ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಯಶಸ್ಸಿನಲೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಹನಟ ರಣ್ಬೀರ್ ಕಪೂರ್ ಅವರ ಜೊತೆ ಹಿಮದಿಂದ ಆವೃತವಾಗಿರುವ ಮನಾಲಿಯಲ್ಲಿ ನಡೆದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಹುವಾ ಮೈನ್ ಹಾಡನ್ನು ಹಿಮಾವೃತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು. ರಶ್ಮಿಕಾ ಮತ್ತು ರಣ್ಬೀರ್ ಅವರ ಮದುವೆ ದೃಶ್ಯವನ್ನು ಮನಾಲಿಯಲ್ಲಿ ಸೆರೆಹಿಡಿಯಲಾಗಿತ್ತು. ನಟಿ ಸೀರೆ ಮತ್ತು ಕುರ್ತಾ ಉಡುಪು ಧರಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ.
ಹಿಮಾವೃತ ಪ್ರದೇಶದಲ್ಲಿ, ಮೈ ಕೊರೆಯುವ ಚಳಿಯಲ್ಲಿ ಕೇವಲ ಸೀರೆ ಉಟ್ಟುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅನುಭವವನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಮನಾಲಿಯ ಚಳಿಯಲ್ಲಿ ನಾನು ಮಾತ್ರವಲ್ಲ, ರಣ್ಬೀರ್ ಕೂಡ ತೆಳು ಉಡುಪು ಧರಿಸಿದ್ದಕ್ಕೆ ನನಗೆ ಸಮಾಧಾನವಾಗಿತ್ತು ಎಂದು ತಿಳಿಸಿದರು. ''ಈ ಇಬ್ಬರೂ (ಚಿತ್ರದ ಪ್ರಮುಖ ಪಾತ್ರಧಾರಿಗಳು) ಮನೆಯಿಂದ ಓಡಿಹೋಗಿ ಅಸಾಮಾನ್ಯ ಸ್ಥಳದಲ್ಲಿ ಮದುವೆಯಾಗುವ ಸೀನ್ ಅನ್ನು ನಿರ್ದೇಶಕರು ಬಯಸಿದ್ದರು. ಕೇವಲ ಸೀರೆ ಉಟ್ಟುಕೊಂಡಾಗ ನಾನು ಮಾತ್ರ ಚಳಿ ಅನುಭವಿಸಿಲ್ಲ, ಅವರೂ (ರಣ್ಬೀರ್) ಕೂಡ ಚಳಿಯಲ್ಲಿ ನಡುಗುತ್ತಿದ್ದಾರೆ ಎಂಬುದನ್ನು ತಿಳಿದ ನನಗೆ ಒಳಗೊಳಗೆ ಸಮಾಧಾನವಾಗಿತ್ತು'' ಎಂದು ತಮಾಷೆಯಾಗಿ ಟೀಕಿಸಿದರು.
ಹಿಮಾವೃತ ಪ್ರದೇಶದಲ್ಲಿ ಶೂಟಿಂಗ್ ನಡೆಸುವುದರ ಸುತ್ತಲಿನ ಕಷ್ಟಗಳ ಬಗ್ಗೆ ಕೂಡ ರಶ್ಮಿಕಾ ಚರ್ಚಿಸಿದರು. "ಹಿಮದ ಮೇಲೆ ಹೋದಾಗ, ಚರ್ಮ ಮಸುಕಾಗುತ್ತದೆ. ಹಾಗಾಗಿ, ಮೇಕಪ್ ಆರ್ಟಿಸ್ಟ್ ಕಲಾವಿದರು ಹೆಚ್ಚು ಕಾಂತಿಯುತವಾಗಿ ಕಾಣಲು ಹೆಚ್ಚು ಮೇಕಪ್ ಮಾಡುತ್ತಾರೆ. ನೀವು ಕೋಣೆಯಲ್ಲಿ ಸಿದ್ಧರಾಗಿ ಎಂದು ಹೇಳಿ ಹೋಗುತ್ತಾರೆ. ಮತ್ತೆ ಬಂದು ನೋಡಿದಾಗ ನಮ್ಮ ಮುಖ ಡಲ್ ಆಗಿರುತ್ತದೆ. ಅಷ್ಟೊಂದು ಮೇಕಪ್ ಮಾಡಿದ್ದೇವೆ, ನಿಮ್ಮ ಮೇಕಪ್ ಏನಾಯಿತು ಎಂದು ನಮ್ಮನ್ನು ಪ್ರಶ್ನಿಸುತ್ತಾರೆ. ಆ ಥಂಡಿ, ರಕ್ತದ ಹರಿವನ್ನು ನಿಧಾನಗೊಳಿಸುವ ಹಿನ್ನೆಲೆ ಹೀಗಾಗುತ್ತದೆ'' ಎಂದು ಸಂದರ್ಶನದಲ್ಲಿ ಮಂದಣ್ಣ ವಿವರಿಸಿದರು.
