ಹೈದರಾಬಾದ್: ರಾಜ್ ಪಂಡಿತ್ ಹಾಡಿರುವ 'ಕೂರಿಯೇ' ಎಂಬ ಹೊಸ ಹಾಡಿನ ಬಿಡುಗಡೆ ಸಮಾರಂಭಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸಾಕ್ಷಿಯಾಗಿದ್ದರು. ಈವೆಂಟ್ನಲ್ಲಿ ಪುತ್ರ ಜುನೈದ್ ಖಾನ್ ಸಾಧನೆಗಳ ಬಗ್ಗೆ ಗುಣಗಾನ ಮಾಡಿದರು. ಜುನೈದ್ ಅವರ ಬಾಲಿವುಡ್ನ ಚೊಚ್ಚಲ ಚಿತ್ರ 'ಮಹಾರಾಜ್' ಬಿಡುಗಡೆಗೂ ಮುನ್ನ, ಮಗನ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಚಿಂತೆಯಲ್ಲಿದ್ದೆ ಎಂಬುದನ್ನು ಅಮೀರ್ ಬಹಿರಂಗಪಡಿಸಿದರು. ಅದಾಗ್ಯೂ ನನ್ನನ್ನು ಅವಲಂಬಿಸದೇ, ಇಂಡಸ್ಟ್ರಿಯಲ್ಲಿ ತನ್ನದೇ ಆದ ಐಡೆಂಟಿಟಿಯನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಕ್ಕಾಗಿ ಮಗ ಜುನೈದ್‌ನನ್ನು ಪ್ರಶಂಸಿದರು.
'ಕೂರಿಯೇ' ಸಾಂಗ್ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ಅಮೀರ್, "ಜುನೈದ್ ನಟನೆಯ 'ಮಹಾರಾಜ್' ಸಿನಿಮಾ ಬಿಡುಗಡೆ ಆದಾಗ, ಜನರು ಅವನ ಕೆಲಸವನ್ನು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ? ಎಂದು ನಾನು ಚಿಂತಿಸುತ್ತಿದ್ದೆ. ಆದ್ರೆ ಜುನೈದ್ ತನಗಾಗಿ ನಿಜವಾಗಿಯೂ ಬಹಳ ಶ್ರಮ ಹಾಕಿದ್ದಾನೆ, ಅಲ್ಲದೇ ಅವನು ಎಂದಿಗೂ ನನ್ನ ಸಹಾಯ ಪಡೆಯಲಿಲ್ಲ. ಅವನು ತನ್ನದೇ ಆದ ರೀತಿಯಲ್ಲಿ ತನ್ನ ಕೆಲಸ ಮಾಡಿದ್ದಾನೆ. ನನಗೆ ಬಹಳ ಹೆಮ್ಮೆ ಮತ್ತು ಸಂತೋಷವಾಗಿದೆ'' ಎಂದು ತಿಳಿಸಿದರು.
ಅಮೀರ್ ಕೂರಿಯೇ ಪ್ರೊಜೆಕ್ಟ್ ಮತ್ತು ತಂಡವನ್ನು ಸಹ ಹೊಗಳಿದರು. "ರಾಜ್ ಪಂಡಿತ್ ಅವರ ಗಮನಾರ್ಹ ಕೆಲಸವನ್ನು ನಾವಿಲ್ಲಿ ನೋಡಬಹುದು. ಸಂಗೀತ, ದೃಶ್ಯಗಳು ಮತ್ತು ಭಾವನೆಗಳು ನಿಜಕ್ಕೂ ಶ್ಲಾಘನೆಗೆ ಅರ್ಹ. ಅಂತಹ ಅದ್ಭುತ ಪ್ರತಿಭೆಯನ್ನು ಬೆಂಬಲಿಸೋ ಸಲುವಾಗಿ ನಾನು ಇಲ್ಲಿರುವುದಕ್ಕೆ ಸಖತ್ ಥ್ರಿಲ್ ಆಗಿದ್ದೇನೆ" ಎಂದು ತಿಳಿಸಿದರು.
'ಕೂರಿಯೇ' ಸಾಂಗ್ ಬಗ್ಗೆ ಮಾತನಾಡೋದಾದ್ರೆ, ಇದು ಕಾಶ್ಮೀರದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ, ಪ್ರೀತಿಯ ಭಾವನೆಗಳನ್ನು ಒಳಗೊಂಡಿರುವ ಮನಮೋಹಕ ಪ್ರಣಯ ಗೀತೆ ಆಗಿದೆ. ಕಾಶ್ಮೀರಿ ಭಾಷೆಯಲ್ಲಿ 'ಹುಡುಗಿ'ಗೆ 'ಕೂರ್' ಎಂದು ಕರೆಯಲಾಗುವುದು. ಇದು ಸಂಗೀತದ ಕೇಂದ್ರ ವಿಷಯವಾಗಿದೆ. ಐ.ಪಿ ಸಿಂಗ್ ಬರೆದಿರುವ ಈ ಹಾಡು ಮಾನ್ಸೂನ್ ಅವಧಿಯಲ್ಲಿ ಕೇಳಲು ಹೆಚ್ಚು ಸೂಕ್ತವಾಗಿದೆ. ಐಪಿ ಸಿಂಗ್ ಸಾಹಿತ್ಯಕ್ಕೆ, ರಾಜ್ ಪಂಡಿತ್ ಅವರು ಸಂಗೀತ ಸಂಯೋಜನೆ ಮಾಡಿ, ದನಿಯಾಗಿರುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ವದಂತಿ ಮಧ್ಯೆ ಮಗಳೊಂದಿಗೆ ದೇಶಕ್ಕೆ ವಾಪಸ್ಸಾದ ಐಶ್ವರ್ಯಾ - ವಿಡಿಯೋ - Aishwarya Rai