ಸಂಭಾವಮಿ ಯುಗೇ ಯುಗೇ ಸಿನಿಮಾದ "ಡೋಲು ತಮಟೆ ವಾದ್ಯ" ಎಂಬ ಜಾನಪದ ಶೈಲಿಯ ಹಾಡನ್ನು ನಟಿ ಶ್ರುತಿ ಹರಿಹರನ್ ಬಿಡುಗಡೆ ಮಾಡಿ ಶುಭ ಕೋರಿದರು. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ. ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಜಯ್ ಶೆಟ್ಟಿ ಹಾಗೂ ನಿಶಾರಜಪೂತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಇದೊಂದು ಕಮರ್ಷಿಯಲ್ ಥ್ರಿಲ್ಲರ್ ನ ಸಿನಿಮಾವಾಗಿದೆ. ನಾನು ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೆ. ಇದೊಂದು ಹಳ್ಳಿ ಹಿನ್ನೆಲೆಯ ಚಿತ್ರ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲಸಬೇಕು ಎಂಬುದೇ ಚಿತ್ರದ ಕಥಾ ಸಾರಾಂಶ ಎಂದು ಹೇಳಿದರು.
ನಾಯಕ ಜಯ್ ಶೆಟ್ಟಿ ಮಾತನಾಡಿ, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಧನ್ಯವಾದಗಳು ಎಂದರು.
ನಾಯಕಿ ನಿಶಾ ರಜಪೂತ್ ಮಾತನಾಡಿ, ನಾನು ಬಿಜಾಪುರ ಮೂಲದವಳು. ಆದರೆ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಒಂಬತ್ತು ವರ್ಷಗಳ ಕಾಲ ಮಾಡಲಿಂಗ್ ಮಾಡಿದ್ದೇನೆ. ಹೀಗಿರುವಾಗಲೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನನ್ನ ಭಾಷೆ ಮತ್ತು ನಟನೆಯನ್ನು ತಿದ್ದಿತೀಡಿದ ನಿರ್ದೇಶಕ ಚೇತನ್ ಶೆಟ್ಟಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಚಿತ್ರದಲ್ಲಿ ನಟಿಸಿರುವ ರಾಜೇಂದ್ರ ಕಾರಂತ್, ಅಶ್ವಿನ್ ಹಾಸನ್, ವಿಕ್ಟರಿ ವಾಸು, ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ, ಕಾರ್ಯಕಾರಿ ನಿರ್ಮಾಪಕ ದಿನೇಶ್ ರಾಜನ್ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಹಾಜರಿದ್ದರು.
ಈ ಸಿನಿಮಾದಲ್ಲಿ ರಾಜೇಂದ್ರ ಕಾರಂತ್, ಅಶ್ವಿನ್ ಹಾಸನ್, ವಿಕ್ಟರಿ ವಾಸು, ಅಶೋಕ್ ಕುಮಾರ್ ಹಾಗೂ ಮಧುರಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣವಿದ್ದು, ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ದಿನೇಶ್ ರಾಜನ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿರುವ ಸಂಭವಾಮಿ ಯುಗೇ ಯುಗೇ ಚಿತ್ರ ಜೂನ್ 21ಕ್ಕೆ ಚಿತ್ರ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ 'ಗೌರಿ' ಚಿತ್ರಕ್ಕೆ ಕನ್ನಡದ ಸ್ಟಾರ್ ಕ್ರಿಕೆಟರ್ ಸಾಥ್ - Gauri film