'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಹಾಗೂ 'ಕವಲುದಾರಿ' ಜನಪ್ರಿಯತೆಯ ನಿರ್ದೇಶಕ ಹೇಮಂತ್ ರಾವ್, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಸಂಪಾದಿದ್ದಾರೆ. ಇವರ ಕಥೆ ಹೇಳುವಿಕೆಗೆ ನೋಡುಗರು ಮನಸೋತಿದ್ದಾರೆ. ಸದ್ಯ 69ನೇ ಫಿಲ್ಮ್ ಫೇರ್ ಆವಾರ್ಡ್ ಕಾರ್ಯಕ್ರಮದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ 6 ವಿಭಾಗಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಚಿತ್ರಕ್ಕೆ ಸಿಕ್ಕ ಫಿಲ್ಮ್ ಫೇರ್ ಅವಾರ್ಡ್ಸ್:
- ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ.
- ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್.
- ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ರುಕ್ಮಿಣಿ ವಸಂತ್.
- ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ಸಂಗೀತ ನಿರ್ದೇಶಕ ಚರಣ್ ರಾಜ್, (ನದಿಯೇ).
- ಅತ್ಯುತ್ತಮ ಹಿನ್ನೆಲೆ ಗಾಯಕ: ಕಪಿಲ್ ಕಪಿಲನ್ (ನದಿಯೇ ಓ ನದಿಯೇ)
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೀಲಕ್ಷ್ಮಿ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ).
ಹೈದರಾಬಾದ್‌ನ ಜೆಆರ್‌ಸಿ ಕನ್ವೆನ್ಷನ್ ಸೆಂಟರ್ನಲ್ಲಿ ಆಗಸ್ಟ್ 3, ಶನಿವಾರದಂದು 69ನೇ SOBHA ಫಿಲ್ಮ್ ಫೇರ್ ಅವಾರ್ಡ್ಸ್ ಜರುಗಿತು. ದಕ್ಷಿಣ ಚಿತ್ರರಂಗದ (ಕನ್ನಡ, ತೆಲುಗು, ತಮಿಳು, ಮಲಯಾಳಂ) ಪ್ರತಿಭೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಯಿತು. ಸೌತ್ ಸಿನಿಮಾ ಸ್ಟಾರ್ಸ್ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ತಮ್ಮ ಚಿತ್ರ ಆರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಖುಷಿಯಲ್ಲಿರುವ ಹೇಮಂತ್ ರಾವ್ 'ಈಟಿವಿ ಭಾರತ'ದ ಜೊತೆ ಅನಿಸಿಕೆ ಹಂಚಿಕೊಂಡರು. ''ಒಂದು ಕಥೆ ಬರೆಯಬೇಕಾದ್ರೆ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿರುತ್ತೇನೆ. ಹೆಚ್ಚಾಗಿ ಕಥೆಗಳನ್ನು ಓದುತ್ತೇನೆ. ಯಾವುದಾದರೊಂದು ವಿಷಯವನ್ನು ಸಿನಿಮಾ ಮಾಡಬೇಕೆಂದು ಅನ್ನಿಸುತ್ತದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕಥೆ ಹುಟ್ಟಿದ್ದು 2014-16ರ ಸಂದರ್ಭ. ನನ್ನ ಕಣ್ಮುಂದೆ ನಡೆದ ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ಅದು. ಆ ಘಟನೆ ನನ್ನ ಮನಸ್ಸಿನಲ್ಲಿ ಉಳಿದಿತ್ತು. ಅದನ್ನಿಟ್ಟುಕೊಂಡು ಸಿನಿಮಾ ಮಾಡಬೇಕೆಂದು ಅನಿಸಿತು. ನಾನು ಅಥವಾ ನನ್ನ ತಂಡ ಕಂಟೆಂಟ್ ಮೇಲೆ ವರ್ಕ್ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
"ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ಇಷ್ಟು ವಿಭಾಗಗಳಲ್ಲಿ ಪ್ರಶಸ್ತಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಪ್ರಶಸ್ತಿಗಾಗಿ ಸಿನಿಮಾ ಮಾಡುವ ಯೋಚನೆ ಇರುವುದಿಲ್ಲ. ಸಿನಿಮಾ ಪ್ರೇಕ್ಷಕರನ್ನು ರಂಜಿಸಬೇಕೆಂಬುದು ನಮ್ಮ ತಲೆಯಲ್ಲಿರುತ್ತದೆ. ನಮ್ಮ ಕೆಲಸ ಗುರುತಿಸಿ ಈ ರೀತಿಯ ಪ್ರಶಸ್ತಿಗಳನ್ನು ಕೊಟ್ಟಾಗ ಮತ್ತಷ್ಟು ಕಂಟೆಂಟ್ ಆಧರಿತ ಸಿನಿಮಾಗಳನ್ನು ಮಾಡಲು ಸ್ಫೂರ್ತಿ ಸಿಗುತ್ತದೆ" ಎಂದರು.
ಇದನ್ನೂ ಓದಿ: ಬರ್ತ್‌ಡೇ ಖುಷಿಯಲ್ಲಿ ಅಭಿಮಾನಿಗಳಿಗೆ ಮೂರು ಚಿತ್ರದ ಅಪ್ಡೇಟ್ಸ್ ಕೊಟ್ಟ ಮೇಘಾ ಶೆಟ್ಟಿ - Megha Shetty
"ಶಿವರಾಜ್ಕುಮಾರ್ ಜೊತೆ 'ಭೈರವನ ಕೊನೆಯ ಪಾಠ' ಸಿನಿಮಾ ಮಾಡುತ್ತಿರುವ ಹೇಮಂತ್ ಈ ಚಿತ್ರದ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲಿದ್ದೇವೆ. ಅದಕ್ಕಾಗಿಯೇ ದೊಡ್ಡ ಸಿನಿಮಾ ಸೆಟ್ಗಳನ್ನು ಹಾಕುತ್ತಿದ್ದೇವೆ. ಈ ವರ್ಷದ ಕೊನೆಗೆ ಶೂಟಿಂಗ್ ಶುರು ಮಾಡಬೇಕೆಂಬ ಪ್ಲ್ಯಾನ್ ಹಾಕಿಕೊಂಡಿದ್ದೇವೆ" ಎಂದು ತಿಳಿಸಿದರು.
ಹೇಮಂತ್ ರಾವ್ ಸಾರಥ್ಯದ ಈ ಚಿತ್ರ ಕಳೆದ ಸೆಪ್ಟೆಂಬರ್ 1ರಂದು ತೆರೆಗಪ್ಪಳಿಸಿತ್ತು. ರುಕ್ಷಿಣಿ ವಸಂತ್, ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯ ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದೆ. 20 ಕೋಟಿ ಬಜೆಟ್ನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿದೆ.