ಟೀಸರ್, ಹಾಡುಗಳ ಮೂಲಕ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿರುವ 'ಹಿರಣ್ಯ' ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಇತ್ತೀಚಿಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ನಟ ಡಾಲಿ ಧನಂಜಯ್, ನಟಿ ರಾಗಿಣಿ ದ್ವಿವೇದಿ ವಿಶೇಷ ಅತಿಥಿಯಾಗಿ ಭಾಗಿಯಾಗಿ ನಾಯಕ ರಾಜವರ್ಧನ್ ಅವರ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಿದರು. ಈವೆಂಟ್ನಲ್ಲಿ ಇಡೀ ಹಿರಣ್ಯ ತಂಡ ಭಾಗಿಯಾಗಿತ್ತು.
ಟ್ರೇಲರ್ ಬಿಡುಗಡೆ ಬಳಿಕ ನಟ ಡಾಲಿ ಧನಂಜಯ್ ಮಾತನಾಡಿ, ಹಿರಣ್ಯ ಹಾಗೂ ರಾಜು ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ರಾಜವರ್ಧನ್ ನನಗೆ 10 ವರ್ಷಗಳಿಂದ ಪರಿಚಿತರು. 2013ರ ಸಂದರ್ಭ ಇಬ್ಬರೂ ಸಿನಿಮಾವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದೆವು. ಆದರೆ ಸಿನಿಮಾವಾಗಲಿಲ್ಲ. ಜೆ.ಪಿ.ನಗರ, ಜಯನಗರಕ್ಕೆ ಬಂದಾಗಲೆಲ್ಲಾ ಸಿಗುತ್ತಾರೆ. ಜರ್ನಿ ನೆನಪು ಮಾಡಿಕೊಂಡಾಗ ಅಂದಿನಿಂದ ಈವರೆಗೂ ನಟನಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಒಳ್ಳೆ ಬರವಣಿಗೆ, ಸ್ಕ್ರಿಪ್ಟ್, ನಿರ್ದೇಶಕರು, ಅದನ್ನು ಅಷ್ಟೇ ಚೆನ್ನಾಗಿ ಪ್ರೀತಿಸುವ ನಿರ್ಮಾಪಕರು ಇದ್ದಾಗ ಮಾತ್ರ ಒಳ್ಳೆ ಸಿನಿಮಾವಾಗುತ್ತದೆ. ರಾಜವರ್ಧನ್ ಅವರ 'ಹಿರಣ್ಯ' ಸಿನಿಮಾ ಮೂಲಕ ಒಳ್ಳೆ ಶುಕ್ರವಾರ ಸಿಗಲಿ. ನಿರ್ಮಾಪಕರು ತುಂಬಾ ಫ್ಯಾಷನೇಟೆಡ್ ಇದ್ದಾರೆ. ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಟಿ ರಾಗಿಣಿ ದ್ವಿವೇದಿ ಮಾತನಾಡಿ, "ಹೊಸ ತಂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗುತ್ತಿದ್ದು ಬಹಳ ಖುಷಿಯಾಗುತ್ತಿದೆ. ಟ್ಯಾಲೆಂಟೆಂಡ್ ಟೀಂ ಎಂಟ್ರಿಯಾಗುತ್ತಿರುವ ಖುಷಿ. ಹೊಸದಾಗಿ ಸಿನಿಮಾ ಮಾಡುವುದು ತುಂಬಾನೇ ಚಾಲೆಂಜಿಂಗ್ ಕೆಲಸ. ಹೊಸದಾಗಿ ಪ್ರಯತ್ನ ಮಾಡುವುದು ಸುಲಭವಲ್ಲ. ಬೇರೆ ಇಂಡಸ್ಟ್ರಿಗೆ ಹೋಲಿಕೆ ಮಾಡಿದರೆ ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸಬರಿಗೆ ಸಾಕಷ್ಟು ಅವಕಾಶವಿದೆ. ರಾಜ್ ಹೊಸಬಗೆಯ ಪಾತ್ರ ಮಾಡುತ್ತಾರೆ. ನನಗೆ ಹೆಮ್ಮೆ ಎನಿಸುತ್ತದೆ. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದು ತಿಳಿಸಿದರು.
