ರಮಾನಂದ್ ಸಾಗರ್ ಅವರ 'ರಾಮಾಯಣ'ದಲ್ಲಿ ಲಕ್ಷ್ಮಣನ ಪಾತ್ರ ವಹಿಸಿದ್ದ ನಟ ಸುನಿಲ್ ಲಹ್ರಿ ಅವರು 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ ಎಂದು ಉಲ್ಲೇಖಿಸಿ, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಶೇರ್ ಮಾಡಿರುವ ವಿಡಿಯೋದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಡೆತಡೆಗಳನ್ನು ಎದುರಿಸದೇ ತನ್ನ ಅವಧಿಯನ್ನು ಪೂರ್ಣಗೊಳಿಸಬಹುದೇ ಎಂಬುದಾಗಿಯೂ ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲೇನಿದೆ? ''2024ರ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ನಿರಾಶೆಗೊಂಡಿದ್ದೇನೆ. ಮತದಾನ ಕಡಿಮೆಯಾಗಿದೆ. ಅಲ್ಲದೇ ಫಲಿತಾಂಶ ಈ ರೀತಿ ಇದೆ. ಈ ಸರ್ಕಾರ ಐದು ವರ್ಷ ಸುಗಮವಾಗಿ ಸಾಗಲು ಸಾಧ್ಯವೇ?'' ಎಂದು ಪ್ರಶ್ನಿಸಿದ್ದಾರೆ.
ಫೈಜಾಬಾದ್ ಲೋಕಸಭಾ ಕ್ಷೇತ್ರದ ಅಯೋಧ್ಯೆಯ ಮತದಾರರನ್ನು ಸಹ ನಟ ಟೀಕಿಸಿದ್ದಾರೆ. ಇಲ್ಲಿ, ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಲಲ್ಲು ಸಿಂಗ್ 59,000 ಮತಗಳ ಅಂತರದಿಂದ ಸೋಲಿನ ರುಚಿ ಕಂಡಿದ್ದಾರೆ. ನಗರದ ಇತಿಹಾಸ ಮತ್ತು ಪ್ರಸ್ತುತ ರಾಜಕೀಯ ಆಯ್ಕೆ ಬಗ್ಗೆ ಒತ್ತಿ ಹೇಳಿದ್ದಾರೆ. ಅಯೋಧ್ಯೆ ನಿವಾಸಿಗಳು ತಮ್ಮ ನಾಯಕರಿಗೆ ದ್ರೋಹ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆಂದು ತಿಳಿಸಿದರು.
ಅದಾಗ್ಯೂ, ಮತ್ತೆರಡು ಕ್ಷೇತ್ರಗಳ ಇಬ್ಬರು ಅಭ್ಯರ್ಥಿಗಳ ಗೆಲುವಿನ ಖುಷಿಯನ್ನೂ ಹಂಚಿಕೊಂಡರು. ನಟ, ಮಹಿಳಾ ಸಬಲೀಕರಣದ ಪ್ರತೀಕವೆಂದೇ ಭಾವಿಸಿರುವ ನಟಿ ಕಂಗನಾ ರಣಾವತ್ ಅವರರನ್ನು ಅಭಿನಂದಿಸಿದರು. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೂನ್ 9ರಂದು ಮೋದಿ ಪದಗ್ರಹಣ ಸಾಧ್ಯತೆ: ಪಾಕ್ ಬಿಟ್ಟು ನೆರೆದೇಶಗಳಿಗೆ ಆಹ್ವಾನ - Modi Oath Taking Ceremony
ಅಲ್ಲದೇ, ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ್ದ ಮತ್ತು ಮೀರತ್ ಲೋಕಸಭಾ ಕ್ಷೇತ್ರದಿಂದ ಈ ಚುನಾವಣೆಯಲ್ಲಿ ರಾಜಕೀಯಕ್ಕೆ ಪ್ರವೆಶಿಸಿದ ತಮ್ಮ ಸಹನಟ - ಸ್ನೇಹಿತ ಅರುಣ್ ಗೋವಿಲ್ ಅವರ ಯಶಸ್ಸಿಗೆ ಅಪಾರ ಖುಷಿ ವ್ಯಕ್ತಪಡಿಸಿದರು. ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಇನ್ನು, ಜೂನ್ 4ರಂದು ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವಲ್ಲಿ ಯಶ ಕಂಡಿದೆ. ಬುಧವಾರ ಮೈತ್ರಿಕೂಟದ ನಾಯಕರ ಸಭೆ ಸೇರಿ ಮೋದಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಜೂನ್ 9ರಂದು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.