ಇದನ್ನೂ ಓದಿ: ಮತ್ತೆ ಟಿವಿಯಲ್ಲಿ ಪ್ರಸಾರವಾಗಲಿದೆ ರಮಾನಂದ್ ಸಾಗರ್ ಅವರ 'ರಾಮಾಯಣ'
ಹೇರ್ ಸ್ಟೈಲ್ ಮಾಡುವಾಗ ಸ್ಟೈಲಿಸ್ಟ್‌ಗಳಿಗೂ ಸಮಸ್ಯೆಗಳಾಗುತ್ತವೆ. ನಕಲಿ ಕೂದಲು ಅಲಂಕಾರಿಕವಾಗಿರುತ್ತದೆ. ಆ ಥಂಡಿಗೆ ಕೂದಲೂ ಸಹ ಸರಿಯಾಗಿ ಸೆಟ್ ಆಗುವುದಿಲ್ಲ. ಹೆಚ್ಚಿನ ಸಮಯ ಅದನ್ನು ಸರಿಮಾಡಲು ಬೇಕಾಗುತ್ತದೆ. ಸ್ಟೈಲಿಸ್ಟ್‌ಗಳು, ಮೇಕ್ ಅಪ್ ಆರ್ಟಿಸ್ಟ್ ಎಷ್ಟೇ ಪ್ರಯತ್ನಪಟ್ಟರೂ ಸೆಟ್ ಆಗೋದು ಬಹಳ ಕಷ್ಟ. ಆ ಸಂದರ್ಭ ನಮಗೆ ಚಳಿಯಲ್ಲಿ ಫ್ರೀಝ್ ಆದಂತ ಅನುಭವವಾಗುತ್ತದೆ. ದಯವಿಟ್ಟು ನನ್ನ ಜಾಕೆಟ್ ಕೊಡಿ ಎಂಬ ಪರಿಸ್ಥಿತಿಯಲ್ಲಿ ನಾವಿರುತ್ತೇವೆ ಎಂದು ಶೂಟಿಂಗ್ ಸಮಸ್ಯೆಗಳನ್ನು ವಿವರಿಸಿದರು.
ಇದನ್ನೂ ಓದಿ: ಅಭಿಮಾನಿಗಳಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ಮನವಿ: ಏನದು?
ಅನಿಮಲ್ 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲೊಂದು. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತಾದರೂ, ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 900 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶ ಕಂಡಿದೆ. ಚಿತ್ರದಲ್ಲಿ ರಣ್ಬೀರ್, ರಶ್ಮಿಕಾ ಹೊರತಾಗಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಮತ್ತೊಂದು ಬಾಲಿವುಡ್ ಸಿನಿಮಾವಿದೆ. ಚಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸಲಿದ್ದಾರೆ. ಅಲ್ಲದೇ ಪುಷ್ಪಾ 2, ದಿ ಗರ್ಲ್ಫ್ರೆಂಡ್, ರೈನ್ಬೋ ಸಿನಿಮಾಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ.