ಮಫ್ತಿ ನಿರ್ದೇಶಕ ನರ್ತನ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಕುರಿತು ನಟ ಶಿವರಾಜ್ ಕುಮಾರ್, ನಿರ್ದೇಶಕ ನರ್ತನ್ ಹಾಗೂ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಈ ವಿಷ್ಯವನ್ನ ಹಂಚಿಕೊಂಡರು.
ಮೊದಲ ಮಾತು ಶುರು ಮಾಡಿದ ಶಿವರಾಜ್ ಕುಮಾರ್, ಭೈರತಿ ರಣಗಲ್ ಚಿತ್ರ ಆರು ವರ್ಷಗಳ ಹಿಂದೆ ಬಿಡುಗಡೆಯಾದ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಎಂದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಆದರೆ, 'ಮಫ್ತಿ' ಚಿತ್ರ ಮಾಡುವಾಗ ಈ ಚಿತ್ರದಲ್ಲಿ ನಟಿಸಬೇಕಾ? ಎಂಬ ಗೊಂದಲ ನನಗಿತ್ತು. ಏಕೆಂದರೆ, ಆ ಚಿತ್ರದಲ್ಲಿ ನನ್ನ ಪಾತ್ರ ಬರುವುದೇ ಮಧ್ಯಂತರ ಬಳಿಕ. ಶ್ರೀಮುರಳಿ ಈ ಚಿತ್ರದಲ್ಲಿ ಇನ್ನೊಂದು ಪಾತ್ರವನ್ನು ಮಾಡುತ್ತಿದ್ದರು. ಮುರಳಿ ನನ್ನ ಮಾವನ ಮಗ. ಇಲ್ಲ ಎನ್ನುವಂತೆಯೂ ಇರಲಿಲ್ಲ. ಹಾಗಿರುವಾಗ, ಏನು ಮಾಡುವುದು ಎಂಬ ಪ್ರಶ್ನೆ ಇದ್ದೇ ಇತ್ತು. ಅಂತಹ ಸಂದರ್ಭದಲ್ಲಿ ನರ್ತನ್ ಬಂದು ನೀವು ಈ ಪಾತ್ರ ಮಾಡಿ ಎಂದರು. ನನಗೊಂದು ಧೈರ್ಯ ಬಂತು. ಆನಂತರ "ಮಫ್ತಿ" ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ.
ಅಭಿನಯಿಸುವಾಗಲೇ ಅದೇನೋ ಆ ಪಾತ್ರವನ್ನು ಇಷ್ಟಪಡತೊಡಗಿದೆ. ಅದಕ್ಕೆ ಆ ಹೆಸರು ಸಹ ಕಾರಣ. ಈ ತರಹದ ಹೆಸರು ಕೇಳೋಕೆ ಸಾಧ್ಯ ಇಲ್ಲ. ಇನ್ನು, ಸಂಭಾಷಣೆ ಚೆನ್ನಾಗಿತ್ತು. ಅಲ್ಲಿದ್ದ ಭೈರತಿ ರಣಗಲ್‍ನ ಸಣ್ಣ ಕಥೆಯನ್ನು ಇಲ್ಲಿ ಬೆಳೆಸಿದ್ದಾರೆ. ಯಾಕೆ ಅವನು ಭೈರತಿ ರಣಗಲ್ ಆಗುತ್ತಾನೆ. ಜನರಿಗೆ ಯಾಕೆ ಅವನನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೇ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ನರ್ತನ್ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ಎಂದರು.
ಬಳಿಕ ಮಾತನಾಡಿದ ನಿರ್ದೇಶಕ ನರ್ತನ್, ಈ ಚಿತ್ರದಲ್ಲಿ ಶಿವಣ್ಣ ಕಪ್ಪು ಡ್ರೆಸ್ ಏಕೆ ಹಾಕುತ್ತಾರೆ ಎನ್ನುವುದನ್ನು ಹೇಳಲಾಗಿದೆ. ಚಿತ್ರ ನೋಡಿದಾಗ ಜನರಿಗೆ ಸಾಕಾಗಲಿಲ್ಲ. ಏಕೆಂದರೆ, ಶಿವಣ್ಣ ಅವರ ಪಾತ್ರ ಇಂಟರ್‍ವೆಲ್ ನಂತರ ಬರುತ್ತದೆ. ಈ ಪಾತ್ರವನ್ನು ಇಷ್ಟಕ್ಕೇ ಮುಗಿಸಬಾರದು, ಇದರ ಹಿನ್ನೆಲೆ ಏನಾದರೂ ಬರೆಯಬೇಕು ಎಂದಾಗ ರಣಗಲ್ ಹಿಂದಿನ ಕಥೆ ಸೃಷ್ಟಿಯಾಯಿತು. ಪೆನ್ ಹಿಡಿದಾಗ ಬಹಳ ಸಲೀಸಾಗಿ ಕಥೆ ಸೃಷ್ಟಿಯಾಯಿತು. ಭೈರತಿ ರಣಗಲ್ ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲಾಕ್ ಡ್ರೆಸ್ ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ. ಈ ಸಿನಿಮಾ ಬರೆದುಕೊಂಡು ಕಥೆ ಹೇಳಿದಾಗ, ಶಿವಣ್ಣ ಹಾಗೂ ಗೀತಕ್ಕ ಅವರು ಬೇರೇನೂ ಕೇಳಲಿಲ್ಲ. ಮಾಡು ಎಂದು ಹುರಿದುಂಬಿಸಿದರು. ಈಗಾಗಲೇ 70 ರಷ್ಟು ಚಿತ್ರ ಮುಗಿದಿದೆ ಎಂದರು.
ಈ ಚಿತ್ರದ ಬಗ್ಗೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ನಮ್ಮ ಚಿತ್ರ ಆಗಸ್ಟ್ 15 ರಂದು ತೆರೆಗೆ ಬರುತ್ತಿದೆ. ಆಗಸ್ಟ್ನಲ್ಲಿ ಸಾಲುಸಾಲು ರಜೆಗಳಿದೆ. ಸಾಮಾನ್ಯವಾಗಿ ಸತತವಾಗಿ ರಜೆ ಸಿಕ್ಕರೆ, ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ದೃಷ್ಟಿಯಿಂದ ಆಗಸ್ಟ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಶಿವರಾಜ್ ಕುಮಾರ್ ಜೋಡಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಛಾಯಾ ಸಿಂಗ್, ಬಾಲಿವುಡ್ ನಟ ರಾಹಿಲ್ ಬೋಸ್ಲೆ, ಮಧುಗೋಸಸ್ವಾಮಿ ಸೇರಿದಂತೆ ಸಾಕಷ್ಟು ಕಲಾವಿದರ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಈ ಚಿತ್ರವನ್ನ ಅದ್ಧೂರಿ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ.
ಇದನ್ನೂ ಓದಿ: ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್ ಫ್ಲೈ' ಬಿಡುಗಡೆಗೆ ಸಿದ್ಧ