ನಾಳೆ ತೆರೆಗಪ್ಪಳಿಸಲಿರುವ ಡಾಲಿ ಧನಂಜಯ್ ಅಭಿನಯದ 'ಕೋಟಿ' ಸಿನಿಮಾ ಪ್ರೀಮಿಯರ್ ಶೋ ಇತ್ತೀಚೆಗೆ ಓರಾಯನ್ ಮಾಲ್‌ನಲ್ಲಿ ನಡೆದಿತ್ತು. ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಸಿನಿಮಾ ವೀಕ್ಷಿಸಿದರು.
ಈ ಸಿನಿಮಾ ನಿರ್ದೇಶಿಸಿರುವ ಪರಮ್ ಅವರು ದಶಕಗಳ ಕಾಲ ಕಲರ್ಸ್ ಕನ್ನಡ ವಾಹಿನಿ ಮುನ್ನಡೆಸಿದವರು. ಕಿರುತೆರೆ ಮತ್ತು ಹಿರಿತೆರೆಯ ಎಲ್ಲೆಡೆ ಇವರಿಗೆ ಸ್ನೇಹಿತರಿದ್ದಾರೆ. ಇದೇ ಕಾರಣಕ್ಕೆ ತಾರೆಗಳಿಗಾಗಿ ಎರಡು ಪ್ರೀಮಿಯರ್ ಶೋ ಆಯೋಜಿಸಿದ್ದರು. ಸಾರ್ವಜನಿಕರಿಗೆ ಪೇಯ್ಡ್ ಪ್ರೀಮಿಯರ್ ಶೋ ಸೇರಿ ಮೂರು ಪರದೆಗಳು ಹೌಸ್‌ಫುಲ್ ಆಗಿದ್ದವು. ಸಾವಿರಕ್ಕಿಂತಲೂ ಹೆಚ್ಚು ಜನರು ಆಗಮಿಸಿ ಸಿನಿಮಾ ವೀಕ್ಷಿಸಿದರು.
ಸಿನಿಮಾದಲ್ಲಿ ಧನಂಜಯ್ ಎಂಟ್ರಿ ವೇಳೆ ಶಿಳ್ಳೆ, ಕೇಕೆ ಜೋರಾಗಿತ್ತು. ಒಂದು ದೃಶ್ಯಕ್ಕೆ ಇಡೀ ಚಿತ್ರಮಂದಿರವೇ ಹರ್ಷೋದ್ಘರಿಸಿದರೆ, ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸಿತ್ತು. ಸಿನಿಮಾ ಮುಗಿಯುತ್ತಿದ್ದಂತೆ ಮುಖ್ಯ ಪರದೆಯಲ್ಲಿ ಪ್ರೇಕ್ಷಕರೊಬ್ಬರು ಓಡಿ ಬಂದು ನಿರ್ದೇಶಕರನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದರು.
ಟಿ.ಎನ್.ಸೀತಾರಾಂ, ಜೋಗಿ, ಹೇಮಂತ್ ರಾವ್, ಕಿರಣ್ ರಾಜ್, ಆರ್.ಚಂದ್ರು, ಸತೀಶ್ ನೀನಾಸಂ, ನವೀನ್ ಶಂಕರ್, ಮಂಜು ಪಾವಗಡ, ಬಿಗ್ ಬಾಸ್ ವಿನ್ನರ್ ಕಾರ್ತಿಕ್, ದಿವ್ಯಾ ಉರುಡುಗ, ಅರವಿಂದ್ ಕೆ.ಪಿ., ಶೈನ್ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ವೀಕ್ಷಿಸಿದರು.

ಬುಕಿಂಗ್ಸ್ ಈಗಾಗಲೇ ಓಪನ್ ಆಗಿದೆ. ಇಂದು ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಧನಂಜಯ್ ಮತ್ತು ಸಿನಿಮಾ ತಂಡ ಮೈಸೂರಿನ ಸಿನಿಪ್ರೇಮಿಗಳೊಂದಿಗೆ 'ಕೋಟಿ' ನೋಡಲಿದೆ. ನಾಳೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮರಿಕ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.
'ಕೋಟಿ' ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೇ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆ ಮೂಡಿಸಿದೆ.
ಇದನ್ನೂ ಓದಿ: ಡಾಲಿಯ ಮನ ಮನ ಹಾಡಿಗೆ ಮನಸೋತ ಅಭಿಮಾನಿಗಳು: 'ಕೋಟಿ' ಬಿಡುಗಡೆಗೆ ಇನ್ನೊಂದೇ ದಿನ ಬಾಕಿ - Kotee Movie
ತಾರಾಗಣದಲ್ಲಿ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿವೆ. ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆ ಗಳಿಸಿದ್ದ ಪ್ರತೀಕ್ ಶೆಟ್ಟಿ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಕ್ಯಾಮರಾಮನ್.
ಇದನ್ನೂ ಓದಿ: 'ಕೋಟಿ': ಡಾಲಿ ವೃತ್ತಿಜೀವನದಲ್ಲೇ ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರ - Kotee Movie
ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ನಾಳೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿ ಬಿಡುಗಡೆಯಾಗಲಿದೆ.