ನಟ ರಾಜವರ್ಧನ್ ಮಾತನಾಡಿ, "ಶಿವಣ್ಣ ಟ್ರೇಲರ್ ನೋಡಿ ಇಷ್ಟಪಟ್ಟು ಮನೆಗೆ ಕರೆಸಿ ಇಡೀ ತಂಡಕ್ಕೆ ಒಳ್ಳೆ ಉಪಚಾರ ಮಾಡಿದ್ದು ಖುಷಿಯಾಯ್ತು. ಹಿರಣ್ಯ ಒಳ್ಳೆ ಸ್ಟೋರಿ ಲೈನ್. ನಾನು ಅದನ್ನು ನಂಬಿದೆ. ಒಳ್ಳೆ ಸಿನಿಮಾವಾಗಿದೆ. ಸಿನಿಮಾಗೆ ಒಳ್ಳೆ ಟೈಟಲ್ ಬೇಕಿತ್ತು. ಅದು ಧನು ಬಳಿ ಇತ್ತು. ಅವರು ಅದನ್ನು ಕೇಳಿದ ತಕ್ಷಣ ಕೊಟ್ಟರು. ಎಲ್ಲೂ ಏನೂ ಮೋಸವಾಗದೇ ಸಿನಿಮಾ ಮಾಡಿದ್ದೇವೆ. ಧನು ಧನ್ಯವಾದಗಳು. ನಮ್ಮ ನಿರ್ಮಾಪಕರು ವಿಜಿ ನಾನು ತುಂಬಾನೇ ಕಿತ್ತಾಡಿದ್ದೇವೆ. ಪ್ರೊಡ್ಯೂಸರ್ ಬಹಳ ಕನಸು ಇಟ್ಟುಕೊಂಡು ಬಂದಿದ್ದಾರೆ. ಅವರು ಹಾಕಿದ ದುಡ್ಡು ರಿರ್ಟನ್ ಆಗಬೇಕು. ಇದು ನಮ್ಮ ಜವಾಬ್ದಾರಿ. ನಿರ್ದೇಶಕರು ಹೊಸ ಕನಸು ಇಟ್ಟುಕೊಂಡು ಬಂದಿದ್ದಾರೆ. ಹೊಸತಂಡ ಸಿನಿಮಾ ಕಲಿತು ಮಾಡಿದ್ದಾರೆ. ಇಡೀ ತಂಡ ಶ್ರಮ ಹಾಕಿ ಚಿತ್ರ ಮಾಡಿದ್ದೇವೆ" ಎಂದರು.
ಇದನ್ನೂ ಓದಿ: ರೂಪಾರಾವ್ ನಿರ್ಮಾಣದ 'ಕೆಂಡ'ದಲ್ಲಿ ಕಂಡರಿಯದ ಕಥೆ! - Kenda Trailer
ನಿರ್ದೆಶಕ ಪ್ರವೀಣ್ ಅವ್ಯೂಕ್, ಕ್ರೂರ ಗುಣ ಹೊಂದಿದ ಪಾತ್ರವನ್ನಿಟ್ಟುಕೊಂಡು ಹಿರಣ್ಯ ಸಿನಿಮಾದ ಕಥೆ ಹೆಣೆದಿದ್ದಾರೆ. ಈ ಹಿಂದೆ ಬಿಚ್ಚುಗತ್ತಿ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ರಾಜವರ್ಧನ್ ನಾಯಕನಾಗಿ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಅಭಿಮಾನಿ ದೇವರುಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಮನವಿ: ಏನದು ಗೊತ್ತಾ? - Shiva Rajukumar Birthday
ವೇದಾಸ್ ಇನ್ಫಿನಿಟಿ ಪಿಚ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಇದೇ ಜುಲೈ 19ಕ್ಕೆ ಹಿರಣ್ಯ ಸಿನಿಮಾ ತೆರೆಗೆ ಬರಲಿದೆ. ಜಾಕ್ ಮಂಜು ಒಡೆತನದ ಶಾಲಿನಿ ಆರ್ಟ್ಸ್ ರಾಜ್ಯಾದ್ಯಂತ ಸಿನಿಮಾವನ್ನು ವಿತರಣೆ ಮಾಡಲಿದೆ.