ಸಿದ್ಧಾರ್ಥ್ ಮಲ್ಹೋತ್ರಾ, ಹಿಂದಿ ಚಿತ್ರರಂಗದ ಬಹುಬೇಡಿಕೆ ನಟರಲ್ಲೋರ್ವರು. ಅಪಾರ ಸಂಖ್ಯೆಯ ಅಭಿಮಾನಿಗಳು ನಟನ ಮುಂದಿನ ಸಿನಿಮಾ ವೀಕ್ಷಿಸಲು ಎದುರು ನೋಡುತ್ತಿದ್ದಾರೆ. ನಟನ ಮುಂಬರುವ ಬಹುನಿರೀಕ್ಷಿತ ಚಿತ್ರ 'ಯೋಧ'ದ ಟ್ರೇಲರ್ ಶೀಘ್ರದಲ್ಲೇ ಅನಾವರಣಗೊಳ್ಳಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಆ್ಯಕ್ಷನ್-ಪ್ಯಾಕ್ಡ್ ಟೀಸರ್ ಮತ್ತು ಜಿಂದಗಿ ತೇರೆ ನಾಮ್ ಸಾಂಗ್ ರಿಲೀಸ್ ಮಾಡುವ ಮುಖೇನ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವ ಚಿತ್ರ ತಯಾರಕರು 'ಯೋಧ' ಟ್ರೇಲರ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿರುವ ಖ್ಯಾತ ನಿರ್ಮಾಪಕ ಕರಣ್ ಜೋಹರ್ 'ಯೋಧ' ಟ್ರೇಲರ್ ರಿಲೀಸ್ ಡೇಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಾಶಿ ಖನ್ನಾ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇಂದು ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್, ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ಯೋಧ ಟ್ರೇಲರ್ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಸಿದ್ದಾರ್ಥ್ ಪೋಸ್ಟರ್ ಶೇರ್ ಮಾಡಿರುವ ಅವರು, "ರೆಡಿನಾ ಇಲ್ವಾ, ಆ್ಯಕ್ಷನ್ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಯೋಧ ಟ್ರೇಲರ್ ಕೇವಲ 4 ದಿನಗಳಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್ 15 ರಂದು ಯೋಧ ಚಿತ್ರಮಂದಿರ ಪ್ರವೇಶಿಸಲಿದೆ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಜಿಂದಗಿ ತೇರೆ ನಾಮ್ ಎಂಬ ಹಾಡು ಅನಾವರಣಗೊಂಡಿದ್ದು, ರಾಶಿ ಖನ್ನಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ. ಪ್ರೀತಿ - ಪ್ರಣಯದ ಅಂಶಗಳನ್ನು ಈ ಹಾಡು ಒಳಗೊಂಡಿದೆ. ವಿಶಾಲ್ ಮಿಶ್ರಾ ದನಿಯಾಗಿದ್ದಾರೆ. ಮಿಶ್ರಾ ಜೊತೆಗೆ ಕೌಶಲ್ ಕಿಶೋರ್ ಸೇರಿ ಸಾಹಿತ್ಯ ಒದಗಿಸಿದ್ದಾರೆ. ಸಿದ್ಧಾರ್ಥ್ ರಾಶಿ ಲವ್ ಸ್ಟೋರಿ ಈ ಹಾಡಿನಲ್ಲಿದೆ. ಫೆಬ್ರವರಿ 29, ಗುರುವಾರ ಟ್ರೇಲರ್ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 'ರಶ್ಮಿಕಾ ಅನಿಮಲ್ ಯಶಸ್ಸಿನ ಶ್ರೇಯಸ್ಸು ತೆಗೆದುಕೊಳ್ಳಲಿಲ್ಲ' ಮಾತಿಗೆ ಸ್ಪಷ್ಟನೆ ಕೊಟ್ಟ ನಟಿ
ಚಿತ್ರತಂಡ ಈಗಾಗಲೇ ಪ್ರಮೋಶನ್ ಪ್ರಾರಂಭಿಸಿದೆ. ಟೀಸರ್‌ನೊಂದಿಗೆ ಯೋಧ ಪ್ರಚಾರ ಪ್ರಾರಂಭವಾಗಿದ್ದು, ಹೈಜಾಕ್ಗೊಳಗಾದ ವಿಮಾನವನ್ನು ಉಳಿಸಲು ಭಯೋತ್ಪಾದಕರೊಂದಿಗೆ ಹೋರಾಡುವ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕಮಾಂಡೋ ಪಾತ್ರದಲ್ಲಿ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ. ದಿಶಾ ಪಟಾನಿ, ಕ್ಯಾಬಿನ್ ಸಿಬ್ಬಂದಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಟೀಸರ್ ಸಿನಿಮಾ ನೋಡುವ ವೀಕ್ಷಕರ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: 'ಪುಷ್ಪ 2' ಚಿತ್ರದ ಅತಿಥಿ ಪಾತ್ರದಲ್ಲಿ ಅಲ್ಲು ಅರ್ಜುನ್ ಪುತ್ರ
ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜ್ಹಾ ನಿರ್ದೇಶನದ 'ಯೋಧ' ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಿತ್ರವನ್ನು 2022ರ ನವೆಂಬರ್ 11ರಂದೇ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅದಾಗ್ಯೂ, ಕೆಲ ಬಾರಿ ಸಿನಿಮಾ ಮುಂದೂಡಿಕೆಯಾಗುತ್ತ ಬಂದಿದೆ. 2023ರ ಜುಲೈ, ಸೆಪ್ಟೆಂಬರ್ 15 ಮತ್ತು ಡಿಸೆಂಬರ್ 15ಕ್ಕೆ ಮುಂದೂಡಿಕೆಯಾಗಿ ಇದೀಗ 2024ರ ಮಾರ್ಚ್ 15ರಂದು ತೆರೆಕಾಣಲು ಸಜ್ಜಾಗಿದೆ.