ಅದ್ಧೂರಿ ಮೇಕಿಂಗ್ನಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿರುವ ಕನ್ನಡ ಚಿತ್ರ 'ಭೈರತಿ ರಣಗಲ್'. ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರದ ಆಫೀಶಿಯಲ್ ಟ್ರೇಲರ್ ಇಂದು ಅನಾವರಣಗೊಂಡಿದೆ. ಈ ಮೂಲಕ ಸಿನಿಮಾ ವೀಕ್ಷಿಸುವ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ನೀರಿನ ಆಹಾಕಾರ, ಶ್ರೀಮಂತರು ಕಾರ್ಮಿಕರ ಮೇಲೆ ನಡೆಸುವ ದೌರ್ಜನ್ಯ, ಬಡವರ ಗೋಳಾಟ.. ಇವೆಲ್ಲದರ ನಡುವೆ ಭೈರತಿ ಹಾಗೂ ನ್ಯಾಯ ಕೊಡಿಸುವ ವಕೀಲನ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಎಂಟ್ರಿ ಮತ್ತು ಖಡಕ್ ಡೈಲಾಗ್ಸ್ - ನೋಡಿದವ್ರು 'ಭೈರತಿ ರಣಗಲ್' ಸಿನಿಮಾ ಎಂಟರ್ಟೈನ್ಮೆಂಟ್ನ ಫುಲ್ ಮೀಲ್ಸ್ ಅಂತಾ ತಿಳಿಸಿದ್ದಾರೆ.
ಜನರಿಗೋಸ್ಕರ ನಾನು ಯಾರನ್ನು ಬೇಕಾದರೂ ಕಳೆದುಕೊಳ್ಳುತ್ತೇನೆ. ಆದ್ರೆ ಜನರನ್ನೇ ಕಳೆದುಕೊಳ್ಳಲ್ಲ ಅನ್ನೋ ಶಿವಣ್ಣನ ಡೈಲಾಗ್ ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಟ್ರೇಲರ್ನಲ್ಲಿ ಸೆಂಚುರಿ ಸ್ಟಾರ್ ಜೊತೆ ಬರುವ ಪಾತ್ರಗಳು ನೋಡುಗರ ಕುತೂಹಲ ಕೆರಳಿಸಿವೆ. ಬಾಲಿವುಡ್ ನಟ ರಾಹುಲ್ ಬೋಸ್, ದೇವರಾಜ್, ಅವಿನಾಶ್, ರುಕ್ಮಿಣಿ ವಸಂತ್, ಛಾಯಾ ಸಿಂಗ್ ಪಾತ್ರಗಳು ವೀಕ್ಷಕರಿಗೆ ಥ್ರಿಲ್ ಕೊಡುವಂತಿವೆ.
ಚಿತ್ರದಲ್ಲಿ 'ಭೈರತಿ ರಣಗಲ್' ನಾಯಕ ನಟ ಶಿವರಾಜ್ಕುಮಾರ್ ಜೋಡಿಯಾಗಿ ರುಕ್ಮಿಣಿ ವಸಂತ್ ವೈದ್ಯೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆ ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ಪ್ರತಾಪ್, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇಲ್ಲಿದೆ.
ಇದನ್ನೂ ಓದಿ: ಯಶ್ 'ಟಾಕ್ಸಿಕ್' ಸೆಟ್: ನಿತ್ಯ ಸಾವಿರಾರು ಕಾರ್ಮಿಕರಿಂದ ಕೆಲಸ, ₹150 ಕೋಟಿಗೂ ಹೆಚ್ಚು ಖರ್ಚು
ನರ್ತನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಅವರು 'ಗೀತಾ ಪಿಕ್ಚರ್ಸ್ ಲಾಂಛನ'ದಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಕ್ಯಾಮರಾ ವರ್ಕ್, ರವಿ ಬಸ್ರೂರ್ ಸಂಗೀತವಿದೆ. ಗೀತೆ ರಚನೆಕಾರ ಡಾ. ವಿ.ನಾಗೇಂದ್ರ ಪ್ರಸಾದ್ ಚಿತ್ರತಂಡದ ಭಾಗವಾಗಿದ್ದಾರೆ. ಚೇತನ್ ಡಿಸೋಜ ಅವರ ಸಾಹಸ ನಿರ್ದೇಶನ ಮತ್ತು ಗುಣ ಅವರ ಕಲಾ ನಿರ್ದೇಶನ ಈ ಬಹುನಿರೀಕ್ಷಿತ ಚಿತ್ರಕ್ಕಿದೆ. ಇದೇ ನವೆಂಬರ್ 15ರಂದು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಭೈರತಿ ರಣಗಲ್ ಚಿತ್ರ ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ. ಸದ್ಯ ಟ್ರೇಲರ್ನಿಂದ ಸಖತ್ ಸದ್ದು ಮಾಡುತ್ತಿರುವ 'ಭೈರತಿ ರಣಗಲ್' ಈ ವರ್ಷದ ಹಿಟ್ ಚಿತ್ರಗಳಲ್ಲೊಂದಾಗುವ ಭರವಸೆ ಸೃಷ್ಟಿಸಿದೆ.