ರಪೋಸಲ್, ನಂತರ ಮದುವೆ, ಪೋಷಕರಾಗಿ ಬಡ್ತಿ: 2020ರ ಜನವರಿ 1ರಂದು, ಹಾರ್ದಿಕ್ ನತಾಶಾಗೆ ಕ್ರೂಸ್ (ಹಡಗು) ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡರು. ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಕೋವಿಡ್ ಲಾಕ್‌ಡೌನ್ ಸಂದರ್ಭ ಸರಳವಾಗಿ ವಿವಾಹವಾದರು. ರಿಜಿಸ್ಟರ್ ಮ್ಯಾರೇಜ್ ಎಂದು ನಂಬಲಾಗಿದೆ. ಅದೇ ವರ್ಷ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡರು. ಪುತ್ರನ ಹೆಸರು ಅಗಸ್ತ್ಯ.
- ಎರಡು ಅದ್ಧೂರಿ ಮದುವೆ: 2023ರಲ್ಲಿ ಸರ್ಬಿಯನ್ ಮತ್ತು ಭಾರತೀಯ ಸಂಪ್ರದಾಯಗಳ ಪ್ರಕಾರ ಎರಡು ಅದ್ಧೂರಿ ವಿವಾಹ ಸಮಾರಂಭ ಆಯೋಜಿಸಿದ್ದರು. ದಂಪತಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು.
- 2024ರ ಮೇನಲ್ಲಿ ವಿಚ್ಛೇದನ ವದಂತಿ: ಈ ವರ್ಷದ ಮೇ ತಿಂಗಳಿನಲ್ಲಿ ಇಬ್ಬರ ನಡುವೆ ಮನಸ್ತಾಪವಿದೆ, ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ವದಂತಿಗಳೆದ್ದವು. ನತಾಶಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಿಂದ ಪಾಂಡ್ಯ ಎಂಬ ಸರ್ ನೇಮ್ ತೆಗೆದುಹಾಕಿದ ನಂತರ ಡಿವೋರ್ಸ್ ಗುಸುಗುಸು ಪ್ರಾರಂಭವಾಯಿತು. ಐಪಿಎಲ್ ಪಂದ್ಯಗಳಲ್ಲಿ ನತಾಶಾ ಕಾಣಿಸಿಕೊಳ್ಳದ ಹಿನ್ನೆಲೆ, ಸಾಮಾಜಿಕ ಮಾಧ್ಯಮದಲ್ಲಿ ವಿಚ್ಛೇದನದ ಊಹಾಪೋಹಗಳು ಶುರುವಾಯಿತು. ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಅವರೊಂದಿಗೆ ನತಾಶಾ ತಮ್ಮ ಫೋಟೋವನ್ನು ಹಂಚಿಕೊಂಡಿಲ್ಲ ಎಂಬ ವಿಚಾರವನ್ನು ನೆಟ್ಟಿಗರು ಗುರಿಮಾಡಿದ್ದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಜೊತೆ ನಂಟು ಕಡಿದುಕೊಂಡು ಸರ್ಬಿಯಾಗೆ ತೆರಳಿದ ಮಾಡೆಲ್ ನತಾಸಾ ಸ್ಟಾಂಕೋವಿಕ್ - natasa stankovic
- ವಿಚ್ಛೇದನದ ಅಧಿಕೃತ ಘೋಷಣೆ: ಗುರುವಾರದಂದು "ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿದ್ದೇವೆ" ಎಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ದಂಪತಿ ದಾಂಪತ್ಯ ಜೀವನವನ್ನು ಉತ್ತಮವಾಗಿ ಸಾಗಿಸಲು ಸಂಪೂರ್ಣ ಒತ್ತು ನೀಡಿದ್ದು, ಸಾಧ್ಯವಾಗಿಲ್ಲ ಎಂಬುದನ್ನು ತಮ್ಮ ಪೋಸ್ಟ್ಗಳ ಮೂಲಕ ತಿಳಿಸಿದ್ದಾರೆ. ಆದ್ರೆ ಹಾರ್ದಿಕ್ ಮತ್ತು ನತಾಶಾ ಮಗ ಅಗಸ್ತ್ಯಗಾಗಿ ಪೋಷಕರ ಜವಾಬ್ದಾರಿಗಳನ್ನು ಹಂಚಿಕೊಳ್ಳಲಿದ್ದಾರೆ.