ಕನ್ನಡದಲ್ಲಿ ಈಗಾಗಲೇ 'ಅಮೃತ್ ಅಪಾರ್ಟ್ಮೆಂಟ್' ಮತ್ತು 'ದ ಜಡ್ಜ್ ಮೆಂಟ್' ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ಇದೀಗ ಸದ್ದಿಲ್ಲದೆ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕಥಾಹಂದರ ಈಗಾಗಲೇ ಪೂರ್ಣಗೊಂಡಿದ್ದು, ಹಿಂದಿಯ 'ಲಾಪತಾ ಲೇಡಿಸ್' ಖ್ಯಾತಿಯ ಸೋನು ಆನಂದ್ ಬರಹಗಾರರಾಗಿ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗೆ 'ಲಾಪತಾ ಲೇಡಿಸ್' ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಅಮೀರ್ ಖಾನ್ ನಿರ್ಮಾಣದ ಈ ಸಿನಿಮಾಕ್ಕೆ ಬರಹಗಾರನಾಗಿರುವ ಸೋನು ಆನಂದ್, ಇದೀಗ ಕನ್ನಡದ ಮೂಲಕ ಬಹುಭಾಷಾ ಸಿನಿಮಾಗಳಲ್ಲೂ ಬರಹಗಾರನಾಗಿ ತೊಡಗಿಸಿಕೊಂಡಿರುವುದು ವಿಶೇಷ.
ಇನ್ನೂ ಹೆಸರಿಡದ ಸಿನಿಮಾ ಬಗ್ಗೆ ಮಾತನಾಡಿರುವ ಗುರುರಾಜ ಕುಲಕರ್ಣಿ (ನಾಡಗೌಡ), ಈಗಾಗಲೇ ಐದಾರು ಸಿನಿಮಾಗಳನ್ನು ನಿರ್ಮಿಸಿ, ಎರಡು ಸಿನಿಮಾಗಳನ್ನು ನಿರ್ದೇಶಿಸಿರುವ ನಾನು ಮುಂದೆ ಯಾವ ಥರದ ಸಿನಿಮಾಗಳನ್ನು ಮಾಡಬೇಕು ಎಂದು ತಿಳಿಯಲು ಆಡಿಯನ್ಸ್ ಸರ್ವೇ ಮಾಡಿದ್ದೆ. ಈ ಹಿಂದೆ ನಾನು ನಿರ್ದೇಶಿಸಿದ್ದ 'ದ ಜಡ್ಜ್‌ಮೆಂಟ್' ಚಿತ್ರಕ್ಕೆ ಮೆಚ್ಚುಗೆಯ ವಿಮರ್ಶೆ ಬಂದಿತ್ತು. ಆ ಸಿನಿಮಾದ ಬಳಿಕ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಡೆದ ಈ ಸರ್ವೇಯಲ್ಲಿ ಸುಮಾರು 65%ಕ್ಕೂ ಅಧಿಕ ಸಂಖ್ಯೆಯ ಆಡಿಯನ್ಸ್ ತಮಗೆ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾಗಳು ಇಷ್ಟವಾಗಿದ್ದು, ಅಂಥದ್ದೇ ಸಿನಿಮಾಗಳನ್ನು ಮಾಡುವಂತೆ ತಮ್ಮ ಅನಿಸಿಕೆ-ಅಭಿಪ್ರಾಯ ಹಂಚಿಕೊಂಡಿರುತ್ತಾರೆ. ಹೀಗಾಗಿ, ನಮ್ಮ ಮುಂದಿನ ಸಿನಿಮಾವನ್ನು ಪ್ರೇಕ್ಷಕರ ಆಸಕ್ತಿ ಮತ್ತು ಹಕ್ಕೊತ್ತಾಯದಂತೆ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲೇ ಮಾಡಲು ಮುಂದಾಗಿದ್ದೇವೆ. ಇದು ಥ್ರಿಲ್ಲರ್ನೊಂದಿಗೆ ಭಾವನಾತ್ಮಕ ಕಥಾ ಹಂದರವುಳ್ಳ ಚಿತ್ರ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ಈ ಮೂಲಕ ಗುರುರಾಜ್ ಕುಲಕರ್ಣಿ ತಮ್ಮ ಸಿನಿಮಾ ಆದ್ಯತೆಗಳನ್ನು ಅರ್ಥ ಮಾಡಿಕೊಂಡ ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗಲು ಉತ್ಸುಕರಾಗಿದ್ದಾರೆ. 'ದ ಜಡ್ಜ್‌ಮೆಂಟ್' ನಂತರ ಅಂತಹ ಪ್ರೇಕ್ಷಕರನ್ನು ತಲುಪಲು ಮತ್ತು ಅವರು ಯಾವ ರೀತಿ ಸಿನಿಮಾ ನೋಡಲು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಬಯಸುತ್ತೇನೆ. ನಾನು ಸಮೀಕ್ಷೆ ನಡೆಸಿದ್ದು, ಬೀದಿಗಳಲ್ಲಿ ಜನರೊಂದಿಗೆ ಮಾತನಾಡಿದ್ದೇನೆ. ಅವರು ಕೊನೆಗೆ ಥ್ರಿಲ್ಲರ್ ಕಥೆಗೆ ಮಣೆ ಹಾಕಿದರು. ಹೆಚ್ಚಿನ ಜನರನ್ನು ತಲುಪುವಂತಹ ಚಿತ್ರ ಮಾಡುವುದು ನನ್ನ ಗುರಿ ಎಂದು ಅವರು ವಿವರಿಸಿದರು.
