ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಸದ್ಯ ಸರಣಿ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. 'ಭೈರತಿ ರಣಗಲ್', '45' ಹಾಗೂ 'ಭೈರವನ ಕೊನೆಯ ಪಾಠ' ಚಿತ್ರಗಳ ಕೆಲಸ ಸಾಗಿದೆ. ಈ ನಡುವೆ ಅವರ ಹೊಸ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಸಿನಿಮಾ ಕೆಲಸಗಳ ಮಧ್ಯೆ ಇಂದು ಕುಟುಂಬ ಹಾಗು ಸ್ನೇಹಿತರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಪತ್ನಿ ಗೀತಾ ಜೊತೆ ಅವರು ಷಷ್ಠಿಪೂರ್ತಿ ಪೂಜೆ ಸಲ್ಲಿಸಿದರು.
ಶಿವ ರಾಜ್‌ಕುಮಾರ್ ಬಾಲ್ಯದ ಗೆಳೆಯರ ಕುಟುಂಬ ಕೂಡಾ ಪೂಜೆಯಲ್ಲಿ ಭಾಗಿಯಾಗಿದ್ದರು. ಹಿಂದು ಸಂಪ್ರದಾಯದ ಪ್ರಕಾರ, 60 ವರ್ಷ ತುಂಬಿದ ಮೇಲೆ ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಷಷ್ಠಿಪೂರ್ತಿ ಪೂಜೆ ಮಾಡಲಾಗುತ್ತದೆ.
ಶಿವ ರಾಜ್‌ಕುಮಾರ್ ಮುಂದಿನ ಸಿನಿಮಾಗಳು: ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿವೆ. ಈಗಾಗಲೇ ಅನಾವರಣಗೊಂಡಿರುವ ಟೀಸರ್ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದೆ. ಹೀಗಾಗಿ ಸಿನಿಮಾ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
2017ರಲ್ಲಿ ಬಂದ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಭೈರತಿ ರಣಗಲ್ ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲ್ಯಾಕ್ ಡ್ರೆಸ್ ಏಕೆ ಹಾಕುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.
ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಕ್ಯಾಮರಾ ಕೈಚಳಕ, ರವಿ ಬಸ್ರೂರು ಸಂಗೀತವಿದೆ. ನಿರ್ಮಾಪಕಿ ಗೀತಾ ಶಿವ ರಾಜ್‌ಕುಮಾರ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಗೊಳಿಸುವ ತಯಾರಿಯಲ್ಲಿ ಚಿತ್ರತಂಡವಿದೆ.
ಇದನ್ನೂ ಓದಿ: ಕನ್ನಡಿಗರ ಮನಗೆಲ್ಲಲು ಪಣ ತೊಟ್ಟ ಪ್ರಭು ಮುಂಡ್ಕುರ್: ಮುಂದಿನ ತಿಂಗಳು ನಿಮ್ಮೆದುರು 'ಮರ್ಫಿ' - Murphy
'ಭೈರವನ ಕೊನೆಯ ಪಾಠ' ಶಿವಣ್ಣನ ಮತ್ತೊಂದು ಚಿತ್ರ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಖ್ಯಾತಿಯ ಹೇಮಂತ್ ರಾವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ 'ಈಟಿವಿ ಭಾರತ'ದ ಜೊತೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕರು, 'ಭೈರವನ ಕೊನೆಯ ಪಾಠ'ವನ್ನು ದೊಡ್ಡ ಮಟ್ಟದಲ್ಲಿ ಮಾಡಲಿದ್ದೇವೆ. ಹಾಗಾಗಿ ದೊಡ್ಡ ಸಿನಿಮಾ ಸೆಟ್ಗಳನ್ನು ಹಾಕಲಾಗುತ್ತಿದೆ. ಈ ವರ್ಷಂತ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕೆಂಬ ಯೋಜನೆ ಇದೆ ಎಂದಿದ್ದರು.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 38 ವರ್ಷ ಪೂರೈಸಿರು ಶಿವ ರಾಜ್‌ಕುಮಾರ್ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ.