ಹೈದರಾಬಾದ್: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ / ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಾಲಿವುಡ್ ಹೇಗೆ ಚಿತ್ರಿಸುತ್ತಿದೆ ಎಂಬುದರ ಬಗ್ಗೆ ನೀಡಿದ್ದ ಹೇಳಿಕೆಗಳು ವಿವಾದದ ಕೇಂದ್ರ ಬಿಂದುವಾಗಿದ್ದವು. ಸಂದರ್ಶನವೊಂದರಲ್ಲಿ ಅವರು ನೀಡಿದ್ದ ಕಾಮೆಂಟ್‌ಗಳು ಬಹುತೇಕರ ಹುಬ್ಬೇರಿಸಿತ್ತು. ಅದರಲ್ಲೂ ಬಾಲಿವುಡ್ ಬೆಂಬಲಿಗರಿಂದ ಟೀಕೆಗಳನ್ನು ಸ್ವೀಕರಿಸಿತ್ತು.
ಈ ಹಿಂದೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ, "ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್, ಭಾರತವನ್ನು ಕೆಟ್ಟದಾಗಿ ತೋರಿಸಿವೆ. ಈ ಕಲಾತ್ಮಕ ಚಲನಚಿತ್ರಗಳನ್ನು ಜಾಗತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು ರೆಡ್ ಕಾರ್ಪೆಟ್ ಮಹತ್ವ ನೀಡಲಾಗುತ್ತದೆ. ನನ್ನ ರಾಷ್ಟ್ರ, ನನ್ನ ರಾಜ್ಯ, ನನ್ನ ಭಾಷೆ - ನನ್ನ ಹೆಮ್ಮೆ. ಜಾಗತಿಕವಾಗಿ ಇವನ್ನು ಪಾಸಿಟಿವ್ ಆಗಿ ಏಕೆ ತೋರಿಸಬಾರದು? ನಾನದನ್ನು ಮಾಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದರು. ಡಿವೈನ್ ಸ್ಟಾರ್ನ ಈ ಹೇಳಿಕೆ ವ್ಯಾಪಕವಾಗಿ ವೈರಲ್ ಆಗಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು.
ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ, ರಿಷಬ್ ಶೆಟ್ಟಿ ಐಫಾ (IIFA Utsavam 2024) ಈವೆಂಟ್ನಲ್ಲಿ ಈ ಬಗ್ಗೆ ಮಾತನಾಡಿದರು. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು. "ಮೇ ಕ್ಯಾ ಬೋಲಾ ತಾ, ವೋ ಥೋಡಾ ಇದರ್ ಉದರ್ ಹೋ ಗಯಾ" ಎಂದು ಸ್ಪಷ್ಟಪಡಿಸಿದರು. ಸೂಕ್ತ ಸ್ಥಳದಲ್ಲಿ ಸ್ಪಷ್ಟೀಕರಣ ಅಥವಾ ವಿವರಣೆ ಒದಗಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: 172 ಕೋಟಿ ಸಂಪಾದಿಸಿದ 'ದೇವರ': ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ನಾಲ್ಕನೇ ಸಿನಿಮಾ - Devara Collection
ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ 2024ರಲ್ಲಿ, ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ''ಔಟ್ಸ್ಟ್ಯಾಂಡಿಗ್ ಎಕ್ಸಲೆನ್ಸ್ ಇನ್ ಕನ್ನಡ ಸಿನಿಮಾ'' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 2022ರ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರದಲ್ಲಿನ ಅಮೋಘ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಹೀಗೆ ಪ್ರತಿಷ್ಠಿತ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿರುವ ರಿಷಬ್ ಅವರಿಗೀಗ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ ಕೂಡಾ ಲಭಿಸಿದೆ.
ಇದನ್ನೂ ಓದಿ: ರಾಕಿಭಾಯ್ ''ಟಾಕ್ಸಿಕ್'' ಚಿತ್ರದಲ್ಲಿ ಹಾಲಿವುಡ್, ಟಾಲಿವುಡ್ ನಟರು? - Yash Toxic Updates
ರಿಷಬ್ ಶೆಟ್ಟಿ ನಟನಾ ಪ್ರಯಾಣ 2012ರಲ್ಲಿ 'ತುಗ್ಲಕ್' ಮೂಲಕ ಪ್ರಾರಂಭವಾಯಿತು. 2016ರ ರಿಕಿ ಮೂಲಕ ಜನಪ್ರಿಯರಾದರು. ಆದ್ರೆ 2022ರ ಸೆಪ್ಟೆಂಬರ್ ಕೊನೆಗೆ ಬಂದ ಕಾಂತಾರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತು. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ಜನಪ್ರಿಯತೆ ನೂರು ಪಟ್ಟು ಹೆಚ್ಚಾಯಿತು. ಇದೀಗ ಕಾಂತಾರ ಚಾಪ್ಟರ್ 1ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲೂ ರಿಷಬ್ ಶೆಟ್ಟಿ ನಿರ್ದೇಶಕ ಮತ್ತು ನಾಯಕ ನಟನಾಗಿ ಮುಂದುವರಿಯಲಿದ್ದಾರೆ. ಕದಂಬರ ಕಾಲದ ಪಂಜುರ್ಲಿ ದೈವದ ದಂತಕಥೆಯನ್ನು ತೆರೆಮೇಲೆ ತರುವ ಪ್ರಯುತ್ನ ನಡೆಯುತ್ತಿದೆ.