ಕುತೂಹಲಕಾರಿ ವಿಷಯವೆಂದರೆ, ಇನ್ನೂ ಹೆಸರಿಡದ ಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತಯಾರಿಸಲು ಗುರುರಾಜ್ ಯೋಜಿಸಿದ್ದಾರೆ. ವಿವಿಧ ಭಾಷೆಗಳ ಪ್ರತಿಭಾವಂತರೊಂದಿಗೆ ಆ ನೆಲಕ್ಕೆ ತಕ್ಕಂತೆ ಚಿತ್ರ ಮಾಡಲು ಎದುರು ನೋಡುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಕಿರಣ್ ರಾವ್ ನಿರ್ದೇಶನದ 'ಲಾಪತಾ ಲೇಡೀಸ್'ನ ಸಂಭಾಷಣೆಗಾರ ಸೋನು ಆನಂದ್ ಸೇರಿದಂತೆ ವೈವಿಧ್ಯಮಯ ಬರಹಗಾರರ ತಂಡವನ್ನು ಅವರು ಒಟ್ಟುಗೂಡಿಸಿದ್ದಾರೆ.
ಬಾಲಿವುಡ್ನ ಲಾಪತಾ ಲೇಡಿಸ್ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ 97ನೇ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಚಿತ್ರವಾಗಿದೆ. ಕನ್ನಡ ಕಥೆಗಾರರೊಂದಿಗೆ ಪ್ಯಾನ್-ಇಂಡಿಯಾ ಚಿತ್ರಗಳ ಬಗ್ಗೆ ಮಾತನಾಡಿದ್ದೇವೆ. ಸೋನು ಆನಂದ್, ತನ್ನ ನೆಲದ ಅನುಭವವನ್ನು ಕಥೆಯಲ್ಲಿ ಸೇರಿಸಲಿದ್ದಾರೆ. ನನಗೆ ಸಾಮಾನ್ಯ ಸ್ನೇಹಿತನ ಮೂಲಕ ಸೋನು ಪರಿಚಯವಾಯಿತು. ಅವರಿನ್ನೂ ಯುವಕರಾಗಿದ್ದು, ಹೊಸ ಪರಿಕಲ್ಪನೆ ಒದಗಿಸುತ್ತಾರೆ ಎಂದು ಭಾವಿಸಿದ್ದೇನೆ. ಸದ್ಯ ಚಿತ್ರ ಕಥೆ ರಚನೆ ಪ್ರಕ್ರಿಯೆಯಲ್ಲಿದೆ. ಹಿಂದಿ, ಮರಾಠಿ ಮತ್ತು ಭೋಜ್‌ಪುರಿಯಲ್ಲಿ ಸೋನು ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಸೋನು ಆನಂದ್ ಸಂಭಾಷಣೆಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಅಲ್ಲದೆ ಅನುಭವಿ ಬರಹಗಾರರೊಂದಿಗೆ ಸಮರ್ಥವಾಗಿ ಸಹಕರಿಸುತ್ತಾರೆ ಎಂದು ಗುರುರಾಜ್ ಕುಲಕರ್ಣಿ ಹೇಳಿದರು.
ಗುರುರಾಜ್ ಕನ್ನಡ ಆವೃತ್ತಿಗೆ ಸಂಭಾಷಣೆ ಬರೆಯಲು ಉದ್ದೇಶಿಸಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಉದ್ಯಮಗಳಿಂದ ಚಿತ್ರ ಕಥೆಗಾರರನ್ನು ಹುಡುಕುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರಕಥೆ ಸಿದ್ಧವಾಗಿದೆ ಮತ್ತು ಮೊದಲ ಡ್ರಾಫ್ಟ್ ಸಿದ್ಧಪಡಿಸುತ್ತಿರುವ ಸೋನು ಅವರೊಂದಿಗೆ ನಾನು ಸುದೀರ್ಘವಾಗಿ ಚರ್ಚಿಸಿದ್ದೇನೆ. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿದ್ದಾಗ ಅಲ್ಪಾವಧಿಯಲ್ಲೇ ಕನ್ನಡದಲ್ಲಿ ಕಿರುಚಿತ್ರ ಮಾಡಿದರು. ಅವರು ದೀರ್ಘಾವಧಿ ಸಹಯೋಗದಲ್ಲಿ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದರು.
ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ದೀಪಾವಳಿ ಹಬ್ಬದ ವೇಳೆಗೆ ಈ ಸಿನಿಮಾದ ಮುಹೂರ್ತ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಗುರುರಾಜ್ ಅವರೇ ತಮ್ಮ ಬ್ಯಾನರ್ G9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಲ್ಲ ಭಾಷೆಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ಕಲಾವಿದರನ್ನು ಆಯ್ಕೆ ಮಾಡಲು ಒಲವು ತೋರಿದ್ದಾರೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಯ ಹಲವು ಜನಪ್ರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಈ ಮೂವರು ನಟರನ್ನು ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಸಿದ ಅರ್ಜುನ್ ಜನ್ಯ - 45 Film Shooting Complete